ಶಾಲೆಗಳಿಗೆ ಪರಿಷ್ಕೃತ ಪಠ್ಯ ಬದಲು ಹಳೇ ಪಠ್ಯಪುಸ್ತಕ ರವಾನೆ..!

*   ಪರಿಷ್ಕರಣೆ ಆಗಿರುವ ಕನ್ನಡ, ಸಮಾಜ ವಿಜ್ಞಾನ ಪುಸ್ತಕ ಪೂರೈಕೆ ಆಗಿಲ್ಲ
*   ಶಿಕ್ಷಕರಿಗೆ ಈಗ ಹಳೇ ಪಠ್ಯಕ್ರಮವನ್ನೇ ಬೋಧಿಸಬೇಕೆ ಎಂಬ ಗೊಂದಲ
*   ಪೂರೈಕೆ ಆಗಿರುವ ಹಳೆ ಪಠ್ಯ ವಾಪಸ್‌ ಪಡೀತಾರಾ ಎಂಬ ಮಾಹಿತಿ ಇಲ್ಲ
 

Old Textbook Distribute Instead of Revised Textbook for schools in Karnataka grg

ಲಿಂಗರಾಜು ಕೋರಾ

ಬೆಂಗಳೂರು(ಜೂ.04): ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪಠ್ಯ ಪುಸ್ತಕಗಳು ಸರಬರಾಜಾಗುತ್ತಿದ್ದು, ಈಗಾಗಲೇ ಪಠ್ಯಪುಸ್ತಕ ತಲುಪಿರುವ ಶಾಲೆಗಳಿಗೆ ಪ್ರಸಕ್ತ ಸಾಲಿಗೆ ಪರಿಷ್ಕರಣೆಯಾಗಿರುವ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಗಳು ಬಂದಿಲ್ಲ. ಬದಲಿಗೆ ಕಳೆದ ಸಾಲಿನ ಪಠ್ಯಗಳನ್ನೊಳಗೊಂಡ ಪಠ್ಯಗಳೇ ಸರಬರಾಜಾಗಿವೆ.

ಇದರಿಂದ ಶಿಕ್ಷಕರು ಈಗ ಬಂದಿರುವ ಹಳೆಯ ಪಠ್ಯಕ್ರಮವನ್ನೇ ಬೋಧಿಸಬೇಕಾ, ಇಲ್ಲ ಹೊಸ ಪಠ್ಯಕ್ಕೆ ಕಾಯಬೇಕಾ? ಯಾವ್ಯಾವ ಪಠ್ಯ ಪರಿಷ್ಕರಣೆಯಾಗಿದೆ, ಅದನ್ನು ಬಿಟ್ಟು ಉಳಿದದ್ದು ಬೋಧಿಸಬೇಕಾ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿದ್ದಾರೆ. ಇತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಕೂಡ ಶಿಕ್ಷಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ಥಿತಿ ತಲುಪಿದ್ದಾರೆ. ಹಳೆಯ ಪಠ್ಯಕ್ರಮವನ್ನೇ ಬೋಧಿಸಲು ಹೇಳುವುದಾ? ಹೊಸ ಪಠ್ಯ ಬಂದ ಬಳಿಕ ಹಳೆ ಪಠ್ಯ ವಾಪಸ್‌ ಪಡೆಯಲಾಗುತ್ತಾ? ಇಲ್ಲಾ ಹಳೆಯ ಪಠ್ಯದ ಜೊತೆಗೆ ಪರಿಷ್ಕರಣೆಯಾಗಿರುವ ಪಾಠಗಳ ಪ್ರತಿಗಳು ಮಾತ್ರ ಪ್ರತ್ಯೇಕವಾಗಿ ಬರುತ್ತವಾ ಇಲ್ಲ ಪೂರ್ಣ ಪಠ್ಯಪುಸ್ತಕವೇ ಹೊಸದು ಬರುತ್ತಾ? ಎಂಬ ಯಾವ ಮಾಹಿತಿಯೂ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಜೂನ್‌ ಬಂದರೂ ಮಕ್ಕಳ ಕೈ ಸೇರದ ಪಠ್ಯಪುಸ್ತಕ..!

ಹೆಡಗೇವಾರ್‌ ಪಾಠ ಇದರಲ್ಲಿಲ್ಲ:

ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ವಿವಿಧ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಕೆಲ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ ಈ ಸತ್ಯ ಬಹಿರಂಗವಾಗಿದೆ. ನಮ್ಮ ಶಾಲೆಗೆ ಸರಬರಾಜಾಗಿರುವ 10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಆರೆಸ್ಸೆಸ್‌ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌ ಭಾಷಣವಾಗಲಿ, ಚಕ್ರವರ್ತಿ ಸೂಲಿಬೆಲೆ ಅವರ ಬರಹವಾಗಲಿ ಇಲ್ಲ ಎಂದು ಹೆಬ್ಬಾಳ ಸರ್ಕಾರಿ ಪ್ರೌಢ ಶಾಲೆಯ ಹೆಸರೇಳಲಿಚ್ಛಿಸದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಅದೇ ರೀತಿ ಸಮಾಜ ವಿಜ್ಞಾನ ಪಠ್ಯದಲ್ಲೂ ಯಾವುದೇ ಬದಲಾವಣೆಗಳಾಗಿಲ್ಲ ಕಳೆದ ವರ್ಷದ ಪುಸ್ತಕಗಳನ್ನೇ ನೀಡಲಾಗಿದೆ.

ಇನ್ನುಳಿದಂತೆ ಇಂಗ್ಲಿಷ್‌, ಹಿಂದಿ, ಗಣಿತ, ವಿಜ್ಞಾನ ಹಾಗೂ ಇತರೆ ಎಲ್ಲಾ ಪಠ್ಯ ಪುಸ್ತಕಗಳು ಪರಿಷ್ಕರಣೆಯಾಗಿಲ್ಲದ್ದರಿಂದ ಈ ಹಿಂದೆ ಇದ್ದ ರೂಪದಲ್ಲೇ ಇವೆ ಎಂದು ಮಾಹಿತಿ ನೀಡಿದ್ದಾರೆ. ತುಮಕೂರು, ಹಾಸನ ಜಿಲ್ಲಾ ಕೇಂದ್ರದ ಸರ್ಕಾರಿ ಶಾಲೆಯೊಂದರ ಶಿಕ್ಷಕರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ರೋಹಿತ್ ಚಕ್ರತೀರ್ಥ ಸಮಿತಿ ವಜಾ, ಸರ್ಕಾರ ಮಹತ್ವದ ಆದೇಶ

ಈ ಮಧ್ಯೆ, ದೂರವಾಣಿ ಸಂಪರ್ಕಕ್ಕೆ ಸಿಕ್ಕಿದ ಬೆಂಗಳೂರು ಉತ್ತರ ವಲಯ ಮತ್ತು ದಕ್ಷಿಣ ವಲಯದ ಕೆಲ ಕ್ಷೇತ್ರಶಿಕ್ಷಣಾಧಿಕಾರಿಗಳು ಕೂಡ ಸರ್ಕಾರದಿಂದ ಇನ್ನೂ ಕೂಡ ಪರಿಷ್ಕೃತ ರೂಪದ ಪಠ್ಯಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಪರಿಷ್ಕರಣೆಯಾಗಿರುವ ಪುಸ್ತಕಗಳು ಯಾವಾಗ ಬರುತ್ತವೆ, ಬಂದ ಬಳಿಕ ಈ ಪುಸ್ತಕಗಳನ್ನು ವಾಪಸ್‌ ಕಳುಹಿಸಬೇಕಾ, ಇಲ್ಲಾ ಪರಿಷ್ಕರಣೆಯಾಗಿರುವ ಪಠ್ಯಭಾಗದ ಮುದ್ರಣ ಪ್ರತಿ ಏನಾದರೂ ಪ್ರತ್ಯೇಕವಾಗಿ ಬರಲಿದೆಯಾ ಎಂಬುದು ಸೇರಿದಂತೆ ಯಾವ ಮಾಹಿತಿಯೂ ಅಧಿಕಾರಿಗಳಿಗೇ ಇಲ್ಲ.

ಶೇ.30ರಷ್ಟುಶಾಲೆಗೆ ಪಠ್ಯಪುಸ್ತಕ ತಲುಪಿಲ್ಲ:

ಇನ್ನು, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಎದ್ದಿರುವ ವಿವಾದಗಳಿಂದಾಗಿ ಶಿಕ್ಷಕ ವರ್ಗ ಗೊಂದಲಕ್ಕೆ ಸಿಲುಕಿದೆ. ಮತ್ತೊಂದೆಡೆ ಮಕ್ಕಳು ಪಠ್ಯ ಪರಿಷ್ಕರಣೆ ಬಗ್ಗೆ ತಲೆಕೆಡಿಸಿಕೊಳ್ಳದಿದ್ದರೂ ಪುಸ್ತಕಗಳು ಬರುವುದು ತಡವಾಗಿರುವುದರಿಂದ ಆತಂಕಕ್ಕೀಡಾಗಿದ್ದಾರೆ. ಮೇ 16ರಿಂದ ಶಾಲೆಗಳು ಆರಂಭವಾದರೂ ಕಲಿಕಾ ಚೇತರಿಕೆ ಮತ್ತು ಕಾಮನಬಿಲ್ಲು ಕಾರ್ಯಕ್ರಮಗಳು ನಡೆಯುತ್ತಿದ್ದವು. ಜೂ.1ರಿಂದ ಪ್ರಸಕ್ತ ಸಾಲಿನ ಪಠ್ಯಕ್ರಮ ಬೋಧನಾ ತರಗತಿಗಳು ಆರಂಭವಾಗಿದೆ. ಆದರೆ, ಇನ್ನೂ ಕೂಡ ಶಾಲೆಗಳಿಗೆ ಸಮರ್ಪಕವಾಗಿ ಪಠ್ಯಪುಸ್ತಕಗಳು ತಲುಪಿಲ್ಲ. ಮೂಲಗಳ ಪ್ರಕಾರ ಇದುವರೆಗೆ ಶೇ.30ರಷ್ಟುಶಾಲೆಗಳಿಗೆ ಪಠ್ಯಪುಸ್ತಕಗಳು ತಲುಪಿಲ್ಲ.

ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಶೇ.85ಕ್ಕೂ ಹೆಚ್ಚು ಪುಸ್ತಕಗಳ ಮುದ್ರಣಕಾರ್ಯ ಪೂರ್ಣಗೊಂಡಿದ್ದು ಶೇ.75ರಷ್ಟುಸರಬರಾಜಾಗಿದೆ. ಆದರೆ, ಯಾವ ಶಾಲೆಯ ಶಿಕ್ಷಕರನ್ನು ಕೇಳಿದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ಬಂದಿಲ್ಲ ಎಂದೇ ಹೇಳುತ್ತಾರೆ. ಒಂದೆಡೆ ಪರಿಷ್ಕರಣೆಯಾಗಿರುವ ಪಠ್ಯಪುಸ್ತಕಗಳು ಬಂದೇ ಇಲ್ಲ. ಪರಿಷ್ಕರಣೆಯಾಗದ ಪುಸ್ತಕಗಳ ಸರಬರಾಜಿನಲ್ಲೂ ವಿಳಂಬವಾಗಿದೆ.
 

Latest Videos
Follow Us:
Download App:
  • android
  • ios