ಪಿಯು- 2 : ತಪ್ಪು ಪ್ರಶ್ನೆ ಮೌಲ್ಯಮಾಪನವಿಲ್ಲ  ಸರಿ ಇರುವ ಪ್ರಶ್ನೆಗಳಿಗೆ ಬಂದ ಅಂಕ 100 ಮಾರ್ಕ್ಸ್‌ಗೆ ಪರಿವರ್ತನೆ ನಿರ್ಧಾರ  ಅರ್ಧವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ದೋಷ ಪ್ರಕರಣ  

ವರದಿ : ಲಿಂಗರಾಜು ಕೋರಾ

 ಬೆಂಗಳೂರು(ಡಿ.28): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ (PUC) ಅರ್ಧ ವಾರ್ಷಿಕ ಪರೀಕ್ಷೆಯ ವಿವಿಧ ವಿಷಯಗಳ ಪ್ರಶ್ನೆ ಪತ್ರಿಕೆಗಳಲ್ಲಿ ಕೆಲ ಪ್ರಶ್ನೆಗಳನ್ನು ( Question ) ತಪ್ಪಾಗಿ ಹಾಗೂ ಪಠ್ಯೇತರವಾಗಿ ಕೇಳಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಂತಹ ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಕೈಬಿಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ (education Department) ಸೂಚನೆ ನೀಡಿದೆ. ತನ್ನಿಂದಲೇ ಆಗಿರುವ ಎಡವಟ್ಟಿಗೆ ತೇಪೆ ಹಚ್ಚಲು ಮುಂದಾಗಿರುವ ಪಿಯು ಇಲಾಖೆಯು ಲೋಪಗಳಿಂದ ಕೂಡಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಪರಿಪಾಠ ಕೈ ಬಿಟ್ಟು ಈ ಬಾರಿ ಸರಿ ಇರುವ ಪ್ರಶ್ನೆಗಳಿಗೆ ಬಂದ ಅಂಕಗಳನ್ನೇ (Marks) 100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶ ನೀಡಲು ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಎಲ್ಲ ಜಿಲ್ಲಾ ಪದವಿ ಪೂರ್ವ ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

ಸಾಮಾನ್ಯವಾಗಿ ಯಾವುದೇ ಪರೀಕ್ಷೆಯಲ್ಲಿ (exam) ಲೋಪಗಳಿಂದ ಕೂಡಿದ ಪ್ರಶ್ನೆಗಳಿಗೆ ಕೃಪಾಂಕ (ಗ್ರೇಸ್‌ ಅಂಕ) ನೀಡಬೇಕೆಂಬ ನಿಯಮ ಇದೆ. ಆದರೆ, ಈ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಲೋಪಗಳಿಂದ ಕೂಡಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಪರಿಪಾಠದಿಂದ ಇಲಾಖೆ ದೂರ ಸರಿದಿದೆ. ಕೃಪಾಂಕದ ಬದಲು ಯಾವ್ಯಾವ ಜಿಲ್ಲೆಗಳ ಪ್ರಶ್ನೆ ಪತ್ರಿಕೆಗಳಲ್ಲಿ ಇಂತಹ ಲೋಪಗಳಾಗಿವೆಯೋ ಅಂತಹ ಎಲ್ಲ ಪ್ರಶ್ನೆಗಳನ್ನು ಮೌಲ್ಯ ಮಾಪನ ವ್ಯಾಪ್ತಿಯಿಂದ ಕೈ ಬಿಟ್ಟು, ಸರಿಯಾಗಿರುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು (students) ಬರೆದಿರುವ ಉತ್ತರಗಳನ್ನು ಮಾತ್ರ ಮೌಲ್ಯ ಮಾಪನ ಮಾಡಿ ಆ ಅಂಕಗಳನ್ನು 100 ಅಂಕಗಳಿಗೆ ಮಾರ್ಪಡಿಸಿ ಫಲಿತಾಂಶ ನೀಡಬೇಕು ಎಂದು ಎಲ್ಲ ಜಿಲ್ಲೆಗಳ ಪದವಿ ಪೂರ್ವ ಉಪನಿರ್ದೇಶಕರಿಗೆ (ಡಿಡಿಪಿಯು DDPU) ಇಲಾಖೆ ನಿರ್ದೇಶಕರಾದ ಸ್ನೇಹಲ್‌ ಅವರು ಸೂಚನೆ ನೀಡಿದ್ದಾರೆ.

ಗ್ರೇಸ್‌ ಅಂಕ ಇಲ್ಲ

ದ್ವಿತೀಯ ಪಿಯು ವಿದ್ಯಾರ್ಥಿಗಳ (Students) ಅರ್ಧ ವಾರ್ಷಿಕ ಪರೀಕ್ಷೆಗೆ ಈ ಬಾರಿ ಇಲಾಖೆಯಿಂದಲೇ ಪ್ರತೀ ಜಿಲ್ಲೆಗೂ ಪ್ರತ್ಯೇಕ ಸೆಟ್‌ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡಲಾಗಿತ್ತು. ಆದರೆ, ಕೆಲ ಜಿಲ್ಲೆಗಳಿಗೆ ನೀಡಿರುವ ಪ್ರಶ್ನೆ ಪತ್ರಿಕೆಗಳಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಗ್ರೇಸ್‌ ಅಂಕದ ಬದಲು ಅಂತಹ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಹೊರಗಿಟ್ಟು ಸರಿಯಾದ ಪ್ರಶ್ನೆಗಳಿಗೆ ಮಾತ್ರ ಮೌಲ್ಯಮಾಪನ ನಡೆಸಿ ಬಂದ ಅಂಕಗಳನ್ನು ಶೇ.100ಕ್ಕೆ ಪರಿವರ್ತಿಸಿ ಫಲಿತಾಂಶ ನೀಡಲು ಸೂಚಿಸಲಾಗಿದೆ.

- ಸ್ನೇಹಲ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು

ಇಂಗ್ಲಿಷ್‌ನ 30 ಅಂಕದ ಪ್ರಶ್ನೆಗಳ ಮೌಲ್ಯಮಾಪನ ಇಲ್ಲ:

ಇಲಾಖೆ ನಿರ್ದೇಶಕನದ ಬೆನ್ನಲ್ಲೇ ವಿವಿಧ ಜಿಲ್ಲಾ ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ಈ ಸಂಬಂಧ ಸುತ್ತೋಲೆ ಹೊರಡಿಸಲಾರಂಭಿಸಿದ್ದಾರೆ. ಮಂಗಳೂರು ಜಿಲ್ಲಾ ಡಿಡಿಪಿಯು ಹೊರಡಿಸಿರುವ ಸುತ್ತೋಲೆ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

ಅವರು ತಮ್ಮ ಜಿಲ್ಲೆಗೆ ನೀಡಿದ್ದ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯ ಭಾಗ 1ರಲ್ಲಿ 1, 3, 6, 7, 8, 11 ಮತ್ತು 12ನೇ ಪ್ರಶ್ನೆ, ಭಾಗ 2ರ 20, 21 ಮತ್ತು 22ನೇ ಪ್ರಶ್ನೆ, ಭಾಗ 3ರಲ್ಲಿ 24(ಎಚ್‌), ಭಾಗ 4ರಲ್ಲಿ 25ನೇ ಪ್ರಶ್ನೆ ಮತ್ತು ಭಾಗ 5ರಲ್ಲಿನ 29 ಹಾಗೂ 33ನೇ ಪ್ರಶ್ನೆಗಳಲ್ಲಿ ಲೋಪಗಳಾಗಿವೆ. ಇವುಗಳ ಒಟ್ಟು ಅಂಕ 30. ಇವುಗಳನ್ನು ಹೊರತುಪಡಿಸಿ ಉಳಿದ ಪ್ರಶ್ನೆಗಳ ಉತ್ತರಗಳನ್ನು ಮಾತ್ರ ಮೌಲ್ಯಮಾಪನ ಮಾಡಿ, ಬಂದ ಅಂಕಗಳನ್ನು ಶೇ.100 ಅಂಕಗಳಿಗೆ ಪರಿವರ್ತಿಸಿ ಫಲಿತಾಂಶ ನೀಡಲು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ.