ಮಣಿಪುರ ವಿದ್ಯಾರ್ಥಿಗಳಿಗೆ ರಾಜ್ಯದ ಸ್ವಾಗತ: ಸಚಿವ ಮಧು ಬಂಗಾರಪ್ಪ
ಮಣಿಪುರದ ವಿದ್ಯಾರ್ಥಿಗಳು ಬಂದರೆ ದಾಖಲೆ ಕೇಳಬೇಡಿ, ಶಿಕ್ಷಣ ಮುಂದುವರಿಕೆಗೆ ಅವಕಾಶ ನೀಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸೂಚನೆ
ಬೆಂಗಳೂರು(ಜು.26): ಮಣಿಪುರ ರಾಜ್ಯದಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಲ್ಲಿಯ ಯಾವುದೇ ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಲು 2023-24ನೇ ಸಾಲಿನಲ್ಲಿ ಕರ್ನಾಟಕದ ಶಾಲೆಗಳಲ್ಲಿ ಪ್ರವೇಶ ಬಯಸಿ ಬಂದರೆ ಅವರಿಗೆ ಯಾವುದೇ ದಾಖಲೆಗಳನ್ನು ಕೇಳದೆ ಪೋಷಕರ ಸ್ವಯಂ ದೃಢೀಕರಣ ಪತ್ರದೊಂದಿಗೆ ದಾಖಲಾತಿ ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆ ರಾಜ್ಯದ ಮಕ್ಕಳ ಬಳಿ ಅವಶ್ಯಕತೆ ದಾಖಲಾತಿಗಳು, ಪ್ರಮಾಣ ಪತ್ರಗಳು ಇಲ್ಲದ ಪಕ್ಷದಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸಬೇಕು. ದಾಖಲಾತಿ ಮಾಡಿಕೊಳ್ಳುವಾಗ ಜನನ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ ಅಥವಾ ಯಾವುದೇ ದಾಖಲೆಗಳು ನೀಡುವಂತೆ ಒತ್ತಾಯಿಸದೆ ವಿದ್ಯಾರ್ಥಿ, ಪೋಷರಿಂದ ಸ್ವಯಂ ದೃಢೀಕೃತ ಪತ್ರ ಪಡೆದು ವಿದ್ಯಾರ್ಥಿಯು ಹಿಂದಿನ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗಿನ ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆಯೋ ಅದೇ ತರಗತಿಗಳಿಗೆ 2023-24ನೇ ಸಾಲಿಗೆ ದಾಖಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಮೇಲೆ ಬಿಜೆಪಿ ಜೀವನ: ಸಚಿವ ಮಧು ಬಂಗಾರಪ್ಪ
ಅಲ್ಲದೆ, ಮಣಿಪುರದಿಂದ ಪದವಿ ಪೂರ್ವ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೂ ಕೂಡ ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಾಲೇಜುಗಳಲ್ಲಿ ಅಭ್ಯಾಸ ಮಾಡಲು ಆನ್ ಲೈನ್ ಮೂಲಕ ಕಾಲೇಜು ಹಂತದಲ್ಲಿ ಅರ್ಹತಾ ಪತ್ರ ಪಡೆದು ದಾಖಲಾತಿ ನೀಡುವ ಬದಲು ನಿರ್ಧಿಷ್ಟ ಅವಧಿಯೊಳಗೆ ದಾಖಲೆಗಳನ್ನು ನೀಡುವ ಷರತ್ತಿನ ಕರಾರು ಪತ್ರ ಪಡೆದು ದಾಖಲಾತಿ ಮಾಡಲು ಕ್ರಮ ವಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.