ಬೆಂಗಳೂರು(ಅ.02): ಕೋವಿಡ್‌ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸದಂತೆ ಸರ್ಕಾರದ ಸ್ಪಷ್ಟ ಆದೇಶ ಇದ್ದರೂ, ಅದನ್ನು ಉಲ್ಲಂಘಿಸಿ ನಗರದ ಕೆಲ ಖಾಸಗಿ ಶಾಲೆಗಳು ತರಗತಿಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಕಸ್ತೂರ ಬಾ ನಗರದ ಆಯುಷಾ ಇಂಗ್ಲೀಷ್‌ ಶಾಲೆಯ ಆಡಳಿತ ಮಂಡಳಿ ಸರ್ಕಾರದ ಆದೇಶ ಗಾಳಿಗೆ ತೂರಿ, ಶಾಲೆ ಆರಂಭಿಸಿ 7 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದೆ. ಕಳೆದ ಕೆಲ ದಿನಗಳಿಂದ ಈ ಶಾಲೆಯಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ನಿತ್ಯ ಬೆಳಗ್ಗೆ 10ರಿಂದ 3 ಗಂಟೆ ವರೆಗೂ ತರಗತಿಯಲ್ಲೇ ಪಠ್ಯ ಬೋಧನೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಶಾಲೆಗಳ ಆರಂಭ ಅಕ್ಟೋಬರ್ 10ರ ನಂತರ ನಿರ್ಧಾರ: ಸಚಿವ ಸುರೇಶ್ ಕುಮಾರ್

ಆದರೆ, ಶಾಲೆಯವರು ಹೇಳುವುದೇ ಬೇರೆ ಆನ್‌ಲೈನ್‌ ಬೋಧನೆಯಲ್ಲಿ ಅರ್ಥವಾಗದ ಪಠ್ಯ ವಿಷಯಗಳಲ್ಲಿನ ಗೊಂದಲ, ಸಂದೇಹಗಳನ್ನು ಬಗೆಹರಿಸಿಕೊಳ್ಳಲು ಕೆಲ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅವಕಾಶ ನೀಡಲಾಗಿದೆ. ಪ್ರತಿ ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. ಮಾಸ್ಕ್‌ ಧರಿಸಿ ಮಕ್ಕಳು ಶಾಲೆಗೆ ಬಂದಿದ್ದಾರೆ. ಸಂದೇಹ ಬಗೆಹರಿಸಿಕೊಳ್ಳಲು ಶಾಲೆಗೆ ಭೇಟಿ ನೀಡಲು ಸರ್ಕಾರವೇ ಅನುಮತಿ ನೀಡಿತ್ತು.

ಆದರೆ, ಈ ಅನುಮತಿಯನ್ನು ಬುಧವಾರವಷ್ಟೇ ರದ್ದುಪಡಿಸಿರುವ ವಿಷಯ ನಮಗೆ ತಿಳಿಯದ ಕಾರಣ ವಿದ್ಯಾರ್ಥಿಗಳ ಭೇಟಿಗೆ ಅವಕಾಶ ಮುಂದುವರೆಸಲಾಗಿತ್ತು. ಈಗ ಆದೇಶದ ಮಾಹಿತಿ ದೊರೆತಿದ್ದು, ಇನ್ಮುಂದೆ ವಿದ್ಯಾರ್ಥಿಗಳ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಆದರೆ, ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.