Asianet Suvarna News Asianet Suvarna News

ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ನೀಡುವ ನೀಟ್‌ ಯುಜಿ ಪರೀಕ್ಷೆಯ ಪರಿಷ್ಕೃತ ಅಂಕಪಟ್ಟಿ ಬಿಡುಗಡೆ

ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ನೀಟ್ ಯುಜಿ (NEET UG)ಪ್ರವೇಶ ಪರೀಕ್ಷೆಯ ಹೊಸ ಪರಿಷ್ಕೃತ ಅಂಕಪಟ್ಟಿಯನ್ನು  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್‌ಟಿಎ ಇಂದು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಬಿಡುಗಡೆ ಮಾಡಿದೆ.

NTA Released Revised Marks List of NEET UG Exam for Admission to Medical Course akb
Author
First Published Jul 25, 2024, 5:35 PM IST | Last Updated Jul 25, 2024, 5:35 PM IST

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ನೀಡುವ ನೀಟ್ ಯುಜಿ (NEET UG)ಪ್ರವೇಶ ಪರೀಕ್ಷೆಯ ಹೊಸ ಪರಿಷ್ಕೃತ ಅಂಕಪಟ್ಟಿಯನ್ನು  ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್‌ಟಿಎ ಇಂದು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಬಿಡುಗಡೆ ಮಾಡಿದೆ. ಸರಿ ಇರದ ಭೌತಶಾಸ್ತ್ರ ಪರೀಕ್ಷೆಯ ಪ್ರಶ್ನೆಗೆ ಸಂಬಂಧಿಸಿದ ಪ್ರತಿಕ್ರಿಯೆಯಾಗಿ ಈ ನಿರ್ಧಾರ ಮಾಡಲಾಗಿದೆ. ಇದರ ಪರಿಣಾಮ ಮೆರಿಟ್ ಲಿಸ್ಟ್‌ನಲ್ಲಿ ಬದಲಾವಣೆಯಾಗಿದೆ. ಇದಕ್ಕೂ ಮೊದಲು ಜುಲೈ 23ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೀಟ್ ಯುಜಿ 2024ರ ಪರೀಕ್ಷೆಯ ಪರಿಷ್ಕೃತ ಅಂತಿಮ ಫಲಿತಾಂಶವನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಜೂನ್ 4 ರಂದು ಬಿಡುಗಡೆಯಾದ ಫಲಿತಾಂಶದಲ್ಲಿ ಒಟ್ಟು 67 ವಿದ್ಯಾರ್ಥಿಗಳು ಟಾಪ್ ರಾಂಕ್‌ ಪಡೆದಿದ್ದರು. 

ಆದರೆ ಮಧ್ಯಪ್ರವೇಶಿಸಿದ  ಸುಪ್ರೀಂಕೋರ್ಟ್‌ ದೆಹಲಿ ಐಐಟಿಯ ತಜ್ಞರ ಸಮಿತಿಯ ಆಧಾರದಿಂದ ವಿವಾದಿತ ಪ್ರಶ್ನೆಗೆ ಒಂದೇ ಒಂದು ಸರಿಯಾದ ಆಯ್ಕೆಯನ್ನು ಒಪ್ಪುವುದನ್ನು ಕಡ್ಡಾಯಗೊಳಿಸಿತ್ತು. ಈಗ ಹೊಸದಾಗಿ ಬಿಡುಗಡೆಯಾದ ನೀಟ್ ಯುಜಿ ಪರಿಷ್ಕೃತ ಅಂಕಪಟ್ಟಿಯು 4.2 ಲಕ್ಷ ವಿದ್ಯಾರ್ಥಿಗಳ ಅಂಕದ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಟಾಪ ಅಂಕ ಗಳಿಸಿದವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ. ಎನ್‌ಟಿಎ ಗ್ರೇಸ್‌ ಮಾರ್ಕ್ ಹಿಂಪಡೆದ ನಂತರ 61 ಇದ್ದ ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿದಿದೆ. ಜುಲೈ 23ರಂದು ಸುಪ್ರೀಂಕೋರ್ಟ್ ಎನ್‌ಟಿಎಗೆ ಅಂಕಗಳ ಪರಿಷ್ಕರಣೆಗೆ ನಿರ್ದೇಶನ ನೀಡಿತ್ತು. ಇದಾದ ನಂತರ ಇಂದು ನೀಟ್ ಯುಜಿ ಪರಿಷ್ಕೃತ ಅಂಕಪಟ್ಟಿ ಬಿಡುಗಡೆಯಾಗಿದೆ. 

ನೀಟ್ ವ್ಯವಸ್ಥೆ ಬದಲು ಸಿಇಟಿ ಪ್ರವೇಶಾತಿಗೆ ನಿರ್ಣಯ: ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ಅಂಗೀಕಾರ

ದೇಶಾದ್ಯಂತ ನೀಟ್‌-ಯುಜಿ ಪರೀಕ್ಷೆ ಮೇ 5ರಂದು ನಡೆದಿತ್ತು. ಈ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಂಕ ಹೆಚ್ಚಳ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು.  ನ್ಯಾಯಾಲಯದ ಆದೇಶದ ಮೇರೆಗೆ ಎನ್‌ಟಿಎ ಶನಿವಾರವಷ್ಟೇ ನಗರ ಹಾಗೂ ಪರೀಕ್ಷಾ ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸಿತ್ತು. ಈ ಫಲಿತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಅಕ್ರಮ ನಡೆದಿದೆ ಎಂಬ ಆರೋಪ ವ್ಯಕ್ತವಾಗಿದ್ದ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಕಂಡುಬಂದಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.

ಎರಡು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಅಕ್ರಮ

ಎರಡು ಪರೀಕ್ಷಾ ಕೇಂದ್ರಗಳಲ್ಲಿ ಜಾರ್ಖಂಡ್‌ನ ಹಜರಿಬಾಗ್ ಹಾಗೂ ಪಾಟ್ನಾದಲ್ಲಿ ನೀಟ್ ಯುಜಿ 2024ರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದನ್ನು ಸುಪ್ರೀಂಕೋರ್ಟ್ ತನಿಖೆಯ ಬಳಿಕ ಖಚಿತಪಡಿಸಿತ್ತು. ಇದಾದ ಬಳಿಕ ಈ ಅಕ್ರಮದ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಸಿಬಿಐ ನಡೆಸುವುದಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು. 

ದಾಖಲಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ಇಲ್ಲ:

ಅಲ್ಲದೇ ಕೋರ್ಟ್ ಕೌನ್ಸೆಲಿಂಗ್‌ ಹಾಗೂ ಇತರ ದಾಖಲಾತಿ ಪ್ರಕ್ರಿಯೆಗಳನ್ನು ಯೋಜಿಸಿದಂತೆ ನಡೆಸಲು ಅನುವು ಮಾಡಿಕೊಟ್ಟಿದೆ. ಹೆಚ್ಚುವರಿಯಾಗಿ  ಮುಂದೆ ಪರೀಕ್ಷೆಗಳಲ್ಲಿ ಇಂತಹ ವಿವಾದಗಳು ಆಗದಂತೆ ತಡೆಯಲು ಮಾರ್ಗಸೂಚಿಯನ್ನು ಸೂಚಿಸಿದೆ. 

ನೀಟ್ ಪರಿಷ್ಕೃತ ಅಂಕಪಟ್ಟಿ ಚೆಕ್ ಮಾಡುವುದು ಹೇಗೆ?

ನೀಟ್ ಪರಿಷ್ಕೃತ ಅಂಕಪಟ್ಟಿ ಪರಿಶೀಲಿಸಲು ಮೊದಲಿಗೆ ವಿದ್ಯಾರ್ಥಿಗಳು ಎನ್‌ಟಿಎಯ ಅಧಿಕೃತ ವೆಬ್‌ಸೈಟ್ exams.nta.ac.in/NEET ಗೆ ಭೇಟಿ ನೀಡಬೇಕು. ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ NEET-UG revised scorecard ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ಲಾಗಿನ್ ಐಟಿ ಹಾಗೂ ಪಾಶ್‌ವರ್ಡ್ ಹಾಕಿ ಸಬ್ಮಿಟ್ ಕೊಡಿ, ಇದಾದ ನಂತರ ಪರಿಷ್ಕೃತ ಮಾರ್ಕ್ಸ್‌ ಕಾರ್ಡ್ ಕಾಣಿಸುತ್ತದೆ. ನಂತರ ಅಂಕಪಟ್ಟಿಯ ಒಂದು ಕಾಪಿ ಡೌನ್‌ಲೋಡ್ ಮಾಡಿ ಮುಂದಿನ ಅಗತ್ಯಗಳಿಗಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ.

ನೀಟ್‌ ರದ್ದು ಮಾಡಿ ತನ್ನದೇ ಪರೀಕ್ಷೆಗೆ ಮುಂದಾದ ಕರ್ನಾಟಕ, ಮರು ಪರೀಕ್ಷೆಗೆ ಸುಪ್ರೀಂ ನಿರಾಕರಣೆ

ನೀಟ್ ಯುಜಿಯ ಪರಿಷ್ಕೃತ ಮಾರ್ಕ್ಸ್‌ಕಾರ್ಡ್‌ ಬಿಡುಗಡೆಯಾದ ಬಳಿಕ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯಲು ಆದಷ್ಟು ಬೇಗ ಕೌನ್ಸೆಲಿಂಗ್ ಆರಂಭವಾಗಲಿದೆ. ನೀಟ್ ಯುಜಿ ಕೌನ್ಸೆಲಿಂಗ್‌ಗಾಗಿಯೂ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭವಾಗಲಿದೆ. ಈ ಕೌನ್ಸೆಲಿಂಗ್ ನಂತರ ದೇಶಾದ್ಯಂತ ಎಂಬಿಬಿಎಸ್ ಹಾಗೂ ಬಿಡಿಎಸ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಅಭ್ಯರ್ಥಿಗಳು ತಮ್ಮ ಕಾಲೇಜುಗಳ ಆಯ್ಕೆಯನ್ನು ಇದೇ ವೇಳೆ ಮಾಡಬೇಕಾಗುತ್ತದೆ. 

Latest Videos
Follow Us:
Download App:
  • android
  • ios