ಎಸ್ಸೆಸ್ಸೆಲ್ಸಿ: ಒಬ್ಬ ಡಿಬಾರ್, ಇಬ್ಬರು ಶಿಕ್ಷಕರು ಸಸ್ಪೆಂಡ್..!
ಪರೀಕ್ಷಾ ಅಕ್ರಮ ತಡೆಗಟ್ಟಲು ಎಲ್ಲ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಇದೇ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ಅಕ್ರಮ ಎಸಗುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಬಾಗಿಲ ಕಡೆ ಮುಖ ಮಾಡುವ ಬದಲು ಗೋಡೆ ಕಡೆಗೆ ಮುಖ ಮಾಡಿ ಕೂತು ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಲೇ ಈ ಪರೀಕ್ಷಾ ಅಕ್ರಮ ಪತ್ತೆಹಚ್ಚಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು(ಮಾ.26): ರಾಜ್ಯದಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿಯ ಮೊದಲ ದಿನದ ಪರೀಕ್ಷೆಯಲ್ಲೇ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ಆರೋಪದ ಮೇಲೆ ಯಾದಗಿರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ವಿಜಯಪುರದ ಕೇಂದ್ರವೊಂದರಲ್ಲಿ ಪರೀಕ್ಷಾ ಅಕ್ರಮವೆಸಗಿದ ಓರ್ವ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ.
ಇದನ್ನು ಹೊರತುಪಡಿಸಿ ಉಳಿದೆಲ್ಲಾ ಕೇಂದ್ರಗಳಲ್ಲಿ ಪ್ರಥಮ ಭಾಷಾ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 8,24,811 ವಿದ್ಯಾರ್ಥಿಗಳಲ್ಲಿ 8,32, 342 (ಶೇ.98.41) ಮಂದಿ ಹಾಜರಾಗಿದ್ದು, 13,468 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ: ದ್ವಾರದ ಕಡೆ ಮುಖ ಮಾಡುವುದು ನಿರ್ಬಂಧ
ಪರೀಕ್ಷಾ ಅಕ್ರಮ ತಡೆಗಟ್ಟಲು ಎಲ್ಲ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಇದೇ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳು ಅಕ್ರಮ ಎಸಗುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಬಾಗಿಲ ಕಡೆ ಮುಖ ಮಾಡುವ ಬದಲು ಗೋಡೆ ಕಡೆಗೆ ಮುಖ ಮಾಡಿ ಕೂತು ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಲೇ ಈ ಪರೀಕ್ಷಾ ಅಕ್ರಮ ಪತ್ತೆಹಚ್ಚಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
ಅಮಾನತಾದ ಶಿಕ್ಷಕರು:
ಶಹಾಪುರ ತಾಲ್ಲೂಕು ಹುಣಸಗಿಯ ಸರ್ಕಾರಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಹೇಬಗೌಡ ಹುಕ್ಕಾಲಿ ಮತ್ತು ಹಣಮಂತ್ರಾಯ ಎಂಬ ಶಿಕ್ಷಕರನ್ನು ಬೇಜವಾಬ್ದಾರಿತನ ಹಾಗೂ ಮೇಲ್ನೋಟಕ್ಕೆ ಕರ್ತವ್ಯ ಲೋಪ ಕಂಡುಬಂದಿರುವುದರಿಂದ ಯಾದಗಿರಿ ಜಿಲ್ಲಾ ಉಪನಿರ್ದೇಶಕ (ಡಿಡಿಪಿಐ) ಮಂಜುನಾಥ್ ಎಚ್.ಟಿ. ಅಮಾನತು ಮಾಡಿದ್ದಾರೆ. ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಮಾತನಾಡುತ್ತಿದ್ದರೂ ಶಿಕ್ಷಕರು ಸುಮ್ಮನಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲಾಗಿದೆ. ಯಾವುದೇ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಡಿಡಿಪಿಐ ಸ್ಪಷ್ಟಪಡಿಸಿದ್ದಾರೆ.
ವೆಬ್‌ಕಾಸ್ಟಿಂಗ್‌ನಿಂದ ಪತ್ತೆ:
ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಪರೀಕ್ಷಾ ಕೇಂದ್ರದ ವೆಬ್‌ಕಾಸ್ಟಿಂಗ್ ಸಿಸಿಕ್ಯಾಮರಾ ವೀಕ್ಷಣೆ ಮಾಡಿದಾಗ ಕೊಠಡಿ ಸಂಖ್ಯೆ 2 ಮತ್ತು 5ರಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡುಬಂದಿದೆ. ಕ್ರಮವಾಗಿ ಈ ಕೊಠಡಿಗಳ ಮೇಲ್ವಿಚಾರಕರಾಗಿದ್ದ ಸಾಹೇಬಗೌಡ ಮತ್ತು ಹಣಮಂತ್ರಾಯ ಎಂಬ ಶಿಕ್ಷಕರು ವಿದ್ಯಾರ್ಥಿಗಳು ನಕಲು ಮಾಡುತ್ತಿರುವುದು ಕಂಡುಬಂದರೂ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ. ಹಾಗಾಗಿ ಅವರು ಈ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.