ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಇನ್ಫೊಸಿಸ್ ಜತೆ 3 ಒಡಂಬಡಿಕೆ: ಅಶ್ವತ್ಥನಾರಾಯಣ ಮಾಹಿತಿ
* ಕೌಶಲ ಕಲಿಕೆಗೆ ಒತ್ತು ಸೇರಿದಂತೆ ಎನ್ಇಪಿ ಆಶಯಗಳ ಅನುಷ್ಠಾನ
* ಇನ್ಫೊಸಿಸ್ ಜೊತೆ ಸದ್ಯದಲ್ಲೇ 3 ಒಡಂಬಡಿಕೆ
* ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿಕೆ
ಬೆಂಗಳೂರು, (ಸೆ.28): ವಿದ್ಯಾರ್ಥಿಗಳ ಕೌಶಲ ಕಲಿಕೆಗೆ ಒತ್ತು ನೀಡುವುದು ಸೇರಿದಂತೆ ರಾಷ್ಟ್ರೀಯ ಶಿಕ್ಷಣ ನೀತಿಯ (NEP2020) ಆಶಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಐಟಿ ದಿಗ್ಗಜ ಇನ್ಫೊಸಿಸ್ (Infosys ) ಕಂಪನಿ ಸದ್ಯದಲ್ಲೇ 3 ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಲಿವೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath Narayan) ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ವಿಕಾಸಸೌಧದಲ್ಲಿ ನಡೆದ ಇನ್ಫೋಸಿಸ್ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಗ್ಗೆ ಆತಂಕ ಬೇಡ, ಮುಕ್ತ ಚರ್ಚೆಗೆ ಸಿದ್ಧ ಎಂದ ಸಿಎಂ
ಕಾಲೇಜು 9College) ವಿದ್ಯಾರ್ಥಿಗಳಿಗೆ ಕೌಶಲ ಕಲಿಸುವ ಮೂರು ಸಾವಿರಕ್ಕೂ ಹೆಚ್ಚು ಕೋರ್ಸ್ ಗಳಿರುವ ‘ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್’ ಬಳಕೆ, ಕಾಲೇಜು ಉಪನ್ಯಾಸಕರಿಗೆ ಡಿಜಿಟಲ್ ತರಬೇತಿ, ಉದ್ಯೋಗ ಸಂಬಂಧಿ ಮಾರ್ಗದರ್ಶನಕ್ಕಾಗಿ ‘ಕ್ಯಾಂಪಸ್ ಕನೆಕ್ಟ್’ ಹಾಗೂ ಉನ್ನತ ಶಿಕ್ಷಣ ಕಾಲೇಜುಗಳಿಗೆ ಇನ್ಫೊಸಿಸ್ ವತಿಯಿಂದ 15,000 ಡಿಬಾಂಡೆಡ್ ಕಂಪ್ಯೂಟರುಗಳ ಕೊಡುಗೆ, ಇವು ಒಡಂಬಡಿಕೆಗಳಾಗಿರುತ್ತವೆ ಎಂದು ಸಚಿವರು ವಿವರಿಸಿದರು.
‘ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್’ ಎಂಬುದು ಸಮಗ್ರ ಡಿಜಿಟಲ್ ಸಾಕ್ಷರತಾ ವೇದಿಕೆಯಾಗಿದ್ದು ಪರಿಣಾಮಕಾರಿ ಡಿಜಿಟಲ್ ಕಲಿಕೆ, ತಾಂತ್ರಿಕತೆ ಆಧಾರಿತ ಜೀವನ ಕೌಶಲ ಕೋರ್ಸ್ ಗಳು, ಗೇಮಿಫಿಕೇಷನ್, ಪ್ರತ್ಯಕ್ಷ ತರಗತಿಗಳು, ಉದ್ಯಮ ಪ್ರಮಾಣಪತ್ರೀಕರಣ (ಇಂಡಸ್ಟ್ರಿ ಸರ್ಟಿಫಿಕೇಷನ್), ಮೇಕರ್ಸ್ ಲ್ಯಾಬ್, ವೃತ್ತಿ ಮಾರ್ಗದರ್ಶನ (ಉನ್ನತ ಶಿಕ್ಷಣ)ವನ್ನು ಒಳಗೊಂಡಿರುತ್ತದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.
ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳಿಗೆ ಗೆಸ್ಚರ್ ಕಂಪ್ಯೂಟಿಂಗ್, ಬಯೋಮೆಟ್ರಿಕ್ಸ್ ತಂತ್ರಜ್ಞಾನ ಅಳವಡಿಕೆ, ತರಬೇತಿಗಾಗಿ ವರ್ಚ್ಯುಯಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ ತಾಂತ್ರಿಕತೆ ಬಳಕೆ, ಕಲಿಕಾ ದತ್ತಾಂಶವನ್ನು ಸಾಧನೆಯ ಫಲಿತಾಂಶದ ಸಂಯೋಜನೆ, ಆರೋಗ್ಯಕರ ಸ್ಪರ್ಧಾ ಮನೋಭಾವ ಮೂಡಿಸಲು ಗೇಮಿಫಿಕೇಷನ್ ಮತ್ತು ಡಿಜೈನ್ ತತ್ವಗಳ ಬಳಕೆ, ಪಠ್ಯಸಾಮಗ್ರಿ ರೂಪಿಸಲು ಆಟೋಮೇಷನ್ ಹಾಗೂ ರೊಬೋಟಿಕ್ ಉಪಕರಣಗಳ ಬಳಕೆ ಇವು ಇದರ ಭಾಗವಾಗಿರುತ್ತವೆ ಎಂದರು.
ಈ ಒಡಂಬಡಿಕೆಗಳ ಭಾಗವಾಗಿ ಸಂಸ್ಥೆಗಳ ನಡುವೆ ಉತ್ಕೃಷ್ಠ ಕ್ರಮಗಳ ವಿನಿಮಯಕ್ಕಾಗಿ ‘ಎನ್ಇಪಿ ಕಮ್ಯುನಿಟಿ’ಯನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ಎನ್.ಇ.ಪಿ. ರೂಪುರೇಷೆಗಳನ್ನು ಅನುಷ್ಠಾನಗೊಳಿಸಲು ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಪ್ರತಿಭಾವಂತರನ್ನು ಉತ್ತೇಜಿಸುವುದಕ್ಕಾಗಿ ಕೆಡಿಇಎಂ (ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್) ಹಾಗೂ ಇನ್ಫೊಸಿಸ್ ನಡುವೆ ಸಹಭಾಗಿತ್ವ ಏರ್ಪಡಲಿದೆ ಎಂದು ಸಚಿವರು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಷಿ, ಇನ್ಫೊಸಿಸ್ ಕಂಪನಿಯ ಹಿರಿಯ ಉಪಾಧ್ಯಕ್ಷರಾದ ತಿರುಮಲ ಆರೋಹಿ, ಗುರುರಾಜ್ ದೇಶಪಾಂಡೆ, ಉಪಾಧ್ಯಕ್ಷ ಸತೀಶ್ ನಂಜಪ್ಪ, ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಇನ್ಫೋಸಿಸ್ ತರಬೇತಿ ಪ್ರಿನ್ಸಿಪಲ್ ಕಿರಣ್ ಎನ್.ಜಿ. ಮತ್ತು ಸೀನಿಯರ್ ಲೀಡ್ ಪ್ರಿನ್ಸಿಪಲ್ ವಿಕ್ಟರ್ ಸುನರಾಜ್ ಅವರು ಇದ್ದರು.