ಮರುಪರೀಕ್ಷೆ ಮತ್ತು ಅಂಕಗಳ ಪರಿಹಾರವನ್ನು ಕೇಳಿರುವ 1,600 ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. 

ನವದೆಹಲಿ (ಜೂ.8): ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) 2024 ಕ್ಕೆ ಹಾಜರಾದ 1,600 ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಉನ್ನತ ಅಧಿಕಾರ ಸಮಿತಿಯು ಆಲಿಸಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಘೋಷಣೆ ಮಾಡಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯ NEET-UG ಫಲಿತಾಂಶಗಳನ್ನು ಜೂನ್ 4 ರಂದು ಪ್ರಕಟಿಸಲಾಯಿತು. ಇದರ ಬೆನ್ನಲ್ಲಿಯೇ ಹಲವು ಆಕಾಂಕ್ಷಿಗಳು ಇದರಲ್ಲಿ ಅಕ್ರಮವಾಗಿದ್ದು, ಮರುಪರೀಕ್ಷೆ ನಡೆಸುವಂತೆ ಒತ್ತಾಯ ಮಾಡಿದ್ದಾರೆ. ಬಿಹಾರದಲ್ಲಿ ಆಗಿರುವ ನೀಟ್‌ ಪೇಪರ್‌ ಲೀಕ್‌ ಘಟನೆ, ಗುಪ್ತ ಗ್ರೇಸ್‌ ಮಾರ್ಕ್ಸ್‌ಗಳು, ಯಾವುದೇ ತರ್ಕವಿಲ್ಲದೆ ನೀಡಿರುವ ಹೆಚ್ಚಿನ ಅಂಕಗಳು, ಅನಿರೀಕ್ಷಿತ ಎನಿಸುವಂತೆ ಹೆಚ್ಚಿನ ಸಂಖ್ಯೆಯ ಔಟ್‌ ಆಫ್‌ ಔಟ್‌ ವಿದ್ಯಾರ್ಥಿಗಳು ಮತ್ತು ಹೆಚ್ಚಿನ ಕಟ್‌ ಆಫ್‌ ಸ್ಕೋರ್‌ಗಳ ಸಮಸ್ಯೆಯನ್ನು ಪರಿಹಾರ ಮಾಡುವಂತೆ ಕೇಳಿಕೊಂಡಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‌ಟಿಎ ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್, ಈ ಬಾರಿ ಯಾವುದೇ ಪೇಪರ್ ಸೋರಿಕೆಯಾಗಿಲ್ಲ, “ಪರೀಕ್ಷೆ ಪ್ರಾರಂಭವಾದ ಎರಡು ಗಂಟೆಗಳ ನಂತರ ಸಂಜೆ 4.30 ರ ಸುಮಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹಂಚಿಕೊಳ್ಳಲಾಗಿದೆ. ಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳನ್ನು ನಾವು ಮೇ 6 ರಂದು ನಿರಾಕರಿಸಿದ್ದೇವೆ. ಪರೀಕ್ಷೆಯ ಸಮಗ್ರತೆಗೆ ಯಾವುದೇ ಧಕ್ಕೆಯಾಗಲಿಲ್ಲ' ಎಂದು ತಿಳಿಸಿದ್ದಾರೆ.

“ಈ ಬಾರಿ ಕೇವಲ ಒಂದು ಪ್ರಶ್ನೆಯು [ವಿದ್ಯಾರ್ಥಿಗಳನ್ನು] ಬಾಧಿಸಿದೆ. ಹಲವು ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದ್ದು, ಮರುಮೌಲ್ಯಮಾಪನ ಮಾಡಿದ 1,563 ವಿದ್ಯಾರ್ಥಿಗಳ ಪೈಕಿ 790 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಒಟ್ಟು 13 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಗ್ರೇಸ್ ಮಾರ್ಕ್‌ಗಳೊಂದಿಗೆ ಸರಿದೂಗಿಸಿದವರು ಒಟ್ಟಾರೆ ಶೇಕಡಾವಾರು ಅಂಕಗಳ ಮೇಲೆ ಪರಿಣಾಮ ಬೀರಿಲ್ಲ' ಎಂದು ತಿಳಿಸಿದ್ದಾರೆ.

ಈ ವರ್ಷ 23 ಲಕ್ಷ ವಿದ್ಯಾರ್ಥಿಗಳು ನೀಟ್‌ಗೆ ಹಾಜರಾಗಿದ್ದರು. ಎನ್‌ಟಿಎ ಭೌತಶಾಸ್ತ್ರದಲ್ಲಿ ಒಂದು ಪ್ರಶ್ನೆಯ ತಾತ್ಕಾಲಿಕ ಉತ್ತರದ ಕೀಗೆ 13,373 ಸವಾಲುಗಳನ್ನು ಸ್ವೀಕರಿಸಿದೆ. "ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್) ಪಠ್ಯಪುಸ್ತಕದ ಹಳೆಯ ಮತ್ತು ಹೊಸ ಆವೃತ್ತಿಗಳಲ್ಲಿನ ವ್ಯತ್ಯಾಸಗಳ ಕಾರಣ, ಪ್ರಶ್ನೆಗೆ ಒಂದು ಆಯ್ಕೆಯ ಬದಲಿಗೆ ಎರಡು ಆಯ್ಕೆಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು ಎಂದು ವಿಷಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ" ಎಂದು ಎನ್‌ಟಿಎ ಹೇಳಿದೆ. ಸಮಸ್ಯೆ ಕೇವಲ 1,600 ವಿದ್ಯಾರ್ಥಿಗಳದ್ದಾಗಿದೆ, 4,750 ಕೇಂದ್ರಗಳಲ್ಲಿ ಕೇವಲ ಆರು ಕೇಂದ್ರಗಳಲ್ಲಿ ಮಾತ್ರ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ.

ಸಿಂಗ್ ಪ್ರಕಾರ, UPSC ಯ ಮಾಜಿ ಅಧ್ಯಕ್ಷರ ಅಡಿಯಲ್ಲಿ ಹೊಸ ಸಮಿತಿಯು ಪರಿಹಾರದ ಅಂಕಗಳ ಸಮಸ್ಯೆಯನ್ನು ಮತ್ತು ಸಮಯವನ್ನು ಕಳೆದುಕೊಂಡ ಅಭ್ಯರ್ಥಿಗಳ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ಸಮಿತಿಯು ಶಿಫಾರಸುಗಳನ್ನು ನೀಡುತ್ತದೆ ಮತ್ತು ಎನ್‌ಟಿಎ ಸೀಮಿತ ಅವಧಿಯಲ್ಲಿ ವರದಿಯನ್ನು ನೀಡುತ್ತದೆ. ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ. "ನಾವು ದೇಶಾದ್ಯಂತ ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ, ನಾವು ಪೊಲೀಸರೊಂದಿಗೆ ಸಹಕರಿಸುತ್ತೇವೆ" ಎಂದಿದ್ದಾರೆ.

ನೀಟ್‌ ಪರೀಕ್ಷೆ ಅಕ್ರಮ ತನಿಖೆ: ಮರು ಪರೀಕ್ಷೆಗೆ ವಿದ್ಯಾರ್ಥಿಗಳ ಆಗ್ರಹ

2,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ ಮಾಡಿದ ಮರುಪರೀಕ್ಷೆಗೆ ಒತ್ತಾಯಿಸುವ ಅರ್ಜಿಯಲ್ಲಿ ಅನಿರೀಕ್ಷಿತ ಸಂಖ್ಯೆಯ ಪೂರ್ಣ ಅಂಕಗಳು ಮತ್ತು ಹೆಚ್ಚಿನ ಕಟ್-ಆಫ್ ಕಂಡುಬಂದಿದೆ ಎಂದು ಆರೋಪಿಸಲಾಗಿದೆ. "ಒಟ್ಟು 67 ವಿದ್ಯಾರ್ಥಿಗಳು 720 ರಲ್ಲಿ ಪರಿಪೂರ್ಣ 720 ಅಂಕಗಳನ್ನು ಗಳಿಸಿದ್ದಾರೆ, ಇದು ಅಚ್ಚರಿಗೆ ಕಾರಣವಾಗಿದೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಸಾಮಾನ್ಯವಾಗಿ, ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಮಾತ್ರವೇ ಔಟ್‌ ಆಫ್‌ ಔಟ್‌ ಅಂಕ ಗಳಿಸುತ್ತಿದ್ದರು ಎನ್ನಲಾಗಿದೆ.

ಮತ್ತೊಬ್ಬ ನೀಟ್‌ ಆಕಾಂಕ್ಷಿಕೋಟದಲ್ಲಿ ಆತ್ಮಹತ್ಯೆ: ಈ ವರ್ಷದ 10ನೇ ಪ್ರಕರಣ