Asianet Suvarna News Asianet Suvarna News

6 ವರ್ಷ ತುಂಬಿದ್ದರೆ ಮಾತ್ರ 1ನೇ ಕ್ಲಾಸ್‌ಗೆ ಪ್ರವೇಶ..!

5 ವರ್ಷ 10 ತಿಂಗಳ ವಯೋಮಿತಿ ರದ್ದುಗೊಳಿಸಿ ಸರ್ಕಾರ ಆದೇಶ, ಮುಂದಿನ ವರ್ಷದಿಂದ ಜಾರಿ, ಪೋಷಕರಿಂದ ತೀವ್ರ ವಿರೋಧ

Admission to 1st Class After Complete 6 Years in Karnataka grg
Author
Bengaluru, First Published Jul 27, 2022, 8:23 AM IST

ಬೆಂಗಳೂರು(ಜು.27):  ರಾಜ್ಯದ ಶಾಲೆಗಳಲ್ಲಿ 1ನೇ ತರಗತಿಗೆ ಮಕ್ಕಳನ್ನು ದಾಖಲಿಸಲು ಆಯಾ ಶೈಕ್ಷಣಿಕ ವರ್ಷದ ಜೂನ್‌ 1ಕ್ಕೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೊಸ ವಯೋಮಿತಿ ನಿಗದಿಪಡಿಸಿ ಆದೇಶ ಮಾಡಿದೆ. ಆದರೆ, ‘ಈ ಆದೇಶ, ಈ ಶೈಕ್ಷಣಿಕ ವರ್ಷದಲ್ಲಲ್ಲ, ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದರ ಬೆನ್ನಲ್ಲೇ, ಪೋಷಕರ ವಲಯ ಈ ಆದೇಶ ವಿರೋಧಿಸಿದೆ. ‘ಈ ಆದೇಶವೇ ಅವೈಜ್ಞಾನಿಕ. ಮಕ್ಕಳ ದಾಖಲಾತಿಗೆ ಇದರಿಂದ ತೀವ್ರ ಸಮಸ್ಯೆಯಾಗುತ್ತದೆ. ಹಾಗಾಗಿ ಆದೇಶ ವಾಪಸ್‌ ಪಡೆಯಬೇಕು’ ಎಂಬ ಆಗ್ರಹ ಕೇಳಿ ಬಂದಿದೆ.
2017, 2018 ಮತ್ತು 2020ರಲ್ಲಿ 1ನೇ ತರಗತಿ ದಾಖಲಾತಿಗೆ ಕನಿಷ್ಠ 5 ವರ್ಷ 10 ತಿಂಗಳು ಆಗಿರಬೇಕು, ಗರಿಷ್ಠ 6 ವರ್ಷ 10 ತಿಂಗಳ ಒಳಗಿರಬೇಕು ಎಂದು ಸರ್ಕಾರ ವಯೋಮಿತಿ ನಿಗದಿ ಮಾಡಿತ್ತು. ಆದರೆ, ಈಗ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು 2012ರ ಕಡ್ಡಾಯ ಶಿಕ್ಷಣ ನಿಯಮಗಳ ಅನುಸಾರ 1ನೇ ತರಗತಿ ದಾಖಲಾತಿಗೆ ಮಕ್ಕಳಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣ ಗೊಂಡಿರಬೇಕೆಂದು ಮಾರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್‌ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಒಪ್ಪಿಗೆ ನೀಡಿ ಈ ಹೊಸ ಆದೇಶ ಮಾಡಿದೆ. ಅದರಂತೆ ಆಯಾ ಶೈಕ್ಷಣಿಕ ವರ್ಷದ ಜೂನ್‌ 1ಕ್ಕೆ 6 ವರ್ಷಗಳು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ, ಮುಂದಿನ ವರ್ಷದಿಂದ 1ನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಯುವತಿ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡ ಸಂತೋಷ್ ಲಾಡ್ ಫೌಂಡೇಶನ್

ಪೋಷಕರು, ತಜ್ಞರ ವಿರೋಧವೇಕೆ?

‘ಸರ್ಕಾರ ನಿಗದಿಪಡಿಸಿರುವ ವಯೋಮಿತಿ ಅವೈಜ್ಞಾನಿಕವಾಗಿದೆ. ಇದರಿಂದ ಜೂ.1ಕ್ಕೆ 6 ವರ್ಷ ಪೂರ್ಣಗೊಳ್ಳಲು ಒಂದು ದಿನ ಕಡಿಮೆ ಇದ್ದರೂ ಮಕ್ಕಳಿಗೆ 1ನೇ ತರಗತಿ ಪ್ರವೇಶ ದೊರೆಯದೆ ಮತ್ತೆ ಇನ್ನೊಂದು ವರ್ಷ ಕಾಯಬೇಕಾಗುತ್ತದೆ. 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳ ವರೆಗಿನ ಮಕ್ಕಳಿಗೆ 1ನೇ ತರಗತಿ ದಾಖಲಾತಿಗೆ ಅವಕಾಶ ನೀಡುವುದರಿಂದ ಯಾವ ಮಕ್ಕಳಿಗೂ ಶಾಲಾ ಪ್ರವೇಶಕ್ಕೆ ಸಮಸ್ಯೆ ಎದುರಾಗುವುದಿಲ್ಲ. ಬಹಳ ಹಿಂದೆ ಕೂಡ 6 ವರ್ಷ ವಯೋಮಿತಿಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ, ಆಕ್ರೋಶ ವ್ಯಕ್ತವಾದ ಕಾರಣದಿಂದಲೇ ಸರ್ಕಾರ ವಯೋಮಿತಿ ಮಾರ್ಪಡಿಸಿತ್ತು. ಇದರ ಅರಿವಿಲ್ಲದೆ ಆಯುಕ್ತರು ಸಲ್ಲಿಸಿರುವ ಅಸಮಂಜಸ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿರುವುದು ಸರಿಯಲ್ಲ’ ಎಂದು ಪೋಷಕರು ಹಾಗೂ ತಜ್ಞರು ಹೇಳಿದ್ದಾರೆ.

ಈ ವರ್ಷಕ್ಕೆ ಅನ್ವಯವಿಲ್ಲ

ಈ ವರ್ಷ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಹೀಗಾಗಿ ಹೊಸ ವಯೋಮಿತಿ ಆದೇಶ ಮುಂದಿನ ವರ್ಷದಿಂದ ಜಾರಿಗೆ ಬರಲಿದೆ ಅಂತ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿಶಾಲ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios