5 ವರ್ಷದ ಲಾ ಪದವಿ  ಪರೀಕ್ಷೆಗಳ ರದ್ದತಿ ಇಲ್ಲ - ಹೈ ಕೋರ್ಟ್  ಕಾನೂನು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದ ಅರ್ಜಿ ವಜಾ 

ಬೆಂಗಳೂರು (ಡಿ.24) : ಐದು ವರ್ಷದ ಕಾನೂನು ಪದವಿಯ (Law) ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ (ಆಫ್‌ಲೈನ್‌) ನಡೆಸಲು ಕರ್ನಾಟಕ (Karnataka) ರಾಜ್ಯ ಕಾನೂನು ವಿಶ್ವವಿದ್ಯಾಲಯವು (ಕೆಎಸ್‌ಎಲ್‌ಯು KSLU) ಹೊರಡಿಸಿದ್ದ ಸುತ್ತೋಲೆ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ (High Court) ವಜಾಗೊಳಿಸಿದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗೆ ಹಾಜರಾಗಲು ಕಂಪ್ಯೂಟರ್‌ ಮತ್ತು ಇಂಟರ್‌ನೆಟ್‌ ಮುಂತಾದ ಸೌಲಭ್ಯಗಳು ಇರಲಿಲ್ಲ. ವಿದ್ಯಾರ್ಥಿಗಳಿಗೆ (Students) ಸರಿಯಾದ ಶಿಕ್ಷಣ ದೊರೆತಿಲ್ಲ. ಇದೇ ಕಾರಣಕ್ಕೆ ಮೂರು ವರ್ಷದ ಕಾನೂನು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಹೊರಡಿಸಿದ ಅಧಿಸೂಚನೆಯನ್ನು ರದ್ದುಪಡಿಸಿ 2021ರ ಡಿ.14ರಂದು ಧಾರವಾಡ ಹೈಕೋರ್ಟ್‌ (High Court) ಪೀಠ ಆದೇಶಿಸಿದೆ. ಅದೇ ಮಾದರಿಯಲ್ಲಿ ಐದು ವರ್ಷದ ಕಾನೂನು ಪದವಿಯ ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್‌ ಪರೀಕ್ಷೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅದನ್ನು ಕೋರ್ಟ್‌ ವಜಾಗೊಳಿಸಿದೆ.

ಪ್ರವೇಶ ಪತ್ರ ಹರಿದು ಕಾನೂನು ವಿದ್ಯಾರ್ಥಿಗಳ ಪ್ರತಿಭಟನೆ : ಶಿವಮೊಗ್ಗದಲ್ಲಿ (Shivamogga) ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ನಡುವೆ ಮಲತಾಯಿ ಧೋರಣೆಯನ್ನು ಖಂಡಿಸಿ ಇಂದು ಸಿಬಿಆರ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಲಾ ನ 2ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಿಶ್ವವಿದ್ಯಾಲಯವು ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ, ಯುಸಿಜಿ (UGC) ಆದೇಶವನ್ನು ಮೀರಿ ಪರೀಕ್ಷೆ ನಡೆಸುತ್ತಿದೆ ಎಂದು ಆರೋಪಿಸಿದರು. ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯ ಪರೀಕ್ಷೆ ನಡೆಸದಂತೆ ತೀರ್ಪು ನೀಡಿದ್ದರೂ, ಅದನ್ನು ಲೆಕ್ಕಿಸದೇ ಪರೀಕ್ಷೆ ನಡೆಸಿದ್ದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಹೇಳಿದರಲ್ಲದೆ, ಪ್ರವೇಶ ಪತ್ರವನ್ನು ಹರಿಯುವ ಮೂಲಕ ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಸಿಎಂ ಚಿನ್ಮಯ, ನಂದೀಶ್‌,ದುಷ್ಯಂತ,ರಶ್ಮಿ, ಯಶಸ್ವಿನಿ, ಮಾನಸ, ಗೌತಮ್‌ ಹಾಗೂ ಹಲವು ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.

ಎಲ್‌ಎಲ್‌ಬಿ ಕೋರ್ಸ್ ಪರೀಕ್ಷಾ ವರದಿ ಕೇಳಿದ ಹೈ ಕೋರ್ಟ್ :

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ (4th semister) ಆಫ್‌ಲೈನ್‌ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂಬುದರ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (Karnataka State Law University -KSLU) ರಾಜ್ಯ ಉಚ್ಚ ನ್ಯಾಯಾಲಯ (High Court of Karnataka) ನಿರ್ದೇಶನ ನೀಡಿದೆ. 

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಪರೀಕ್ಷೆ (Offline exam) ನಡೆಸುವ ಸಂಬಂಧ ಕೆಎಸ್‌ಎಲ್‌ಯು ಡಿಸೆಂಬರ್‌ 1ರಂದು ಹೊರಡಿಸಿದ್ದ ಸುತ್ತೋಲೆ ವಜಾ ಮಾಡುವಂತೆ ಕೋರಿ ಕೋಲಾರದ ಕೆ.ಪಿ. ಪ್ರಭುದೇವ್ ಸೇರಿದಂತೆ ಒಟ್ಟು ಒಂಬತ್ತು ಮಂದಿ ವಿದ್ಯಾರ್ಥಿಗಳು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ವಿಶ್ವವಿದ್ಯಾಲಯಕ್ಕೆ (University) ಸೂಚನೆ ಹೊರಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಎಂ.ಪಿ.ಶ್ರೀಕಾಂತ್, 'ಮೂರು ವರ್ಷದ ಕಾನೂನು ಪದವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರಿಕ್ಷೆ ನಡೆಸಲು ವಿಶ್ವವಿದ್ಯಾಲಯ ಹೊರಡಿಸಿದ ಸುತ್ತೋಲೆಯನ್ನು ಇದೇ 14ರಂದು ಧಾರವಾಡ ಹೈಕೋರ್ಟ್ ಪೀಠ ರದ್ದುಪಡಿಸಿದೆ. ಇದೇ ಮಾದರಿಯಲ್ಲಿ ಐದು ವರ್ಷದ ಕಾನೂನು ಪದವಿಯ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯನ್ನೂ ರದ್ದುಪಡಿಸಬೇಕು.

ಐದು ಮತ್ತು ಮೂರು ವರ್ಷದ ಕಾನೂನು ಪದವಿ ವಿದ್ಯಾರ್ಥಿಗಳು ನಡುವೆ ತಾರತಮ್ಯ ಮಾಡಬಾರದು' ಎಂದು ನ್ಯಾಯಪೀಠದ ಮುಂದೆ ಮನವಿ ಮಾಡಿಕೊಂಡರು. ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಧಾರವಾಡ ಪೀಠವು ಅಧಿಸೂಚನೆಯನ್ನು ವಜಾ ಮಾಡಿದೆ. ಐದು ಮತ್ತು ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಪೀಠವು ಯಾವುದೇ ವ್ಯತ್ಯಾಸ ಗುರುತಿಸಿಲ್ಲ. ಇದು ಎಲ್ಲರಿಗೂ ಅನ್ವಯಿಸುತ್ತದೆ`

ಇದಕ್ಕೆ ಕೆಎಸ್‌ಎಲ್‌ಯು (KSLU) ವಿನ ಪರ ವಕೀಲ ವಿ.ಶೇಷು, 'ಈಗಾಗಲೇ ಇದೇ 15ರಿಂದ ಎರಡು (2nd semister) ಮತ್ತು ನಾಲ್ಕನೇ ಸೆಮಿಸ್ಟರ್ (4t semister) ಪರೀಕ್ಷೆ ಆರಂಭವಾಗಿದ್ದು, ಶೇ 90ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯ (court) ಮಧ್ಯಪ್ರವೇಶ ಮಾಡಬಾರದು. ಐದು ವರ್ಷದ ಎಲ್‌ಎಲ್‌ಬಿ (LLB) ವಿದ್ಯಾರ್ಥಿಗಳು ಸಲ್ಲಿಸಿರುವ ತಿದ್ದುಪಡಿ ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿಕೊಂಡರು. ಇತ್ತಂಡಗಳ ವಾದ ಆಲಿಸಿದ ನ್ಯಾಯಲಯ ವಿಚಾರಣೆಯನ್ನು ಡಿಸೆಂಬರ್ 20 ಕ್ಕೆ ಮುಂದೂಡಿದೆ.

ಹೀಗಾಗಿ ಮುಂದಿನ ವಿಚಾರಣೆ ಸೋಮವಾರವಾದ ನಾಳೆ ನಡೆಯಲಿದೆ. ಅಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎರಡು ಸೆಮಿಸ್ಟರ್‌ ಮತ್ತು ನಾಲ್ಕನೇ ಸೆಮಿಸ್ಟರ್‌ ಆಫ್‌ಲೈನ್‌ ಪರೀಕ್ಷೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಬೇಕಿದೆ. ಪರಿಶೀಲನೆ ನಡೆಸಿದ ಬಳಿಕ ಕರ್ನಾಟಕ ಹೈಕೋರ್ಟ್ನ ಪೀಠ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.