ಸರ್ಕಾರಿ ಶಾಲಾ ಮಕ್ಕಳಿಗೆ ರೆಡಿಮೇಡ್ ಸಮವಸ್ತ್ರ ಇಲ್ಲ..!
ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಓದುತ್ತಿರುವ 45,45,749 ವಿದ್ಯಾರ್ಥಿಗಳ ಪೋಷಕರಿಗೆ ಸಮವಸ್ತ್ರದ ಬಟ್ಟೆಯನ್ನು ಹೊಲಿಸಿಕೊಳ್ಳುವ ವೆಚ್ಚ ಭರಿಸಬೇಕಾಗಿದೆ. ಒಂದು ಜೊತೆ ಬಟ್ಟೆ ಹೊಲಿಸಲು ಅಂದಾಜು ಸರಾಸರಿ 600-700 ರು. ವೆಚ್ಚವಾಗಲಿದೆ.
ಬೆಂಗಳೂರು(ಜು.10): ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ 2023-24ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಈಗಾಗಲೇ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರ ನೀಡಿರುವ ಶಿಕ್ಷಣ ಇಲಾಖೆ ಇದೀಗ 2ನೇ ಜೊತೆ ನೀಡಲು ಸಿದ್ಧತೆ ನಡೆಸಿದೆ. ಆದರೆ ಈ ಎರಡನೇ ಜೊತೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಸರ್ಕಾರ ಉಚಿತವಾಗಿ ನೀಡಲಿದ್ದು, ಬಟ್ಟೆಯ ಹೊಲಿಗೆ ವೆಚ್ಚವನ್ನು ಮಕ್ಕಳ ಪೋಷಕರೇ ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದರಿಂದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಓದುತ್ತಿರುವ 45,45,749 ವಿದ್ಯಾರ್ಥಿಗಳ ಪೋಷಕರಿಗೆ ಸಮವಸ್ತ್ರದ ಬಟ್ಟೆಯನ್ನು ಹೊಲಿಸಿಕೊಳ್ಳುವ ವೆಚ್ಚ ಭರಿಸಬೇಕಾಗಿದೆ. ಒಂದು ಜೊತೆ ಬಟ್ಟೆ ಹೊಲಿಸಲು ಅಂದಾಜು ಸರಾಸರಿ 600-700 ರು. ವೆಚ್ಚವಾಗಲಿದೆ.
ಬಾಗಲಕೋಟೆ: ನೋಡ ಬನ್ನಿ ಹಳಿಂಗಳಿ ಸರ್ಕಾರಿ ಶಾಲೆ..!
2022-23ನೇ ಸಾಲಿನಲ್ಲಿ ಎರಡನೇ ಜೊತೆ ಸಮವಸ್ತ್ರ ವಿತರಿಸದ ಸರ್ಕಾರ ಈಗ ಅದೇ ಸಮವಸ್ತ್ರಗಳನ್ನೇ 2023-24ನೇ ಸಾಲಿಗೆ ವಿತರಿಸುತ್ತಿದೆ. ಸಮವಸ್ತ್ರ ಸರಬರಾಜಿಗೆ ಟೆಂಡರ್ ಪಡೆದಿದ್ದ ಮಹಾರಾಷ್ಟ್ರ ಮೂಲದ ಕಂಪನಿಯಿಂದ ಈಗ ಸರಬರಾಜು ಪ್ರಕ್ರಿಯೆ ಆರಂಭಿಸಿದ್ದು, ಬಟ್ಟೆಯನ್ನು ಮಾತ್ರ ಕಂಪನಿ ಸರಬರಾಜು ಮಾಡಲಿದೆ. ಹೊಲಿಗೆಯ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಇಲಾಖೆ ಹೇಳಿದೆ.
ವರ್ಷವಿಡಿ ಒಂದೇ ಜೊತೆ ಸಮವಸ್ತ್ರ ತೊಟ್ಟು ಮಕ್ಕಳು ಶಾಲೆಗೆ ಬರಲಾಗುವುದಿಲ್ಲ. ಶುಚಿತ್ವದ ಪ್ರಶ್ನೆಯೂ ಇದೆ ಎನ್ನುವ ಕಾರಣಕ್ಕೆ ಕೆಲ ವರ್ಷಗಳಿಂದ ವಿದ್ಯಾ ವಿಕಾಸ ಯೋಜನೆಯಡಿ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ನೀಡಲಾಗುತ್ತಿದೆ. ಆದರೆ, ಕೋವಿಡ್ ಕಾರಣದಿಂದ 2019-20ರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರವನ್ನು ನೀಡಲಾಗಿಲ್ಲ. ಕಳೆದ 2022-23ನೇ ಸಾಲಿನಲ್ಲಿ ಕೂಡ ಎರಡನೇ ಜೊತೆ ಸಮವಸ್ತ್ರ ನೀಡಲು ಆದೇಶ ಮಾಡಲಾಗಿತ್ತಾದರೂ ಕಾರಣಾಂತರಗಳಿಂದ ಸರಬರಾಜಾಗಿರಲಿಲ್ಲ. ಮಹಾರಾಷ್ಟ್ರದ ಪದಮಚಂದ್ ವಿಲಾಪ್‌ಚಂದ್ ಜೈನ್ ಎಂಬ ಸಂಸ್ಥೆಗೆ ಸಮವಸ್ತ್ರ ಸರಬರಾಜಿಗೆ ಕಾರ್ಯಾದೇಶ ನೀಡಲಾಗಿತ್ತು. ಆ ಪ್ರಕಾರ ತಾಲ್ಲೂಕು ಮಟ್ಟದವರೆಗೆ ಅಂದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿವರೆಗೆ ಈ ಸಂಸ್ಥೆ ಸಮವಸ್ತ್ರ ಸರಬರಾಜು ಮಾಡಲಿದೆ. ಅಲ್ಲಿಂದ ಶಾಲೆಗಳಿಗೆ ಕಳುಹಿಸುವ ಜವಾಬ್ದಾರಿ ಇಲಾಖಾ ಅಧಿಕಾರಿಗಳದ್ದು ಎಂದು ಇಲಾಖೆಯ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಸಮವಸ್ತ್ರ ಯಾವ ಬಣ್ಣ?
ಎರಡನೇ ಜೊತೆ ಸಮವಸ್ತ್ರವು ಗಂಡು ಮಕ್ಕಳಿಗೆ ಮೇಲಂಗಿ ಲೈಟ್ ಬ್ಲೂ, ನಿಕ್ಕರ್ ನೇವಿ ಬ್ಲೂ, ಹೆಣ್ಣು ಮಕ್ಕಳ ಚೂಡಿದಾರ್ ಟಾಪ್ ಐದು ಬಣ್ಣ ಮಿಶ್ರಿತ ಚಕ್ಸ್ ಬಟ್ಟೆ(ಹಸಿರು, ಕೆಂಪು, ಬಿಳಿ, ಕಪ್ಪು ಮತ್ತು ಹಳದಿ), ಚೂಡಿದಾರ್ ಬಾಟಮ್ ಮತ್ತು ದುಪ್ಪಟ್ಟಾಹಸಿರು, ಸ್ಕರ್ಚ್ ನೇವಿ ಬ್ಲೂ ಬಣ್ಣದಿಂದ ಕೂಡಿರುತ್ತದೆ ಎಂದು ಇಲಾಖೆ ತಿಳಿಸಿದೆ.