ಬರೀ 15 ನಿಮಿಷ: ಸ್ಟಡಿ ಮಾಡೋಕೆ ಬಾಲಕ ಕೊಟ್ಟ ಸಮಯ ನೋಡಿ ಶಾಕ್ ಆದ ಪೋಷಕರು
ಇಲ್ಲೊಬ್ಬ ಬಾಲಕ ತನ್ನ ಚಟುವಟಿಕೆಗೆ ತಾನೇ ವೇಳಾಪಟ್ಟಿ ಸಿದ್ಧಪಡಿಸಿದ್ದು, ಆ ವೇಳಾಪಟ್ಟಿಯಲ್ಲಿ ಅಧ್ಯಯನಕ್ಕೆ ಆತ ನಿಗದಿಪಡಿಸಿದ ಸಮಯ ನೋಡಿ ಪೋಷಕರು ತಲೆ ತಿರುಗಿ ಬೀಳುವುದೊಂದು ಬಾಕಿ, ಹೌದು ಈ ಬಾಲಕ ಅಧ್ಯಯನಕ್ಕೆ ಕೇವಲ 15 ನಿಮಿಷ ಸಮಯ ನೀಡಿದ್ದಾನೆ.
ಪುಟ್ಟ ಮಕ್ಕಳನ್ನು ಓದಿನತ್ತ ಸೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ, ಕೂತಲ್ಲಿ ಕೂರದ ಮಕ್ಕಳನ್ನು ಒಂದೆಡೆ ಕೂಡಿಸಿ ಪಾಠಗಳನ್ನು ಹೇಳಿ ಕೊಡುವ ವೇಳೆ ಪೋಷಕರು ಹೈರಾಣಾಗಿ ಹೋಗುತ್ತಾರೆ. ಇದರ ಜೊತೆ ಕೀಟಲೆ ಮಾಡುತ್ತಾ ಕ್ವಾಟ್ಲೆ ಕೊಡ್ತಿದ್ರೆ ಈಗಿನ ಪೋಷಕರ ತಾಳ್ಮೆಯ ಕಟ್ಟೆ ಒಡೆದು ಸರಿಯಾಗಿ ಏಟು ಬಾರಿಸುತ್ತಾರೆ.ಶಾಲೆಗೆ ಹೋಗುವ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗೆ ವೇಳಾಪಟ್ಟಿ ಸಿದ್ಧಪಡಿಸಿಟ್ಟಿರ್ತಾರೆ. ಬೆಳಿಗ್ಗೆ ಏಳುವುದರಿಂದ ಹಿಡಿದು ಸ್ನಾನ ಶೌಚ, ಭೋಜನ, ಅಧ್ಯಯನ ಎಲ್ಲದಕ್ಕೂ ಆ ಟೈಮ್ ಟೇಬಲ್‌ನಲ್ಲಿ ಸಮಯ ನಿಗದಿಯಾಗಿರುತ್ತದೆ. ಇದನ್ನು ಪೋಷಕರು ಅಥವಾ ಶಿಕ್ಷಕರು ಸಿದ್ಧಪಡಿಸುತ್ತಾರೆ.
ಆದರೆ ಇಲ್ಲೊಬ್ಬ ಬಾಲಕ ತನ್ನ ಚಟುವಟಿಕೆಗೆ ತಾನೇ ವೇಳಾಪಟ್ಟಿ ಸಿದ್ಧಪಡಿಸಿದ್ದು, ಆ ವೇಳಾಪಟ್ಟಿಯಲ್ಲಿ ಅಧ್ಯಯನಕ್ಕೆ ಆತ ನಿಗದಿಪಡಿಸಿದ ಸಮಯ ನೋಡಿ ಪೋಷಕರು ತಲೆ ತಿರುಗಿ ಬೀಳುವುದೊಂದು ಬಾಕಿ, ಹೌದು ಈ ಬಾಲಕ ಅಧ್ಯಯನಕ್ಕೆ ಕೇವಲ 15 ನಿಮಿಷ ಸಮಯ ನೀಡಿದ್ದು, 3 ಗಂಟೆ ಸಮಯವನ್ನು ಫೈಟಿಂಗ್‌ಗೆ ಎಂದು ನಿಗದಿ ಮಾಡಿದ್ದಾನೆ. ಇದನ್ನು ನೋಡಿದ ಪೋಷಕರಿಗೆ ಅಳಬೇಕೋ ನಗಬೇಕೋ ಎಂಬಂತಾಗಿದೆ. ಬಾಲಕನ ಸಂಬಂಧಿಯೊಬ್ಬರು ಈ ವೇಳಾಪಟ್ಟಿಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆ ಪೋಸ್ಟ್ ಈಗ ವೈರಲ್ ಆಗಿದೆ. ಜೊತೆಗೆ ಅನೇಕರ ಮೊಗದಲ್ಲಿ ನಗು ತರಿಸುವುದರ ಜೊತೆಗೆ ಅನೇಕರು ಹಲವು ರೀತಿಯಲ್ಲಿ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಓದಿ ಓದಿಯೇ ಅಜ್ಜ ಆಗ್ಬಿಡ್ತೀನಿ ಎಂದು ಪುಟ್ಟ ಬಾಲಕನ ಅಳು: ವಿಡಿಯೋ ವೈರಲ್
ವೇಳಾಪಟ್ಟಿಯಲ್ಲಿ ಏನೇನಿದೆ?
6 ವರ್ಷದ ಬಾಲಕ ತನಗಾಗಿ ಈ ಟೈಮ್ ಟೇಬಲ್ ಸಿದ್ಧಪಡಿಸಿದ್ದು, ಇದರಲ್ಲಿ ಅಧ್ಯಯನ ಸಮಯ ಮಾತ್ರವಲ್ಲದೇ ಎಲ್ಲರೊಂದಿಗೆ ಜಗಳ ಮಾಡುವುದಕ್ಕಾಗಿಯೇ ಬಾಲಕ ಮೂರು ಗಂಟೆ ಸಮಯ ನಿಗದಿ ಮಾಡಿದ್ದು, ಎಲ್ಲರೂ ನಗುವುದಕ್ಕೆ ಕಾರಣವಾಗಿದೆ. ವೇಳಾಪಟ್ಟಿಯಲ್ಲಿ ಬಾಲಕ ಬೆಳಿಗ್ಗೆ ಏಳುವ ಸಮಯ 9 ಗಂಟೆ, ಬಾತ್‌ರೂಮ್ ಸಮಯ 9ರಿಂದ 9. 30, ಬೆಳಗ್ಗಿನ ತಿನಿಸು 9.30 ರಿಂದ 10, ಸಾಹಬ್ ಟೈಮ್ 11 ರಿಂದ 11.30, ಫೈಟಿಂಗ್ ಟೈಮ್ 11.30 ರಿಂದ ಮಧ್ಯಾಹ್ನ 2.30 , ಸ್ಟಡಿ ಟೈಮ್ 2.30ರಿಂದ 2.45, ಬಾತ್ ಟೈಮ್ 2.45 ರಿಂದ 3.15, ಮಧ್ಯಾಹ್ನದ ಭೋಜನ 2 ಗಂಟೆ , ನಿದ್ದೆಯ ಸಮಯ ಮಧ್ಯಾಹ್ನ 3 ರಿಂದ ಸಂಜೆ 5 ಚೀಜ್ ಟೈಮ್ 5 ರಿಂದ 5.15 ಹೌಸ್ ಟೈಮ್ 7-8, ಮಾವಿನ ಹಣ್ಣು ತಿನ್ನುವ ಸಮಯ 8 ರಿಂದ 8.30, ನಿದ್ದೆ ಮಾಡುವ ಸಮಯ 9 ಹೀಗೆ ಬಾಲಕ ವೇಳಾಪಟ್ಟಿಯಲ್ಲಿ ಬರೆದಿದ್ದಾನೆ.
ಈ ವೇಳಾಪಟ್ಟಿಗೆ ಸಂಬಂಧಿಸಿದಂತೆ ಈ ಪೋಸ್ಟ್ ಮಾಡಿದವರು ಮತ್ತೊಂದು ಟ್ವಿಟ್ ಮೂಲಕ ವಿವರಿಸಿದ್ದು, ಫೈಟಿಂಗ್ ಟೈಮ್, ಈ ಮೂರು ಗಂಟೆಯ ಫೈಟಿಂಗ್ ಸಮಯದಲ್ಲಿ ನಾವು ನಮ್ಮನ್ನು ಹಾಗೂ ಮನೆಯನ್ನು ರಕ್ಷಿಸಿಕೊಳ್ಳಬೇಕು. ಮ್ಯಾಂಗೋ ಟೈಮ್‌ನಲ್ಲಿ ಆತ ನನ್ನ ತಂದೆಯೊಂದಿಗೆ ಮಾವಿನ ಹಣ್ಣು ಸೇವಿಸುತ್ತಾನೆ. ಹಾಗೂ ರೆಡ್ ಕಾರ್ ಜೊತೆ ಆಟ ಆಡುವ ಸಮಯದಲ್ಲಿ ಆತ ತನ್ನ ನೆಚ್ಚಿನ ಕೆಂಪು ಬಣ್ಣದ ಕಾರಿನಲ್ಲಿ ಆಟ ಆಡುತ್ತಾನೆ. ಹಾಗೆಯೇ ಚೀಜ್ ಟೈಮ್ ಮೂಲತಃ ಲೇಸ್ ಹಾಗೂ ಜ್ಯೂಸ್ ಕುಡಿಯುವ ಸಮಯವಾಗಿದೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ಆತ ಫೈಟಿಂಗ್ ಟೈಮ್‌ನಲ್ಲಿ ಮನೆಯಲ್ಲಿರುವ ಎಲ್ಲರಿಗೂ ಹಾವಳಿ ನೀಡುತ್ತಾನೆ ಎಂದು ಅವರು ಹೇಳಿದ್ದಾರೆ.
ಆದರೆ ಈ ಪೋಸ್ಟ್‌ನಲ್ಲಿರುವ ಫೈಟಿಂಗ್ ಟೈಮ್ ಹಾಗೂ ಸ್ಟಡಿ ಟೈಮ್ ಅನೇಕರಿಗೆ ನಗು ಮೂಡಿಸಿದೆ. ಅನೇಕರು ಆತನ ಫೈಟಿಂಗ್ ಟೈಮ್ ಬಗ್ಗೆ ಕುತೂಹಲ ಮೂಡಿದೆ ಎಂದು ಹೇಳಿದ್ದಾರೆ. ಆತನ ಪ್ರಮಾಣಿಕತೆ ಇಷ್ಟವಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.