NEP: ಸಮಗ್ರ ಅಭಿವೃದ್ಧಿಗೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ: ಸಚಿವ ನಾಗೇಶ
* ರಾಷ್ಟ್ರೀಯ ಶಿಕ್ಷಣ ನೀತಿ-2020ರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಸಚಿವ ನಾಗೇಶ ಅಭಿಮತ
* ಪ್ರಾಥಮಿಕ ಹಂತದಿಂದಲೇ ಬದಲಾವಣೆ
* ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ
ಬೆಳಗಾವಿ(ಏ.14): ಪಠ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯಿಂದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ತರಲಾಗುವುದು. ಇದರಿಂದ ಭವಿಷ್ಯದಲ್ಲಿ ವಿವಿಧ ಕ್ಷೇತ್ರಗಳು ಅಭಿವೃದ್ಧಿ ಆಗಲಿವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ(BC Nagesh) ಹೇಳಿದರು.
ನಗರದ ಗಾಂಧಿ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ(National Education Policy)-2020ರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಷ್ಟ್ರದಲ್ಲಿ(India) ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದೆ. 34 ವರ್ಷಗಳ ನಂತರ ಮೊದಲ ಬಾರಿಗೆ ಜಾರಿಗೆ ತಂದ ಶಿಕ್ಷಣ ನೀತಿ ಇದಾಗಿದ್ದು, ದೇಶದ ವಿವಿಧ ಕ್ಷೇತ್ರಗಳಲ್ಲಿ ಬದಲಾವಣೆ ತರಲಿದೆ ಎಂದರು.
ಭಾರತವನ್ನು ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವನ್ನಾಗಿಸಲು ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಸಮಾನತೆಯುಳ್ಳ ಮತ್ತು ಚಲನಶೀಲ ಜ್ಞಾನ ಸಮಾಜವನ್ನಾಗಿ ಪರಿವರ್ತಿಸುವುದು ಈ ಶೈಕ್ಷಣಿಕ ನೀತಿಯ ಮೂಲ ಉದ್ದೇಶವಾಗಿದೆ ಎಂದರು.
ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ಶಿಕ್ಷಣ(Education) ತಲುಪಬೇಕು ಎಂಬುದು ಶೈಕ್ಷಣಿಕ ಪದ್ಧತಿಯ ಸಿದ್ಧಾಂತವಾಗಿದ್ದು, ಸಾಮಾಜಿಕ ಬೆಳವಣಿಗೆಗೆ ಬೇಕಾಗುವ ಕಲಿಕೆಯ ಅವಶ್ಯಕ ಪಠ್ಯ ಹಾಗೂ ಚಟುವಟಿಕೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗವಹಿಸಬೇಕು ಎಂದು ತಿಳಿಸಿದರು.
ಪ್ರಾಥಮಿಕ ಹಂತದಿಂದಲೇ ಬದಲಾವಣೆ:
ಪ್ರಾಥಮಿಕ ಹಂತದಿಂದಲೇ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಈ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಈ ಶಿಕ್ಷಣ ನೀತಿಯಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಮದರಸಾಗಳಲ್ಲಿಯೂ ಹೊಸ ಶಿಕ್ಷಣ ಪದ್ಧತಿ: ಕರ್ನಾಟಕದ 20 ಸಾವಿರ ಶಾಲೆಗಳಲ್ಲಿ NEP ಜಾರಿ: ಸಚಿವ ನಾಗೇಶ್
ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ತಂದ ನಂತರ ಅನೇಕ ಶಿಕ್ಷಕರು ಗೊಂದಲಕ್ಕೆ ಒಳಗಾಗಿದ್ದು, ಮುಂಬರುವ ದಿನಗಳಲ್ಲಿ ಈ ಕುರಿತು ಕಾರ್ಯಾಗಾರ ಏರ್ಪಡಿಸುವ ಮೂಲಕ ಸೂಕ್ತ ಸಲಹೆಗಳನ್ನು ನೀಡಲಾಗುವುದು. ಪ್ರತಿ ಶಾಲಾ-ಕಾಲೇಜಲ್ಲಿ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಪಠ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.
ಬೆಳಗಾವಿ ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಮಾತನಾಡಿ ಪಠ್ಯಗಳ ಬದಲಾವಣೆಯಿಂದ ಮಕ್ಕಳ ಭವಿಷ್ಯದಲ್ಲಿ ಉತ್ತಮ ಬದಲಾವಣೆಯಾಗಲಿದೆ. ರಾಷ್ಟೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಯ ಕಾರ್ಯ ನಿರ್ವಹಿಸಲಿದೆ. ರಾಷ್ಟೀಯ ಶಿಕ್ಷಣ ನೀತಿ ಸಮೀಕ್ಷೆ ಮೂಲಕ ಸಾರ್ವಜನಿಕರ ಸಲಹೆ ಪಡೆದು, 65 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯ ನಡುವಳಿಕೆಗಳನ್ನು ಪ್ರಕಟಿಸಲಾಗಿದೆ. ಉತ್ತಮ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯ ಮೂಲಕ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಿಂದ ಬಲಿಷ್ಠ ಭಾರತ ನಿರ್ಮಾಣವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಪದವೀಧÜರ ಮತ ಕ್ಷೇತ್ರದ ವಿಧಾನ ಪರಿಷತ ಸದಸ್ಯ ಹನುಮಂತ ನಿರಾಣಿ, ಡಿಡಿಪಿಐ ಗಜಾನನ ಮನ್ನಿಕೇರಿ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.