ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಚಿವರಿಂದ ಡಬಲ್ ಗುಡ್ ನ್ಯೂಸ್

  • ವೃತ್ತಿಪರ ಕೋರ್ಸಗಳ ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಎಂಜನಿಯರಿಂಗ್ ಕಾಲೇಜು ಸಂಸ್ಥೆಗಳ ಜೊತೆಗೆ ಚರ್ಚೆ
  • ಯಾವುದೇ ವೃತ್ತಿಪರ ಕೋರ್ಸಗಳ ಶುಲ್ಕ ಹೆಚ್ಚಳ ಇಲ್ಲ. ಎಲ್ಲಾ ಕೋರ್ಸುಗಳಿಗೂ ಸಹ ಹಿಂದಿನ ರೀತಿಯಲ್ಲೇ ಶುಲ್ಕ 
No fee hike for engineering Says Minister ashwath Narayan snr

ಬೆಂಗಳೂರು (ಸೆ.29):    ಕೋವಿಡ್ (covid) ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಕೋರ್ಸಿನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೇ ಹಿಂದಿನ ದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr. C.S.Ashwathnarayan ) ಹೇಳಿದ್ದಾರೆ. 

ಕರ್ನಾಟಕ ಅನುದಾನ ರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಸಂಘ (KUPECA) ಮತ್ತು ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ವೃತ್ತಿ ಪರ ಕಾಲೇಜುಗಳ ಸಂಘದ (KRLMPCA)  ಪ್ರತಿನಿಧಿಗಳ ಜತೆ ಬುಧವಾರ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು. 

ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಇನ್ಫೊಸಿಸ್ ಜತೆ 3 ಒಡಂಬಡಿಕೆ: ಅಶ್ವತ್ಥನಾರಾಯಣ ಮಾಹಿತಿ

ಹೀಗಾಗಿ, ಈ ಮುಂಚಿನಂತೆಯೇ ಸರ್ಕಾರಿ ಕೋಟಾದಡಿ ಪ್ರವೇಶಾತಿ ಪಡೆಯುವವರಿಗೆ ರೂ 65,340, ರೂ 58,806 ಈ ಎರಡು ಸ್ಲ್ಯಾಬ್ ಗಳಲ್ಲಿ ಶುಲ್ಕಗಳು ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದರು. 

ಇದೇ ವೇಳೆ, ಖಾಸಗಿ ಕಾಲೇಜುಗಳು ‘ಇತರೆ ಶುಲ್ಕ’ ನೆಪದಲ್ಲಿ ಮಿತಿಮೀರಿ ಕಟ್ಟಿಸಿಕೊಳ್ಳುವುದಕ್ಕೂ ಕಡಿವಾಣ ಹಾಕಿ, ಗರಿಷ್ಠ ಮಿತಿಯನ್ನು 20 ಸಾವಿರ ರೂಪಾಯಿಕ್ಕೆ ನಿಗದಿಪಡಿಸಲಾಗಿದೆ. ಹಲವು ಕಾಲೇಜುಗಳು ಇತರೆ ಶುಲ್ಕದ ನೆಪದಲ್ಲಿ 70 ಸಾವಿರದವರೆಗೂ ಶುಲ್ಕ ವಸೂಲಿ ಮಾಡುತ್ತಿವೆ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಇದಕ್ಕೆ ಕಾಲೇಜು ಸಂಘದ ಪ್ರತಿನಿಧಿಗಳು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ವಿವರಿಸಿದರು. 

ಇನ್ನು ಮುಂದೆ ಪ್ರವೇಶ ಶುಲ್ಕ, ಇತರೆ ಶುಲ್ಕ, ಕೌಶಲ ಶುಲ್ಕ ಇದ್ಯಾವುದನ್ನೂ ನೇರವಾಗಿ ಕಾಲೇಜಿನಲ್ಲಿ ಕಟ್ಟುವಂತಿಲ್ಲ. ಇವೆಲ್ಲವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದಲ್ಲಿಯೇ ಪಾವತಿಸಬೇಕು. 

ಟೂಷನ್ ಶುಲ್ಕ‌ ಸೇರಿದಂತೆ ಇತರೆ ಶುಲ್ಕವನ್ನು ಕಟ್ಟಿಸಿಕೊಳ್ಳುವ ಮುನ್ನ ಪ್ರತಿಯೊಂದು ಕಾಲೇಜೂ ಯಾವ್ಯಾವ ಉದ್ದೇಶಕ್ಕೆ ಇದನ್ನು ಕಟ್ಟಿಸಿಕೊಳ್ಳಲಾಗುತ್ತದೆ ಎಂಬುದನ್ನು ಕೆಎಇ (KAE). ತಾಂತ್ರಿಕ ಶಿಕ್ಷಣ ಇಲಾಖೆ, ವಿಟಿಯು ಗಳಿಗೆ ಮಾಹಿತಿ ಕೊಡಬೇಕು. ಇದನ್ನು ಕಾಲೇಜುಗಳಲ್ಲಿ ಕಟ್ಟಲು ಅವಕಾಶ ಇರುವುದಿಲ್ಲ. ಕೆಇಎ ಗೇ ಕಟ್ಟಬೇಕು. ಜೊತೆಗೆ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಅಶ್ವತ್ಥ ನಾರಾಯಣ ಹೇಳಿದರು. 

ವಿಶ್ವವಿದ್ಯಾಲಯ ಶುಲ್ಕವನ್ನು ಈ ಮುಂಚೆ ಆಯಾ ಕಾಲೇಜಿನಲ್ಲಿ ಕಟ್ಟಬಹುದಿತ್ತು. ಆದರೆ, ಇನ್ನು ಮುಂದೆ ಅದನ್ನು ಕೂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲೇ (ಕೆಇಎ) ಕಟ್ಟಬೇಕು. ಈ ಮುಂಚೆ ಈ ಶುಲ್ಕ ಕಟ್ಟಿಸಿಕೊಳ್ಳುವಲ್ಲಿ ಇದ್ದ ಗೊಂದಲವನ್ನು ನಿವಾರಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು. 

ಇನ್ನು ಕೆಲವು ಕಾಲೇಜುಗಳು ವಿದ್ಯಾರ್ಥಿಗಳನ್ನು ಉದ್ಯಮಗಳಿಗೆ ಸಜ್ಜುಗೊಳಿಸಿ ಅವರ ನೇಮಕಾತಿ ಸಾಧ್ಯತೆ ಹೆಚ್ಚಿಸುವುದಕ್ಕಾಗಿ ನೀಡುತ್ತಿದ್ದ ಹೆಚ್ಚುವರಿ ತರಬೇತಿಗಾಗಿ ‘ಕೌಶಲ ಶುಲ್ಕ’ (ಸ್ಕಿಲ್ ಫೀಸ್) ಕಟ್ಟಿಸಿಕೊಳ್ಳುತ್ತಿದ್ದವು. ಇದು ಐಚ್ಛಿಕವಾಗಿದ್ದು, ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿ ಶುಲ್ಕ ಇರುತ್ತಿತ್ತು. ಈಗ ಇದಕ್ಕೆ ಕೂಡ ಗರಿಷ್ಠ ರೂ 20,000 ಮಿತಿ ನಿಗದಿಗೊಳಿಸಲಾಗಿದೆ. ಇದರಲ್ಲಿ 10,000 ರೂ, 15,000 ರೂ ಹಾಗೂ 20,000 ರೂ, ಹೀಗೆ ಮೂರು ಹಂತಗಳಿರುತ್ತವೆ. ವಿ.ಟಿ.ಯು. ತಂಡವು ಕಾಲೇಜುಗಳ ಪರಿಶೀಲನೆ ನಡೆಸಿ ಯಾವ ಕಾಲೇಜಿನಲ್ಲಿ ಎಷ್ಟು ಕಟ್ಟಿಸಿಕೊಳ್ಳಬೇಕು ಎಂದು ನಿಗದಿಗೊಳಿಸಲಿದೆ. ಅದರಂತೆ ಈ ಶುಲ್ಕವನ್ನು ಕೆಇಎ ಗೆ ಕಟ್ಟಬೇಕಾಗುತ್ತದೆ ಎಂದು ವಿವರಿಸಿದರು. 

ಸ್ಕಾಲರ್‌ಶಿಪ್ ಆರಂಭಿಸಿದ ಸೋನು ಸೂದ್, ಯಾರೆಲ್ಲ ಅರ್ಹರು ಚೆಕ್ ಮಾಡ್ಕೊಳ್ಳಿ

ಎಂಜಿನಿಯರಿಂಗ್ ಕೋರ್ಸ್ ಶುಲ್ಕವನ್ನು 30% ಹೆಚ್ಚಿಸಲು ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಬೇಡಿಕೆ ಮುಂದಿಟ್ಟಿದ್ದವು. ವಿಟಿಯು ಕುಲಪತಿ ಕರಿಸಿದ್ದಪ್ಪ ನೇತೃತ್ವದ ಸಮಿತಿಯು ಶೇ 15ರಿಂದ ಶೇ 20ರವರೆಗೆ ಹೆಚ್ಚಳ ಮಾಡಬಹುದೆಂದು ವರದಿಯಲ್ಲಿ ಅಭಿಪ್ರಾಯಪಟ್ಟಿತ್ತು. ಆದರೆ, ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡದಿರಲು ಖಾಸಗಿ ಕಾಲೇಜುಗಳ ಒಕ್ಕೂಟಗಳ ಮನವೊಲಿಸಲಾಯಿತು ಎಂದರು. 

ಕುಪೇಕಾ ದ ತಾಂತ್ರಿಕ ಸಮಿತಿಯ ಅಧ್ಯಕ್ಷ ಮಂಜುನಾಥ ಭಂಡಾರಿ, ಸದಸ್ಯರಾದ ಚಂದ್ರಶೇಖರ್ ರಾಜು, ರಮೇಶ್ ರಾಜು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಗಣೇಶ್ ಕಾರ್ಣಿಕ್ ಮತ್ತಿತರರು ಇದ್ದರು.

ಕನ್ನಡ ಮಾಧ್ಯಮ

ಇದೇ ಮೊದಲ ಬಾರಿಗೆ ಇಂಜಿನಿಯರಿಂಗ್ ಕ್ಲಾಸ್ ನ್ನು ಕನ್ನಡ ಮಾಧ್ಯಮದಲ್ಲಿ ಮಾಡೋಕೆ ನಾಲ್ಕು ಕಾಲೇಜು ಮುಂದೆ ಬಂದಿದೆ

ಬಾಲ್ಕಿ - ಖಂಡ್ರೆ ಕಾಲೇಜು
ಎಸ್ ಜೆ ಸಿ - ಚಿಕ್ಕಬಳ್ಳಾಪುರ
ಮಹಾರಾಜ - ಮೈಸೂರು

ವಿಜಯಪುರ - ಬಿ ಎಲ್ ಡಿ 

ಮೂವತ್ತು ಪ್ರತಿಶತ ಕನ್ನಡ ಮಾಧ್ಯಮಕ್ಕೆ ಸೀಟ್ ಮೀಸಲಿಡುವುದಾಗಿ ಹೇಳಿವೆ.

Latest Videos
Follow Us:
Download App:
  • android
  • ios