ಮಾಗಡಿ: ಕುದೂರು ಸರ್ಕಾರಿ ಶಾಳಾ ಕಟ್ಟಡ ಇನ್ನು ನೆನಪು ಮಾತ್ರ..!
ಟಯೋಟ ಕಿರ್ಲೋಸ್ಕರ್ ಕಂಪನಿ 4 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ಎಲ್ಲಾ ಕಟ್ಟಡಗಳನ್ನು ಕೆಡವಿ ನೂತನವಾಗಿ ಸಕಲ ಸೌಲಭ್ಯಗಳ ಸುಸಜ್ಜಿತ ಕಟ್ಟಡ ಕಟ್ಟಿ ಕೊಡಲು ಮುಂದೆ ಬಂದಿದೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿಯೂ ಒಪ್ಪಿಗೆ ಕೊಟ್ಟು ಶಾಸಕ ಬಾಲಕೃಷ್ಣ ಕಟ್ಟಡ ಕಟ್ಟಲು ಹಸಿರು ನಿಶಾನೆ ತೋರಿಸಿದ್ದಾರೆ.
ಗಂ.ದಯಾನಂದ ಕುದೂರು
ಕುದೂರು(ಜು.30): ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತನಮಾನದ ಕಟ್ಟಡ ಇನ್ನು ನೆನಪು ಮಾತ್ರ. ಅದೊಂದು ಕಟ್ಟಡ ಮಾತ್ರವಾಗಿರದೆ ನೂರು ವರ್ಷಗಳಿಂದ ಆ ಕಟ್ಟಡದ ಕೊಠಡಿಯೊಳಗೆ ಕುಳಿತು ಪಾಠ ಕೇಳಿದ ಮಧುರ ನೆನಪುಗಳಿಗೆ ಇದ್ದ ಸಾಕ್ಷ್ಯ ಅದೊಂದೆ ಆಗಿತ್ತು.
ಟಯೋಟ ಕಿರ್ಲೋಸ್ಕರ್ ಕಂಪನಿ 4 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಶಾಲೆಯ ಎಲ್ಲಾ ಕಟ್ಟಡಗಳನ್ನು ಕೆಡವಿ ನೂತನವಾಗಿ ಸಕಲ ಸೌಲಭ್ಯಗಳ ಸುಸಜ್ಜಿತ ಕಟ್ಟಡ ಕಟ್ಟಿ ಕೊಡಲು ಮುಂದೆ ಬಂದಿದೆ. ಇದಕ್ಕೆ ಶಾಲಾಭಿವೃದ್ಧಿ ಸಮಿತಿಯೂ ಒಪ್ಪಿಗೆ ಕೊಟ್ಟು ಶಾಸಕ ಬಾಲಕೃಷ್ಣ ಕಟ್ಟಡ ಕಟ್ಟಲು ಹಸಿರು ನಿಶಾನೆ ತೋರಿಸಿದ್ದಾರೆ.
ಬೆಂಗಳೂರು: ಶಿಕ್ಷಣ ಇಲಾಖೆ ಸುಪರ್ದಿಗೆ ಬಿಬಿಎಂಪಿ ಶಾಲೆಗಳು
ಶತಮಾನದ ಶಾಲೆಯ ಕಟ್ಟಡವನ್ನು ಉರುಳಿಸಿ ಹೊಸ ಕಟ್ಟಡ ಕಟ್ಟುತ್ತಾರೆ ಎಂದಾಗ ಒಂದೆಡೆ ಸಂತೋಷವಾದರೂ ಮತ್ತೊಂದೆಡೆ ಶಾಲೆಯ ಕೊಠಡಿಯೊಳಗೆ ಕುಳಿತು ಪಾಠ ಕೇಳಿದ ನೆನಪುಗಳು ಒಂದೆಡೆ. ಶಾಲೆಯ ಅಂಗಳದಲ್ಲಿ ಕುಳಿತು ಗಜಮುಖನೆ ಗಣಪತಿಯೇ ಎಂದು ಹಾಡುತ್ತಾ ಅಲ್ಲಿಯೇ ಇದ್ದ ಗಣಪತಿಗೆ ಪೂಜೆ ಮಾಡಿಸಿ ರಸಾಯಣ ತಿಂದ ನೆನಪುಗಳು ಒಂದೊಂದೆ ಕಣ್ಣಮುಂದೆ ಹಾದು ಹೋದಂತಾಗಿ ಶಾಲೆಯ ಗೋಡೆಗೆ ಒರಗಿ ಕುಳಿತಾಗ ಅದು ಪಿಸು ಮಾತನಾಡಿದಂತಾಯಿತು.
ಶತಮಾನದ ಶಾಲೆಯ ವಿದಾಯ ಮಾತು:
ಸಾವಿರಾರು ವಿದ್ಯಾರ್ಥಿಗಳು ನನ್ನ ಮನೆಯಲ್ಲಿ ಕುಳಿತು ಪಾಠ ಕೇಳಿ ವಿದ್ಯಾವಂತರಾಗಿ ದೊಡ್ಡವರಾಗಿ ಬೆಳೆದಿದ್ದೀರಿ. ಬಡವ, ಶ್ರೀಮಂತ, ರೂಪ, ಕುರೂಪ, ಜಾತಿ, ಮತ, ಧರ್ಮಗಳನ್ನು ನೋಡದೆ ಕೇವಲ ವಿದ್ಯೆ ಮತ್ತು ಸಂಸ್ಕಾರ ನೀಡಲು ಸಹಕರಿಸಿದ್ದೇವೆ. ನೂರು ವರ್ಷಗಳ ಹಿಂದೆ ಕಟ್ಟಿದ ಕಟ್ಟಡವಾದರೂ ಸುಭದ್ರವಾಗಿ ಕಟ್ಟಿನಿಲ್ಲಿಸಿದರು ನನ್ನನ್ನು. ದಿನೇದಿನೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೂ ಜಾಗ ಬೇಕಲ್ಲವಾ? ಅದಕ್ಕೆ ನಾನು ಇಲ್ಲಿಂದ ತೆರಳದೆ ಮತೊಂದು ಹೊಸ ಕಟ್ಟಡ ಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ ತಲೆ ಇಲ್ಲದೆ ಗುತ್ತಿಗೆದಾರರು ಶಾಲೆಯ ಆವರಣದಲ್ಲಿ ಎಲ್ಲೆಂದರಲ್ಲಿ ಕಟ್ಟಡಗಳನ್ನು ಕಟ್ಟಿಶಾಲೆಯ ಅಂದ ಕೆಡಿಸಿದ್ದಾರೆ. ಈಗ ಟಯೋಟ ಕಿರ್ಲೋಸ್ಕರ್ ಕಂಪನಿಯವರು ಅಷ್ಟುದೊಡ್ಡ ಕಟ್ಟಡ ಕಟ್ಟಲು ಎಲ್ಲಿಯೂ ಜಾಗವೇ ಇಲ್ಲ. ಅವರು ಶಾಲೆಯ ನೀಲನಕ್ಷೆ ರೂಪಿಸಿಕೊಂಡು ಬಂದಿರುವ ಪ್ರಕಾರ ನನ್ನ ಆವರಣದಲ್ಲಿ ಕಟ್ಟಡ ಕಟ್ಟಲು ಆಗುವುದಿಲ್ಲ. ಮುಂದಾಲೋಚನೆ ಇಲ್ಲದೆ ಕಟ್ಟಿದ ರಾಜಕಾರಣಿಗಳಿಂದಾಗಿ ಇಂದು ನಾನು ಬಲಿಯಾಗಬೇಕಾಗಿದೆ.
ನನ್ನ ನೆರಳಿನಲ್ಲಿ ಕಲಿತ ಮಕ್ಕಳ ಮೇಲೆ ನಾನೆಂದು ಕುಸಿದು ಬೀಳಲಿಲ್ಲ. ಅಷ್ಟೇ ಏಕೆ? ಮಳೆಗಾಲದಲ್ಲೂ ಒಂದು ಹನಿ ಮಕ್ಕಳ ಮೇಲೆ ಬೀಳದಂತೆ ನಾನು ನಿಂತಿದ್ದೆ. ಪುಣ್ಯಾತ್ಮರು ಇದೊಂದು ಶಾಲೆ ಮಾತ್ರವಲ್ಲ, ದೇವಾಲಯ ಎಂದು ಅತ್ಯಂತ ಭದ್ರವಾಗಿ ಕಟ್ಟಿದರು. ಶಾಲಾ ಕಟ್ಟಡದಲ್ಲೂ ದುಡ್ಡು ಹೊಡೆಯುವ ಯೋಚನೆ ಮಾಡಲಿಲ್ಲ. ಇಂತಹ ಬುದ್ದಿ ಇಂದಿನವರಿಗೆ ಏಕೆ ಬರುತ್ತಿಲ್ಲ ಎಂಬುದೇ ನನಗೆ ಸಂಕಟದ ವಿಷಯವಾಗಿದೆ.
ನಾನಿನ್ನೂ ಹೋಗಿ ಬರುವೆ ಮಕ್ಕಳೆ:
ಮಕ್ಕಳೇ ಬೇಜಾರು ಮಾಡಿಕೊಳ್ಳಬೇಡಿ. ನಾನು ನಿಮ್ಮಿಂದ ದೂರ ಹೋಗುತ್ತಿದ್ದೇನೆಂದು. ಹುಟ್ಟಿದವರು ಒಂದಲ್ಲ ಒಂದು ದಿನ ಹೋಗಲೇಬೇಕು ಎನ್ನುವುದು ನಿಜವಾಗುವುದೇ ಆದರೆ ನಾನೂ ಹೋಗಲೇಬೇಕಲ್ಲವೇ? ಹೊಸ ಕಟ್ಟಡ ಬರುತ್ತದೆ. ಕಟ್ಟಡ ನನ್ನಂತೆ ಹಳೇ ಮಾದರಿಯಲ್ಲಿ ಇರುವುದಿಲ್ಲ. ಹೊಸ ರೂಪ, ವಿನ್ಯಾಸದಲ್ಲಿರುತ್ತದೆ, ಮೂರ್ನಾಲ್ಕು ಅಂತಸ್ತಿನಲ್ಲಿರುತ್ತದೆ. ಪ್ರತಿ ಅಂತಸ್ತಿನಲ್ಲೂ ಶೌಚಾಲಯದ ವ್ಯವಸ್ಥೆ ಇರುತ್ತದೆ. ಪರವಾಗಿಲ್ಲ. ನಾನು ಇಷ್ಟುವರ್ಷ ಇಲ್ಲಿದ್ದೆ ನನ್ನ ನೆರಳಿನಲ್ಲಿ ನೀವು ಕಲಿತಿರಿ ಎಂದುದೇ ನನಗೆ ಸಂತೋಷದ ವಿಷಯ. ಕಟ್ಟಡವನ್ನು ಕಾಪಾಡಿಕೊಳ್ಳಬೇಕಾದ ವಿಷಯದಲ್ಲಿ ನಿಮ್ಮದೂ ಪಾತ್ರವಿದೆ. ಚನ್ನಾಗಿ ಓದಿಕೊಳ್ಳಿ. ನಾನಿನ್ನೂ ಹೋಗಿಬರುತ್ತೇನೆ ಎಂದು ಹೇಳುತ್ತಿರುವಂತೆ ಕೇಳಿ ನಮ್ಮ ಕಣ್ಣಾಲಿಗಳು ತುಂಬಿ ಬಂತು. ಅದಕ್ಕೊಂದು ಸಾಷ್ಟಾಂಗ ನಮಸ್ಕಾರ ಹಾಕಿ ಬಂದೆವು.
ಹಲಸಿನ ಮರವೂ ಧರೆಗೆ:
ಶಾಲೆಯ ಆವರಣದೊಳಗೆ ವಿಶಾಲವಾಗಿ ಹರಡಿಕೊಂಡಿದ್ದ ಹಲಸಿನ ಮರವೊಂದಿದೆ. ಈ ಶಾಲೆಗೆ ಕಟ್ಟಡ ಹೇಗೆ ಭೂಷಣವೋ ಹಲಸಿನ ಮರವೂ ಅಷ್ಟೇ ಭೂಷಣವಾಗಿತ್ತು. ಸರ್ಕಾರಿ ಶಾಲೆಯ ಆವರಣದಲ್ಲಿರುವ ಮರವಾದ್ದರಿಂದ ಅದರ ಹಣ್ಣು ತಿನ್ನದವರೇ ಇಲ್ಲ. ಶಾಲೆಯಲ್ಲಿ ಪ್ರತಿ ಶುಕ್ರವಾರ ಸಂಜೆ ಪ್ರಾರ್ಥನೆ ಮಾಡಿ ಮಕ್ಕಳಿಗೆ ಹಸಲಿನ ಹಣ್ಣಿನ ರಸಾಯಣ ಕೊಡುತ್ತಿದ್ದರು. ಇಂದು ಆ ಮರವೂ ಇಲ್ಲದಂತಾಗುತ್ತದೆ.
ಗ್ರಾಮಸ್ಥರ ಸಂಭ್ರಮ:
ಶಾಲಾ ಕಟ್ಟಡದೊಂದಿಗೆ ಏನೇ ಭಾವನಾತ್ಮಕ ಸಂಬಂಧ ಇದ್ದರೂ ಹೆಚ್ಚುತ್ತಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡವೂ ಬದಲಾಗಬೇಕಾಗಿದೆ. ಅದಕ್ಕೆ ಗ್ರಾಮಸ್ಥರು ನೂತನ ಕಟ್ಟಡ ನಿರ್ಮಾಣಕ್ಕೆ ಸಂಭ್ರಮಿಸಿದ್ದಾರೆ. ಟಯೋಟ ಕಂಪನಿಯವರು ಗುಣಮಟ್ಟದಲ್ಲಿ ರಾಜಿ ಆಗುವುದಿಲ್ಲ ಎಂಬ ಮಾತಿರುವುರದಿಂದ ವ್ಯವಸ್ಥಿತ ಕಟ್ಟಡ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ ಎಂಬುದು ಜನರ ಆಶಯ.
ಮಣಿಪುರ ವಿದ್ಯಾರ್ಥಿಗಳಿಗೆ ರಾಜ್ಯದ ಸ್ವಾಗತ: ಸಚಿವ ಮಧು ಬಂಗಾರಪ್ಪ
ಈಗ ಕುದೂರು ಗ್ರಾಮದ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ ಎಂದು ನಾಮಕರಣ ಮಾಡಿ ಒಂದೇ ಸೂರಿನಡಿ ಅಂದರೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಆವರಣದಲ್ಲಿ ನಡೆಯುವಂತೆ ಸರ್ಕಾರ ರೂಪಿಸಿರುವ ಯೋಜನೆಯಿಂದ ಕುದೂರು ಗ್ರಾಮದ ಶಾಲೆಗಳಿಗೆ ಆಕರ್ಷಕ ಕಟ್ಟಡ ಬರುತ್ತಿರುವುದು ಸ್ವಾಗತಾರ್ಹವಾಗಿದೆ.
ಕುದೂರು ಗ್ರಾಮ ತಾಲೂಕಿನ ಸಾಂಸ್ಕೃತಿಕ ಗ್ರಾಮ. ಪ್ರಾಥಮಿಕ ಶಾಲೆಯಿಂದ ಪದವಿ ತರಗತಿಯವರೆಗೆ ಎಲ್ಲವೂ ಒಂದೇ ಸೂರಿನಡಿ ಶಿಕ್ಷಣ ಸಿಗುವ ಅಪರೂಪದ ಗ್ರಾಮವಿದು. ಇಂತಹ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿಸಿದ್ದಾಗ ಇಲ್ಲೊಂದು ಸುಂದರ ಕಟ್ಟಡ ನಿರ್ಮಾಣ ಮಾಡಬೇಕೆನಿಸಿತು. ಸರ್ಕಾರಿ ಶಾಲೆಯಲ್ಲಿನ ಕಟ್ಟಡಗಳನ್ನು ನೋಡಿ ಎಂತಹವರೂ ಬೆರಗಾಗಬೇಕು. ಅದಕ್ಕಾಗಿ ಟಯೋಟೊ ಕಿರ್ಲೋಸ್ಕರ್ ಕಂಪನಿಯವರಿಗೆ ಕಟ್ಟಡ ಕಟ್ಟಿಕೊಡಲು ಸ್ಥಳ ಪರೀಕ್ಷೆ ಮಾಡಲು ನಾನು ಜೊತೆಯಾಗಿ ಬಂದಿದ್ದೆ. ಎಲ್ಲವೂ ಸುಸೂತ್ರವಾಗಿ ಆಗಿರುವುದರಿಂದ ಸದ್ಯದಲ್ಲಿಯೇ ನೂತನ ಕಟ್ಟಡ ನಿರ್ಮಾಣದ ಕಾರ‍್ಯ ಆರಂಭವಾಗುತ್ತದೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.