ಎನ್‌ಇಪಿಯಲ್ಲಿ ಹಿಂದಿ ಹೇರಿಕೆ ಇಲ್ಲ: ಧರ್ಮೇಂದ್ರ ಪ್ರಧಾನ್
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆಯ ಯಾವ ಉದ್ದೇಶವೂ ಇಲ್ಲ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಮಂಗಳೂರು (ಅ.16): ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆಯ ಯಾವ ಉದ್ದೇಶವೂ ಇಲ್ಲ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ ಘಟಿಕೋತ್ಸವ ಹಾಗೂ ಕೇಂದ್ರೀಯ ಸಂಶೋಧನಾ ಸೌಲಭ್ಯ ಮತ್ತು ಸ್ಕೂಲ್ ಆಫ್ ಇಂಟರ್ ಡಿಸಿಪ್ಲಿನರಿ ಸ್ಟಡೀಸ್ ಕಟ್ಟಡ ಲೋಕಾರ್ಪಣೆಗೆ ಮುನ್ನ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮಗೆ ಎಲ್ಲ ಭಾಷೆಗಳೂ ಮುಖ್ಯ. ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ. ಎಲ್ಲ ಭಾಷೆಗಳಂತೆ ಹಿಂದಿಯೂ ಒಂದಾಗಿದೆ. ಎಲ್ಲ ರಾಜ್ಯಗಳೂ ಆಯಾ ರಾಜ್ಯದ ಸ್ಥಳೀಯ ಹಾಗೂ ಮಾತೃ ಭಾಷೆಗೆ ಆದ್ಯತೆ ನೀಡಲಿವೆ. ಮಧ್ಯಪ್ರದೇಶವು ಹಿಂದಿಯಲ್ಲೇ ವೈದ್ಯಕೀಯ, ಕಾನೂನು, ತಾಂತ್ರಿಕ ಶಿಕ್ಷಣ ನೀಡಲಿದೆ. ಅದು ಅವರವರಿಗೆ ಬಿಟ್ಟವಿಷಯ ಎಂದರು.ದೇಶದ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಮೂರನೇ ವರ್ಷದಲ್ಲಿದೆ. ಪ್ರಾಥಮಿಕ ಶಾಲೆಯಿಂದ ಸಂಶೋಧನಾ ತರಗತಿ ವರೆಗೆ ತೃಪ್ತಿಕರವಾಗಿ ಎನ್‌ಇಪಿ ಜಾರಿಯಾಗುತ್ತಿದೆ. ಎಲ್ಲ ರಾಜ್ಯಗಳೂ, ಶಿಕ್ಷಣ ಸಂಸ್ಥೆಗಳು ಇದನ್ನು ಸ್ವಾಗತಿಸಿವೆ ಎಂದು ಅವರು ಹೇಳಿದರು.
ಭಾರತೀಯ ಐಐಟಿ ಮತ್ತು ಐಐಐಟಿಗಳು ಕೇವಲ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ, ಜ್ಞಾನದ ದೇಗುಲಗಳು. ಪ್ರಸಕ್ತ ಸುಮಾರು 10ರಷ್ಟುದೇಶಗಳಲ್ಲಿ ಐಐಟಿಗಳ ಸ್ಥಾಪನೆಯಾಗಲಿವೆ. ಕೇಂದ್ರ ಶಿಕ್ಷಣ ಸಚಿವಾಲಯದ ನೆರವಿನಿಂದ ಹೊರದೇಶಗಳಲ್ಲಿ ಐಐಟಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ . ಭಾರತ ಇದಕ್ಕೆ ಮಾರ್ಗದರ್ಶನ ನೀಡಲಿದೆ ಎಂದರು.
ಎನ್‌ಐಟಿಕೆಯು ಶಿಕ್ಷಣ, ಸಂಶೋಧನೆ ಜತೆಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸೌಲಭ್ಯ, ಸೋಲಾರ್ ಪ್ಯಾನಲ್, ಎಲೆಕ್ಟ್ರಿಕ್ ಸ್ಕೂಟರ್ ಮೊದಲಾದ ನವೀಕರಿಸಬಹುದಾದ ಇಂಧನ ಬಳಕೆ ಮಾಡಿ, ಸುಸ್ಥಿರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಸಚಿವರು ಶ್ಲಾಘಿಸಿದರು.
ಭಾಷಾ ನಾಶಕ್ಕೆ ಅಮಿತ್ ಶಾ ಯತ್ನ: ಕುಮಾರಸ್ವಾಮಿ ಕಿಡಿ
ಕರ್ನಾಟಕದಲ್ಲಿ ಹಿಂದಿ ಬೇಡವೇ ಬೇಡ, ಪ್ರತಿಭಟನೆ: ಕರ್ನಾಟಕದಲ್ಲಿ ಹಿಂದಿ ಬೇಡವೇ ಬೇಡ ಎಂದು ಆಗ್ರಹಿಸಿ ಕನ್ನಡ ಚಳವಳಿ ಕೇಂದ್ರ ಸಮಿತಿಯವರು ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಶನಿವಾರ ಪ್ರತಿಭಟಿಸಿದರು. ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಅವರ ಕರೆಯ ಮೇರೆಗೆ ಮೈಸೂರಿನಲ್ಲೂ ಪ್ರತಿಭಟಿಸಿದ ಸಮಿತಿಯವರು, ರಾಜ್ಯದಲ್ಲಿ ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯನ್ನು ಕೈ ಬಿಡಬೇಕು. ಸ್ಥಳೀಯ ಭಾಷೆಯಾದ ಕನ್ನಡಕ್ಕೆ ಪ್ರಾಧಾನ್ಯತೆ ಕೊಡಬೇಕು. ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲೂ ಕನ್ನಡದಲ್ಲೇ ಸಮಸ್ತ ವ್ಯವಹಾರ ನಡೆಸಬೇಕು ಎಂದು ಒತ್ತಾಯಿಸಿದರು.
ಇನ್ನು Hindiಯಲ್ಲೂ MBBS ಪಾಠ: ಇಂದು ಅಮಿತ್ ಶಾ ಚಾಲನೆ
ಕರ್ನಾಟಕದಲ್ಲಿ ಕನ್ನವೇ ಸಾರ್ವಭೌಮ. ಹೀಗಾಗಿ, ಕೇಂದ್ರ ಸರ್ಕಾರದ ರೈಲ್ವೆ, ಅಂಚೆ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಬೇಕು. ಹಿಂದಿ ಭಾಷೆ ಬೇಡವೇ ಬೇಡ ಎಂದು ಅವರು ಒತ್ತಾಯಿಸಿದರು. ಕನ್ನಡ ಚಳವಳಿ ಕೇಂದ್ರ ಸಮಿತಿಯ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಮುಖಂಡರಾದ ತಾಯೂರು ವಿಠಲಮೂರ್ತಿ, ಸಿದ್ದಲಿಂಗಪ್ಪ, ಪಿ.ಸಿ. ನಾಗರಾಜ್, ಬಸಪ್ಪ, ಪ್ರಕಾಶ್, ಮಲ್ಲಣ್ಣ ಮೊದಲಾದವರು ಇದ್ದರು.