ನೀಟ್ ಪರೀಕ್ಷೆ ಅಕ್ರಮ ತನಿಖೆ: ಮರು ಪರೀಕ್ಷೆಗೆ ವಿದ್ಯಾರ್ಥಿಗಳ ಆಗ್ರಹ
ನೀಟ್ ಪರೀಕ್ಷೆಯ ನಂತರ ಇದೀಗ ಫಲಿತಾಂಶವೂ ಭಾರೀ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕು ಹಾಗೂ ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.
ಬೆಂಗಳೂರು (ಜೂ.07): ನೀಟ್ ಪರೀಕ್ಷೆಯ ನಂತರ ಇದೀಗ ಫಲಿತಾಂಶವೂ ಭಾರೀ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕು ಹಾಗೂ ಈಗ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ. ತಪ್ಪು ಪ್ರಶ್ನೆಗಳನ್ನು ಕೇಳಿರುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿವಾದಾತ್ಮಕ ಫಲಿತಾಂಶದಿಂದ ಲಕ್ಷಾಂತರ ವೈದ್ಯಕೀಟು ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನೀಟ್ ಅಕ್ರಮದ ಸಮಗ್ರ ತನಿಖೆಗೆ ವಹಿಸಿ ಮರು ಪರೀಕ್ಷೆಗೆ ಆದೇಶಿಸಬೇಕು ಎಂದು ದೇಶಾದ್ಯಂತ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದ್ದಾರೆ.
ಅದಕ್ಕೆ ರಾಜ್ಯದಿಂದಲೂ ವಿದ್ಯಾರ್ಥಿಗಳು ದನಿಗೂಡಿಸಿದ್ದಾರೆ. ಮೊದಲು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಗಂಭೀರ ಆರೋಪ ಕೇಳಿಬಂದಿತ್ತು. ಬಳಿಕ ಇತ್ತೀಚೆಗೆ ಪ್ರಕಟವಾದ ನೀಟ್ ಫಲಿತಾಂಶದಲ್ಲಿ ಬರೋಬ್ಬರಿ 67 ಮಂದಿ ಮೊದಲ ರ್‍ಯಾಂಕ್ ಹಂಚಿಕೊಂಡಿರುವುದಲ್ಲದೆ, ಈ ಪೈಕಿ 8 ಮಂದಿ ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ. ಅಷ್ಟೇ ಅಲ್ಲ, ಆ ಆರೂ ಜನ ಒಂದೇ ನೀಟ್ ತರಬೇತಿ ಕೇಂದ್ರದವರಾಗಿರುವ ಜೊತೆಗೆ ಅವರ ರೋಲ್ ನಂಬರ್‌ಗಳು ಕೂಡ ಒಂದೇ ಅನುಕ್ರಮದಲ್ಲಿರುವುದು ವಿಪರೀತ ಅನುಮಾನಗಳ ಸೃಷ್ಟಿಗೆ ಕಾರಣವಾಗಿದೆ.
ಬಿಜೆಪಿ ಮೊದಲು ಕಾನೂನು ಸುವ್ಯವಸ್ಥೆಯ ಡೆಫಿನೆಷನ್ ಹೇಳಲಿ: ಗೃಹಸಚಿವ ಪರಮೇಶ್ವರ್
ಈ ವಿದ್ಯಾರ್ಥಿಗಳ ರೋಲ್ ನಂಬರ್ 2307010168 ರೀತಿ ಆರಂಭವಾಗಿ ಕೊನೆಯ ಮೂರು ನಂಬರ್ ಮಾತ್ರ 333, 403, 460, 178, 037, 186, 198 ಆಗಿದೆ. ಇವರೆಲ್ಲರೂ 720 ಅಂಕಗಳನ್ನು ಪಡೆದವರಾಗಿದ್ದಾರೆ. ಇದು ಹೇಗೆ ಸಾಧ್ಯ ಎನ್ನುವ ಬಗ್ಗೆ ದೇಶಾದ್ಯಂತ ವಿದ್ಯಾರ್ಥಿಗಳು, ಸಾರ್ವಜನಿಕರು, ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರಿಂದ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಭಾರೀ ಅಸಮಾನ, ಆಕ್ರೋಶ, ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಇದರ ನಡುವೆ, ಇಬ್ಬರು ವಿದ್ಯಾರ್ಥಿಗಳಿಗೆ ಫಲಿತಾಂಶದಲ್ಲಿ 718 ಮತ್ತು 719 ಅಂಕಗಳನ್ನು ನೀಡಿರುವುದು, ಟಾಪರ್‌ಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿರುವುದು ಕೂಡ ವೈದ್ಯಸೀಟು ಆಕಾಂಕ್ಷಿಗಳು ಮತ್ತು ಪೋಷಕರ ವಲಯದಲ್ಲಿ ಸಂಶಗಳಿಗೆ ಎಡೆಮಾಡಿಕೊಟ್ಟಿದೆ.
ನೀಟ್‌ನ ಪ್ರತಿ ಪ್ರಶ್ನೆಗೆ 4 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿಯೊಂದು ತಪ್ಪು ಉತ್ತರ ಬರೆದ ಪ್ರಶ್ನೆಗೆ 1 ಅಂಕ ಕಳೆಯಲಾಗುತ್ತದೆ. ಹಾಗಾಗಿ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದವರಿಗೆ 720 ಅಂಕ ಬರುತ್ತವೆ. ಒಂದು ಪ್ರಶ್ನೆಗೆ ಉತ್ತರ ನೀಡದೆ ಹೋದಲ್ಲಿ 716 ಅಂಕ ಬರಬೇಕು. ಅಥವಾ ಆ ಒಂದು ಪ್ರಶ್ನೆಗೆ ತಪ್ಪು ಉತ್ತರ ನೀಡಿದ್ದರೆ 715 ಅಂಕ ಬರಬೇಕು. ಆದರೆ, 718, 719 ಅಂಗಳನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಎನ್ನುವುದು ಆಕಾಂಕ್ಷಿಗಳ ಪ್ರಶ್ನೆ. ಇದೆಲ್ಲವನ್ನೂ ನೋಡಿದಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು, ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎನ್ನುವುದು ಅಭ್ಯರ್ಥಿಗಳ ವಾದವಾಗಿದೆ.
ಇದಕ್ಕೆ ನೀಟ್ ಪರೀಕ್ಷೆ ಜವಾಬ್ದಾರಿ ಹೊತ್ತ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು(ಎನ್‌ಟಿಎ) ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆ ವೇಳೆಯಲ್ಲಾದ ಸಮಯದ ನಷ್ಟಕ್ಕೆ ಪರಿಹಾರವಾಗಿ ಕೆಲ ಗ್ರೇಸ್ ಅಂಕಗಳನ್ನು ನೀಡಲಾಗಿದ್ದು ಇದರಿಂದ 718, 719 ಅಂಕಗಳು ಬಂದಿವೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೆ, ಈ ರೀತಿ ಸಮಯದ ನಷ್ಟಕ್ಕೆ ಗ್ರೇಸ್ ಅಂಕ ನೀಡಲು ಅವಕಾಶವಿರುವುದನ್ನು ಕೆಲ ನ್ಯಾಯಾಲಯದ ಪ್ರಕರಣಗಳನ್ನು ಉಲ್ಲೇಖಿಸಿ ಸ್ಪಷ್ಟಪಡಿಸಿದೆ. ಆದರೆ, ಇದನ್ನು ಒಪ್ಪದ ಅಭ್ಯರ್ಥಿಗಳು ಎನ್‌ಟಿಎ ಕ್ರಮವನ್ನು ಅನುಮಾನಿಸಿದ್ದು ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಈ ಮೊದಲೇ ಸಪ್ಷ್ಟನೆ ನೀಡಿದ್ದ ಎನ್‌ಟಿಎ, ತಪ್ಪಾಗಿ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ ರಾಜಸ್ಥಾನದ ಕೆಲ ಕೇಂದ್ರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಹೋಗಿದ್ದ ಬಗ್ಗೆ ಮಾಹಿತಿ ನೀಡಿತ್ತು. ಜೊತೆಗೆ ನಾವು ಎನ್‌ಸಿಇಆರ್‌ಟಿಯ ಹೊಸ ಪಠ್ಯಕ್ರಮ ಆಧರಿಸಿ ಪ್ರಶ್ನೆ ಪತ್ರಿಕೆ ನೀಡಿದ್ದೆವು. ಆದರೆ, ಕೆಲ ವಿದ್ಯಾರ್ಥಿಗಳು ಹಳೆಯ ಪಠ್ಯಕ್ರಮವನ್ನು ಓದಿಕೊಂಡಿದ್ದರು. ಆದರೂ, ಆದ್ಯತೆ ಮೇರೆಗೆ ಎಲ್ಲರಿಗೂ 5 ಗ್ರೇಸ್ ಅಂಕ ನೀಡಲಾಗಿದೆ. ಇದರಿಂದ 715 ಅಂಕ ಪಡೆದ ಹಲವು ವಿದ್ಯಾರ್ಥಿಗಳಿಗೆ 720 ಅಂಕಗಳು ಬಂದಿವೆ. ಇದರಿಂದ ಪೂರ್ಣ ಅಂಕ ಪಡೆದವರ ಸಂಖ್ಯೆ 67 ಕ್ಕೇರಿದೆ ಎಂದು ಸಮಜಾಯಿಷಿ ನೀಡಿದೆ.
ಚನ್ನಪಟ್ಟಣಕ್ಕೆ ಡಿಕೆಸು ನಿಲ್ಲಿಸುವ ಚಿಂತನೆಯಿಲ್ಲ: ಡಿ.ಕೆ.ಶಿವಕುಮಾರ್
ಒಂದೇ ರೀತಿ ಅಂಕ ಪಡೆದವರ ಸಂಖ್ಯೆ ಭಾರೀ ಏರಿಕೆ: ಈ ಬಾರಿಯ ನೀಟ್ ಫಲಿತಾಂಶದಲ್ಲಿ ಕೇವಲ 720 ಪೂರ್ಣ ಅಂಕದೊಂದಿಗೆ ಪ್ರಥಮ ರ್‍ಯಾಂಕ್ ಪಡೆದವರ ಸಂಖ್ಯೆ ಮಾತ್ರವಲ್ಲ ಇತರೆ ಉತ್ತಮ ಅಂಕಗಳನ್ನು ಪಡೆದವರ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಉತ್ತಮ ಫಲಿತಾಂಶ ಬಂದರೂ ಸಾಕಷ್ಟು ಮಂದಿ ವೈದ್ಯಸೀಟು ಪಡೆಯುವುದು ಕಷ್ಟವಾಗಲಿದೆ ಎನ್ನುತ್ತಾರೆ ತಜ್ಞರು. ಉದಾಹರಣೆಗೆ 700 ಅಂಕ ಪಡೆದವರ ಸಂಖ್ಯೆ ಕಳೆದ ವರ್ಷ 172 ಇದ್ದರೆ ಈ ಬಾರಿ 1770ಕ್ಕೇರಿದೆ. ಕಳೆದ ಬಾರಿ 7288 ಮಂದಿ 650 ಅಂಕ ಪಡೆದಿದ್ದರೆ ಈ ಬಾರಿ ಈ ಸಂಖ್ಯೆ 29012ಕ್ಕೇರಿದೆ. ಇದೇ ರೀತಿ 602, 550, 500 ಅಂಕಗಳನ್ನು ಪಡೆದವರ ಸಂಖ್ಯೆಗಳೂ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಕಳೆದ ವರ್ಷ ಉತ್ತಮ ಫಲಿತಾಂಶ ಎಂದು ಭಾವಿಸಿದ್ದ ಕಟ್‌ಆಫ್ ಅಂಕಗಳ ಬೆಲೆ ಕಡಿಮೆಯಾದಂತಾಗಿದೆ ಎನ್ನುವುದು ತಜ್ಞರ ವಾದ.