ಬೆಂಗಳೂರು (ಅ.02) : ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅಕ್ಟೋಬರ್‌ 3ರಿಂದ 26ರ ವರೆಗೆ ನಿಗದಿಪಡಿಸಲಾಗಿದ್ದ ಮಧ್ಯಂತರ ರಜೆಯನ್ನು ರದ್ದುಪಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರು ಈ ಅವಧಿಯಲ್ಲಿ ಪ್ರಸ್ತುತ ನಡೆಯುತ್ತಿರುವ ‘ವಿದ್ಯಾಗಮ’ ಕಲಿಕಾ ಕಾರ್ಯಕ್ರಮವನ್ನು ಯಥಾವತ್ತಾಗಿ ಮುಂದುವರೆಸುವಂತೆ ಸೂಚಿಸಿದೆ.

ಈ ಸಂಬಂಧ ಇಲಾಖೆಯ ಪ್ರೌಢ ಶಿಕ್ಷಣ ನಿದೇಶಕ ಅವರು ಗುರುವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು (ಡಿಡಿಪಿಐ), ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಜ್ಞಾಪನ ಪತ್ರ ರವಾನಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇದುವರೆಗೂ ರಾಜ್ಯದಲ್ಲಿ ಶಾಲೆಗಳನ್ನು ತೆರೆಯದ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಸಾಕಷ್ಟುಹಿಂದೆ ಬಿದ್ದಿದೆ. ಈಗ 23 ದಿನ ಮಧ್ಯಂತರ ರಜೆಯನ್ನು ನೀಡಿದರೆ ವಿದ್ಯಾಗಮ ಕಾರ್ಯಕ್ರಮವೂ ನಿಂತುಹೋಗುತ್ತದೆ. ಹಾಗಾಗಿ ಈ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ: ಕೊರೋನಾ ಮಧ್ಯೆ ತರಗತಿ ನಡೆಸುತ್ತಿವೆ ಕೆಲ ಶಾಲೆಗಳು

ಆದೇಶ ಹೀಗಿದೆ:  2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೈಕ್ಷಣಿಕ ಅವಧಿಗಳು ಮತ್ತು ರಜಾ ಅವಧಿಗಳನ್ನು ನಿಗದಿಗೊಳಿಸಿ ಕಳೆದ ಫೆಬ್ರವರಿ 14ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದೆ. 

ಅದರಂತೆ ಸುತ್ತೋಲೆಯಲ್ಲಿ ಅಕ್ಟೋಬರ್‌ 3ರಿಂದ 26ರ ವರೆಗೆ ನಿಗದಿಪಡಿಸಿದ ಮಧ್ಯಂತರ ರಜೆಯನ್ನು ಸಹ ರದ್ದುಪಡಿಸಿದೆ. ಪ್ರಸಕ್ತ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಇಲಾಖೆಯಿಂದ ವಿವಿಧ ಹಂತಗಳಲ್ಲಿ ಜಾರಿಗೊಳಿಸುವ ಆದೇಶದಂತೆ ಕಾರ್ಯನಿರ್ವಹಿಸುವುದು. ಆಗಸ್ಟ್‌ 4ರಿಂದ ನಡೆಸಲಾಗುತ್ತಿರುವ ‘ವಿದ್ಯಾಗಮ’ ಕಲಿಕಾ ಕಾರ್ಯಕ್ರಮವನ್ನು ಯಥಾವತ್ತಾಗಿ ಮುಂದಿನ ಆದೇಶದವರೆಗೆ ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ವಹಿಸುವುದು ಎಂದು ಸೂಚಿಸಲಾಗಿದೆ.