NEP 2020: ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ: ಸಚಿವ ಅಶ್ವತ್ಥ ನಾರಾಯಣ

• ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಇಂತಹ ಶಿಕ್ಷಣ ನೀತಿ ಜಾರಿಗೊಳಿಸಬೇಕಿತ್ತು ಎಂದ ಆರ್‌ಎಸ್ಎಸ್
• ಹೊಸ ಶಿಕ್ಷಣ ಪಠ್ಯಗಳ ಅನುಷ್ಠಾನದ ಕುರಿತು ವಾರ್ಷಿಕ ಕ್ರಮಗಳ ಕೈಪಿಡಿ ಬಿಡುಗಡೆ
• ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ ಎಂದ ಅಶ್ವತ್ಥ್ ನಾರಾಯಣ್

National education policy is essential for building a strong India Says minister Ashwath Narayan gvd

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಏ.30): ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (Vishweshwaraiah Technological University) ಭಾರತೀಯ ಶಿಕ್ಷಣ ಮಂಡಳಿ ಉತ್ತರ ಕರ್ನಾಟಕ ಪ್ರಾಂತ್ಯದ ಸಹಯೋಗದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ 2020'ರ (NEP 2020) ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಿತು. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ (Dr CN Ashwath Narayan), ಶಿಕ್ಷಣ ಸಚಿವ ಬಿ.ಸಿ.‌ನಾಗೇಶ್ (BC Nagesh), ಆರ್‌ಎಸ್ಎಸ್ ಸರಕಾರ್ಯವಾಹ ಡಾ. ಮನಮೋಹನ ವೈದ್ಯ, ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಅಧ್ಯಕ್ಷರಾದ ಪ್ರೊ. ಸಚ್ಚಿದಾನಂದ ಜೋಶಿ, ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಸಹ ಸಂಘಟನಾ ಕಾರ್ಯದರ್ಶಿ ಶಂಕರಾನಂದ, ಉತ್ತರ ಕರ್ನಾಟಕ ಭಾಗದ ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷರಾದ ಡಾ. ಸತೀಶ ಜಿಗಜಿನ್ನಿ, ವಿಟಿಯು ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ಸೇರಿ ಹಲವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ದಿಕ್ಕನ್ನೇ ಬದಲಿಸಲಿದೆ: ಸಮ್ಮೇಳನದಲ್ಲಿ ಮಾತನಾಡಿದ ಆರ್‌ಎಸ್ಎಸ್ ಸರಕಾರ್ಯವಾಹ ಡಾ.ಮನಮೋಹನ ವೈದ್ಯ, 'ಶಿಕ್ಷಣ ವ್ಯವಸ್ಥೆ ಉದ್ಯೋಗವಕಾಶ ಕಲ್ಪಿಸುವ ಜೊತೆಗೆ ಯುವಪೀಳಿಗೆ ಮನದಲ್ಲಿ ಮಾನವೀಯ ಮೌಲ್ಯ ಬಿತ್ತಬೇಕು. ಈ ಆಶಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಈಡೇರಿಸಲಿದ್ದು ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ದಿಕ್ಕನ್ನೇ ಬದಲಿಸಲಿದೆ ಎಂದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೇ ಇಂತಹ ಶಿಕ್ಷಣ ನೀತಿ ಜಾರಿಗೊಳಿಸಬೇಕಿತ್ತು. ಇದು ವಿಳಂಬವಾದ ಬಗ್ಗೆ ಚರ್ಚಿಸುವ ಬದಲಿಗೆ ಈಹ ಶಿಕ್ಷಣದ ಉದ್ದೇಶ ಸರಿಪಡಿಸುವ ಅಗತ್ಯವಿದೆ. ವೃತ್ತಿ ಕೌಶಲ್ಯ ಅಭಿವೃದ್ಧಿ ಜೊತೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು' ಎಂದರು.

ಕೌಶಲ್ಯ ಕಲಿಕೆ ವ್ಯವಸ್ಥೆ: ರಾಜ್ಯದ ಸಾಧನೆಗೆ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ

'ಎನ್‌ಇಪಿಯಿಂದ ಭಾರತ ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವಾಗಲಿದೆ': ಸಮಾರಂಭ ಉದ್ದೇಶಿಸಿ ಆಂಗ್ಲ ಭಾಷೆಯಲ್ಲಿ ಭಾಷಣ ಮಾಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್, 'ರಾಷ್ಟೀಯ ಶಿಕ್ಷಣ ನೀತಿಯಿಂದ ಭಾರತ ಜ್ಞಾನ ಜಗತ್ತಿನ ಬಲಶಾಲಿ ರಾಷ್ಟ್ರವಾಗಲಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರಿಂದ, ಸಮತೆಯುಳ್ಳ ಮತ್ತು ಚಲನಶೀಲ ಜ್ಞಾನ ಸಮಾಜದ ಪರಿವರ್ತನೆಗೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಎನ್ಇಪಿ ಅವಶ್ಯಕ ಎಂದರು .ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವದ ಅನೇಕ ದೇಶಗಳು  ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಿವೆ ಇದಕ್ಕೆ ಅನುಗುಣವಾಗಿ ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯವಿದ್ದು ದೇಶದಲ್ಲಿ 34 ವರ್ಷಗಳ ನಂತರ ಈ ನೀತಿಯನ್ನು ಜಾರಿಗೆ ತರಲಾಗಿದೆ. 

ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ವೃತ್ತಿಪರ ಬೆಳವಣಿಗೆ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ದಿ ಹೆಚ್ಚಿಸುವುದು ಈ ಶೈಕ್ಷಣಿಕ ಪದ್ಧತಿಯ ಉದ್ದೇಶವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನಂತರ ಸಲೀಸಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಸ್ವಾಂತಂತ್ರ್ಯ ನಂತರ ನೂತನ ರಾಷ್ಟೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವುದು ಬಹಳ ಸವಾಲಿನ ಕೆಲಸವಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಈ ಶಿಕ್ಷಣ ನೀತಿ ದೇಶದ ಅಭಿೃದ್ಧಿಗೆ ಅನುಕೂಲವಾಗಲಿದೆ. ಭವಿಷ್ಯದಲ್ಲಿ ಸಮಾಜ ಬದಲಾವಣೆಯ ಉತ್ತಮ ಶಿಕ್ಷಣ ನೀತಿ ಇದಾಗಲಿದೆ‌. 

ವಿದ್ಯಾರ್ಥಿಗಳು, ಯುವಕರು ಉದ್ಯೋಗ ಅರಸಿ ಹೋಗದೆ ಕೌಶಲ್ಯಾಭಿವೃದ್ಧಿಯಿಂದ ಸ್ವಯಂ ಉದ್ಯೋಗ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಬೇಕು. ದೇಶದಲ್ಲಿನ ಮಾನವ ಸಂಪನ್ಮೂಲನ ಶಕ್ತಿ ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬದಲಾವಣೆ ಜೊತೆಗೆ  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ಇಪಿ ಸಹಾಯ ಆಗಲಿದೆ. ಹೊಸ ರಾಷ್ಟೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಿ, ಕಲೆ, ವಾಣಿಜ್ಯ ಹಾಗೂ ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳ ಜ್ಞಾನ ಮಟ್ಟ ಸುಧಾರಿಸಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲಿದೆ' ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯ ಮಾದರಿಯಾಗಿ ಬೆಳೆಯಲಿ: ಅಶ್ವತ್ಥನಾರಾಯಣ

'34 ವರ್ಷಗಳ ನಂತರ ಭಾರತದಲ್ಲಿ ಉತ್ತಮ ಮಾದರಿ ಶಿಕ್ಷಣ ನೀತಿ ಜಾರಿ': ಸಮಾರಂಭದಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ ಶಿಕ್ಷಣ ಸಚಿವ ಬಿ.ಸಿ.‌ನಾಗೇಶ್, 'ಭಾರತದಲ್ಲಿ 34 ವರ್ಷಗಳ ನಂತರ, ಉತ್ತಮ ಮಾದರಿಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಶೈಕ್ಷಣಿಕ ಬೆಳವಣಿಯಿಂದ ಸಮಾಜದ ಅಭಿವೃದ್ಧಿ ಜೊತೆಗೆ ಬಲಿಷ್ಠ ಮಾನವ ಸಂಪನ್ಮೂಲ ಶಕ್ತಿ ನಿರ್ಮಾಣಕ್ಕೆ ಈ ಶಿಕ್ಷಣ ನೀತಿ ಸದ್ಬಳಕೆಯಾಗಲಿದೆ. ಹೊಸ ಶಿಕ್ಷಣ ನೀತಿಯಿಂದ ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವ ಬೆಳವಣಿಗೆ ಆಗಲಿದೆ. ಸಮಾಜದ ಅಭಿವೃದ್ಧಿಗೆ ಬೇಕಾಗುವ ಉತ್ತಮ ಗುಣಮಟ್ಟದ ಶಿಕ್ಷಣ ನೀತಿ ಇದಾಗಿದ್ದು, ವಿದ್ಯಾರ್ಥಿಗಳು ಕೇವಲ ಪದವಿ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನ ಹೊಂದಬಹುದು' ಎಂದು ತಿಳಿಸಿದರು. ಇದೇ ವೇಳೆ ಹೊಸ ಶಿಕ್ಷಣ ಪಠ್ಯಗಳ ಅನುಷ್ಠಾನದ ಕುರಿತು ವಾರ್ಷಿಕ ಕ್ರಮಗಳ ಕೈಪಿಡಿ ಹಾಗೂ ಕರ್ನಾಟಕ ಉತ್ತರ ಪ್ರಾಂತ್ಯದ ಸಮಷ್ಟಿ ವಾರ್ಷಿಕ ಪುಸ್ತಕ ಬಿಡುಗಡೆ ಮಾಡಲಾಯಿತು.

Latest Videos
Follow Us:
Download App:
  • android
  • ios