10 ತಿಂಗಳ ಬಳಿಕ ಶಾಲಾ-ಕಾಲೇಜು ಓಪನ್ ಆದ್ರೂ ಬಾರದ ವಿದ್ಯಾರ್ಥಿಗಳು..!
ಬಸ್, ವಸತಿ ಇಲ್ಲದ್ದಕ್ಕೆ ಹೆಚ್ಚುತ್ತಿಲ್ಲ ಹಾಜರಾತಿ| ಎರಡೂ ಸೌಲಭ್ಯ ಕಲ್ಪಿಸಿದರೆ ತಾನಾಗೇ ಹೆಚ್ಚುತ್ತೆ ವಿದ್ಯಾರ್ಥಿಗಳ ಹಾಜರಾತಿ| ಕಾಲೇಜು ಆರಂಭವಾಗಿ 20 ದಿನ ಕಳೆದರೂ ಬಾರದ ಮಕ್ಕಳು|
ಶಂಕರ ಕುದರಿಮನಿ
ಬಾದಾಮಿ(ಜ.21): ಕೊರೋನಾದಿಂದ ಬರೊಬ್ಬರಿ ಹತ್ತು ತಿಂಗಳ ಕಾಲ ಬಂದ್ ಆಗಿದ್ದ ವಿದ್ಯಾದೇಗುಲಗಳು ಇದೀಗ ಆರಂಭಗೊಂಡಿವೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮಾತ್ರ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿಲ್ಲ. ಇದಕ್ಕೆ ಮೂಲ ಕಾರಣ ಬಸ್ ಹಾಗೂ ವಸತಿ ಸೌಲಭ್ಯ.
ಹೌದು, ಕೊರೋನಾ ಹಿನ್ನಲೆಯಲ್ಲಿ ಇಡೀ ದೇಶದ ಸ್ತಬ್ಧಗೊಂಡಿತ್ತು. ಈ ವೇಳೆ ವ್ಯಾಪಾರ, ಸಾರಿಗೆ ಹಾಗೂ ಇತರೆ ಎಲ್ಲವೂ ಸ್ಥಗಿತಗೊಂಡಿತ್ತು. ಆ ವೇಳೆ ಸ್ಥಗಿತಗೊಂಡು ಇದೀಗ ಆರಂಭಗೊಂಡ ವ್ಯಾಪಾರ ವಹಿವಾಟು ಇದೀಗ ಸರಿದಾಗಿ ಬಂದು ಭರ್ಜರಿ ವ್ಯಾಪಾರ ನಡೆದಿದೆ. ಆದರೆ, ಆ ವೇಳೆ ಬಂದ್ ಆಗಿದ್ದ ವಸತಿ ನಿಲಯಗಳು ಆರಂಭಗೊಂಡಿಲ್ಲ. ವಿದ್ಯಾರ್ಥಿಗಳ ಮಟ್ಟಿಗೆ ಸಾರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಏಕೆಂದರೆ, ಕೊರೋನಾಕ್ಕಿಂತಲೂ ಮುಂಚೆ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಇನ್ನು ವಸತಿ ಬಸ್‌ಗಳು ಹೆಚ್ಚಾಗಿ ಸಂಚರಿಸುತ್ತಿದ್ದವು. ಆದರೆ, ಇದೀಗ ನಷ್ಟದ ನೆಪವೊಡ್ಡಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್‌ಗಳನ್ನು ಬಿಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಬರಲು ತೀವ್ರ ತೊಂದರೆ ಉಂಟಾಗುತ್ತಿದೆ. ಇನ್ನೂ ಕೆಲವೇ ಬಸ್ ಇದ್ದರೂ ಅವುಗಳು ತುಂಬಿ ತುಳಕುತ್ತಿವೆ. ಹೀಗಾಗಿ ಕೆಲವು ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹೋಗಲು ಆಗುತ್ತಿಲ್ಲ.
ಕೊರೋನಾ ರೋಗಿಗಳನ್ನು ಕ್ವಾರಂಟೈನ್ ಹಾಗೂ ಚಿಕಿತ್ಸೆಗಳಿಗೆ ಮೀಸಲಿದ್ದ ವಸತಿ ನಿಲಯಗಳು ಇನ್ನೂವರೆಗೂ ವಿದ್ಯಾರ್ಥಿಗಳಿಗೆ ತೆರೆದುಕೊಂಡಿಲ್ಲ. ತೆರೆದುಕೊಂಡಿದ್ದರೂ ಅವು ಅಂತಿಮ ವರ್ಷ ವಿದ್ಯಾರ್ಥಿಗಳಿಗಷ್ಟೇ ಮೀಸಲಿವೆ. ಇನ್ನೂ ದೂರದೂರುಗಳಿಂದ ಆಗಮಿಸಿ ವಿದ್ಯಾರ್ಜನೆ ಮಾಡಲು ಬರುವ ವಿದ್ಯಾರ್ಥಿಗಳಿಗೆ ವಸತಿ ಸಮಸ್ಯೆ ಇರುವುದರಿಂದ ಅವರು ಶಾಲಾ-ಕಾಲೇಜುಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಯಾಕೆ ವಿದ್ಯಾರ್ಥಿಗಳು ಇನ್ನೂ ತರಗತಿಗಳಿಗೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದೆ. ಇದಕ್ಕೆ ಸಂಬಂಧ ಪಟ್ಟಅಧಿಕಾರಿಗಳನ್ನು ಕೇಳಿದರೆ ನಮಗೆ ಜಿಲ್ಲಾಡಳಿತದಿಂದ ಆದೇಶ ಬರಬೇಕು. ತದನಂತರ ನಾವು ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡಲು ಆರಂಭಿಸುತ್ತೇವೆ ಎಂದು ಉತ್ತರವನ್ನು ನೀಡಿ ಕೈ ತೊಳೆದು ಕೊಳ್ಳುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯ ಮಕ್ಕಳು ಮತ್ತು ಪಾಲಕರು ಗೊಂದಲದಲ್ಲಿ ಸಿಲುಕಿಕೊಂಡು ಅವರ ವಿದ್ಯಾಭ್ಯಾಸ ಹಾಳಾಗುತ್ತಿದೆ.
ಕೊರೋನಾದಿಂದಾಗಿ ಶಾಲಾ ಮಕ್ಕಳಿಗೆ ಸಂಕಷ್ಟ: ಸಚಿವ ಸುರೇಶ್ ಕುಮಾರ್
ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಉತ್ಸುಕರಾಗಿದ್ದರೂ ಅನೇಕ ಕಾರಣಗಳಿಂದ ಅಧ್ಯಯನ ಮಾಡಲು ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳು ಯಾರು ಬಗೆ ಹರಿಸಬೇಕು ಎಂಬ ಪ್ರಶ್ನೆ ವಿದ್ಯಾರ್ಥಿಗಳ ಪಾಲಕರನ್ನು ಕಾಡುತ್ತಿದೆ. ಆದರೆ, ವಿದ್ಯಾರ್ಥಿಗಳ ಈ ಕಷ್ಟಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ರೀತಿಯಿಂದ ಸ್ಪಂದಿಸಿ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂಬವುದು ಶಿಕ್ಷಣ ಪ್ರೇಮಿಗಳ ಹಾಗೂ ವಿದ್ಯಾರ್ಥಿ ಪಾಲಕರ ಒತ್ತಾಯ.
ಕಾಲೇಜು ಆರಂಭವಾಗಿ 20 ದಿನ ಕಳೆದರೂ ಮಕ್ಕಳು ಬರಲು ಆಗುತ್ತಿಲ್ಲ. ಅದಕ್ಕೆ ಮುಖ್ಯವಾಗಿ ವಸತಿ ನಿಲಯ ಸೌಲಭ್ಯವಿಲ್ಲದ್ದು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸರಿಯಾಗಿ ಬಸ್ಸಿನ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಲು ತೊಂದರೆಯಾಗುತ್ತದೆ. ಈ ಎಲ್ಲ ಸೌಲಭ್ಯಗಳು ಸರ್ಕಾರದ ಅಧಿಕಾರಿಗಳು ಶಿಕ್ಷಣ ಇಲಾಖೆದವರು ಗಮನಹರಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅನಕೂಲ ಎಂದು ಬಾದಾಮಿ ಪ್ರಾಚಾರ್ಯ ರವೀಂದ್ರ ಮೂಲಿಮನಿ ತಿಳಿಸಿದ್ದಾರೆ.
ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯದಲ್ಲಿ ಇರಲು ಅವಕಾಶ ಮಾಡಿಕೊಡಲಾಗಿದೆ. ಪಿಯುಸಿ ಪ್ರಥಮ, ಪದವಿ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ಓದುವ ವಿದ್ಯಾರ್ಥಿಳಿಗೆ ಇನ್ನೂ ಮೇಲಧಿಕಾರಿಗಳು ಆದೇಶವನ್ನು ನೀಡಿಲ್ಲ. ಆದೇಶ ಬಂದನಂತರ ಅವರಿಗೆ ಪರವಾನಗಿ ನೀಡಲಾಗುತ್ತದೆ ಎಂದು ಹಾಸ್ಟೆಲ್ ವಾರ್ಡನ್‌ಶಿಲ್ಪಾ ಗುರುಶಾಂತನ್ನವರ ಹೇಳಿದ್ದಾರೆ.
20 ದಿನಗಳಿಂದ ನಾವು ಕಾಲೇಜಿಗೆ ಬರಲು ಉತ್ಸಕರಾಗಿದ್ದರೂ ಈಚೆಗೆ ಬಸ್ ಪಾಸ್ ನೀಡುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ವಸತಿ ಬಸ್ ಬರದೆ ಬೆಳಗ್ಗೆ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಇತ್ತ ವಸತಿ ನಿಲಯಗಳಲ್ಲಿ ತಂಗಲು ಪರವಾನಗಿ ನೀಡುತ್ತಿಲ್ಲ. ಇವೆಲ್ಲದರ ಮಧ್ಯೆ ಕಾಲೇಜಿಗೆ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಕುಳಿತುಕೊಳ್ಳುವಂತಾಗಿದೆ ಎಂದು ಪದವಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸುಷ್ಮಿತಾ ಚವ್ಹಾಣ ತಿಳಿಸಿದ್ದಾರೆ.