ಕೌಶಲ್ಯ ಕಲಿಕೆ ವ್ಯವಸ್ಥೆ: ರಾಜ್ಯದ ಸಾಧನೆಗೆ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ
* ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ್ಯ
* ಕೈಗಾರಿಕಾ ಕ್ರಾಂತಿ 4.0ಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಿರುವುದು ಕ್ರಾಂತಿಕಾರಕವಾಗಿದೆ
* ರಾಜ್ಯದ ಸಾಧನೆಗೆ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ
ಬೆಂಗಳೂರು, (ಏ.29): ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಕೌಶಲ್ಯಗಳನ್ನು ಕಲಿಸಲು ರೂಪಿಸಿರುವ ಕಾರ್ಯಕ್ರಮಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎನ್ಇಪಿ ಜಾರಿ, ಪಠ್ಯಕ್ರಮ ರಚನೆ ಮತ್ತು ರೂಪಿಸಿರುವ ಚೌಕಟ್ಟು ಇತ್ಯಾದಿಗಳನ್ನು ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜತೆ ಅವರು ಗುರುವಾರ ವಿಚಾರ ವಿನಿಮಯ ನಡೆಸಿದರು.
ನಂತರ ಮಾತನಾಡಿದ ಪ್ರಧಾನ್ ಅವರು, `ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಉದ್ಯೋಗದ ಖಾತ್ರಿಯೊಂದಿಗೆ ಬೆಸೆದು, ಕೈಗಾರಿಕಾ ಕ್ರಾಂತಿ 4.0ಗೆ ಅನುಗುಣವಾಗಿ ಪಠ್ಯಕ್ರಮವನ್ನು ರೂಪಿಸಿರುವುದು ಕ್ರಾಂತಿಕಾರಕವಾಗಿದೆ. ಜತೆಗೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ಈ ವರ್ಷ ರಾಜ್ಯದಲ್ಲಿ 2.50 ಲಕ್ಷ ಯುವಜನರಿಗೆ ಉಚಿತವಾಗಿ ಕೌಶಲ್ಯ ಪೂರೈಕೆ ಮಾಡುತ್ತಿರುವುದು ಸ್ತುತ್ಯರ್ಹವಾಗಿದೆ’ ಎಂದರು.
ಕೇಂದ್ರೀಯ ವಿದ್ಯಾಲಯ ಸಂಸದರ ಕೋಟಾ ರದ್ದು
ಡಿಪ್ಲೊಮಾ, ಪಾಲಿಟೆಕ್ನಿಕ್ ಮತ್ತು ಜಿಟಿಟಿಸಿ, ಕರ್ನಾಟಕ-ಜರ್ಮನ್ ತಂತ್ರಜ್ಞಾನ ಕೇಂದ್ರಗಳೆಲ್ಲವೂ ಸುಸ್ಥಿರ ಮಾದರಿಯಲ್ಲಿರುವುದು ಶ್ಲಾಘನೀಯ ಸಂಗತಿಯಾಗಿದೆ. ಇಲ್ಲಿ ಭವಿಷ್ಯದ ತಂತ್ರಜ್ಞಾನಗಳಾದ ಕ್ಲೌಡ್ ಕಂಪ್ಯೂಟಿಂಗ್, ರೋಬೋಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅನಿಮೇಷನ್, ಆಟೋಮೇಷನ್ ಮುಂತಾದ ಕೋರ್ಸುಗಳನ್ನು ರೂಪಿಸಿರುವುದು ಗಮನಾರ್ಹವಾಗಿದೆ. ಈ ಮಾದರಿಯನ್ನು ಉಳಿದವರೂ ಅನುಸರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮುಂಬರುವ ಶೈಕ್ಷಣಿಕ ಸಾಲಿನಿಂದ ಎನ್ಇಪಿ ಜಾರಿಗೊಳಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ನಾಗೇಶ್ ಅವರು ವಿವರಿಸಿದರು.
ಎನ್‌ಇಪಿ-2020 ಪಠ್ಯಕ್ರಮ ಪುಸ್ತಕ ಬಿಡುಗಡೆ
ಧರ್ಮೇಂದ್ರ ಪ್ರಧಾನ್ರಿಂದ ಎನ್‌ಇಪಿ-2020 ಪಠ್ಯಕ್ರಮ ಚೌಕಟ್ ದಾಖಲೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಕೇಂದ್ರ ಶಿಕ್ಷಣ & ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್, NEP-2020 ಪಠ್ಯಕ್ರಮ ಒಳಗೊಂಡಿರುವ ದಾಖಲೆಯ ಪುಸ್ತಕ ಬಿಡುಗಡೆ ಮಾಡಿದ್ದು ಪಠ್ಯಕ್ರಮ ಅಭಿವೃದ್ಧಿಗೆ ಅನುಸರಿಸಬೇಕಾದ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಲ್ಲೇಶ್ವರಂನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಭಾಗಿಯಾಗಿದ್ರು. ಇವರ ಸಮ್ಮುಖದಲ್ಲಿ NEP-2020 ಪಠ್ಯಕ್ರಮ ಚೌಕಟ್ ದಾಖಲೆ ಪುಸ್ತಕ ಬಿಡುಗಡೆ ಮಾಡಲಾಯಿತು.
ದೇಶಕ್ಕೆ ಕ್ರಿಯಾತ್ಮಕ, ಅಭಿವೃದ್ಧಿ ಪರವಾದ ಶಿಕ್ಷಣ ನೀತಿ ಬೇಕಿತ್ತು. ಸಮಾಜಕ್ಕೆ ನೂತನ ಶಿಕ್ಷಣ ನೀತಿ ಬೇಕಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಕರಿಸಿದ್ದಾರೆ. ಈ ನೀತಿ ಜಗತ್ತನ್ನು ಬದಲಿಸಲಿದೆ. NEP ಒಂದು ಫಿಲಾಸಫಿ, ಇದು ಉತ್ತಮ ಸಮಾಜಕ್ಕೆ ಮುನ್ನುಡಿ. NEP ವಿದ್ಯಾರ್ಥಿಗಳಲ್ಲಿ ಸಮಾನತೆ ಬೆಳೆಸುತ್ತದೆ. ಇನ್ನು ಕೆಲ ತಿಂಗಳಲ್ಲಿ NEP ವಿದ್ಯಾರ್ಥಿಗಳಿಗೆ ಸಿಗಲಿದೆ. ಜಪಾನ್, ಜರ್ಮನಿ ಸೂಪರ್ ಪವರ್ ಆಗಿದೆ. ಆದ್ರೆ ಅವ್ರು ಇಂಗ್ಲೀಷ್ ಮೇಲೆ ಅವಲಂಬಿಸಿರಲಿಲ್ಲ. ಅವರು ಮಾತೃ ಭಾಷೆಯನ್ನ ಬಳಸಿ ಮುಂದೆ ಬಂದರು ನಮ್ಮಲ್ಲೂ ಹೀಗೆ ಆಗಬೇಕಿದೆ. ಹಿಂದಿ, ಕನ್ನಡ ಓಡಿಸಾ ಹೀಗೆ ಮಾತೃ ಭಾಷೆಯಲ್ಲಿ ನಾವೆಲ್ಲ ಶಿಕ್ಷಣ ಪಡೆದು ಅಭಿವೃದ್ಧಿ ಸಾಧಿಸಬೇಕು ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.