ಹಿಜಾಬ್: 24 ವಿದ್ಯಾರ್ಥಿನಿಯರಿಗೆ ಒಂದು ವಾರ ಕಾಲೇಜಿಗೆ ನಿರ್ಬಂಧ
* ಒಂದು ವಾರ ಕಾಲೇಜಿಗೆ ನಿರ್ಬಂಧ
* ಮಂಗಳೂರು, ಉಪ್ಪಿನಂಗಡಿಯಲ್ಲಿ ಹಿಜಾಬ್ ವಿವಾದ ತೀವ್ರ
* ಮಂಗಳೂರು ವಿವಿ ಘಟಕ ಕಾಲೇಜಿನ ಮೂವರಿಗೆ ನೋಟಿಸ್
ಮಂಗಳೂರು(ಜೂ.07): ದಕ್ಷಿಣ ಕನ್ನಡದ ಎರಡು ಕಾಲೇಜುಗಳ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿರುವ ಹಿಜಾಬ್ ವಿವಾದ ಇದೀಗ ಇನ್ನಷ್ಟುತೀವ್ರಗೊಂಡಿದೆ. ಪ್ರಾಂಶುಪಾಲರ ಕಟ್ಟುನಿಟ್ಟಿನ ಸೂಚನೆ ಹೊರತಾಗಿಯೂ ಮಂಗಳೂರು ವಿವಿ ಘಟಕ ಕಾಲೇಜು ಮತ್ತು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರವೂ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಆಗಮಿಸಿದ್ದು, ತರಗತಿಗೆ ಪ್ರವೇಶ ನಿರಾಕರಿಸಲಾಗಿದೆ.
ಈ ಮಧ್ಯೆ, ಮಂಗಳೂರು ವಿವಿ ಕಾಲೇಜಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಮೂವರು ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ನೋಟಿಸ್ ಜಾರಿಗೊಳಿಸಿದ್ದರೆ, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 24 ವಿದ್ಯಾರ್ಥಿನಿಯರಿಗೆ ಒಂದು ವಾರ ಕಾಲ ತರಗತಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಹಿಜಾಬ್ ವಿವಾದಕ್ಕೆ ಡೋಂಟ್ ಕೇರ್ ಎಂದ ಮುಸ್ಲಿಂ ವಿದ್ಯಾರ್ಥಿನಿಯರು: ಉಡುಪಿ ಸರ್ಕಾರಿ ಕಾಲೇಜಲ್ಲಿ ಅಡ್ಮಿಷನ್ ಹೆಚ್ಚಳ
ಬಿಗಿ ಪಟ್ಟು:
ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ನಡೆಯುತ್ತಿರುವ ಅಹಿತಕರ ಘಟನಾವಳಿ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಜಂಟಿ ನಿರ್ದೇಶಕಿ ಸೋಮವಾರ ಕಾಲೇಜಿಗೆ ಭೇಟಿ ನೀಡಿ ಹಿಜಾಬ್ ಪರ ವಿದ್ಯಾರ್ಥಿನಿಯರ ಅಹವಾಲು ಆಲಿಸಿದರು. ತರಗತಿಗೆ ಹಾಜರಾಗುವಂತೆ ವಿನಂತಿಸಿದರು. ಆದರೂ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಉಪನ್ಯಾಸಕರ ಸಭೆ ಕರೆದ ಪ್ರಾಂಶುಪಾಲರು 24 ವಿದ್ಯಾರ್ಥಿನಿಯರಿಗೆ ಒಂದು ವಾರ ತರಗತಿಗೆ ನಿರ್ಬಂಧ ಹೇರಿ ನಿರ್ಣಯ ಕೈಗೊಂಡರು. ಇದೇ ವೇಳೆ, ಮಂಗಳೂರು ವಿವಿ ಘಟಕ ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಿದ್ದ ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜಿನ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಪ್ರಾಂಶಪಾಲೆ ಡಾ.ಅನಸೂಯಾ ರೈ ನೋಟಿಸ್ ನೀಡಿದ್ದಾರೆ.
ಕಾನೂನು ಪ್ರಕಾರ ಪ್ರಶ್ನಿಸಲಿ-ಖಾದರ್: ಹಿಜಾಬ್ ವಿಚಾರದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಏನೆಲ್ಲ ಸಹಕಾರ ನೀಡಬೇಕೋ ಅದನ್ನು ನೀಡಿದ್ದೇನೆ. ನಾವು ಇದನ್ನು ಕಾನೂನು ಪ್ರಕಾರವೇ ಪ್ರಶೆæ್ನ ಮಾಡಬೇಕಾಗುತ್ತದೆ. ಅದು ಬಿಟ್ಟು ಸಮಾಜದಲ್ಲಿ ಗೊಂದಲ ಸೃಷ್ಟಿಗೆ ಅವಕಾಶ ನೀಡಬಾರದು ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ. ಈ ಮೂಲಕ ವಿವಾದದಲ್ಲಿ ಶಾಸಕ ಖಾದರ್ ನೆರವು ನೀಡುತ್ತಿಲ್ಲ ಎಂಬ ಕೆಲ ವಿದ್ಯಾರ್ಥಿಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.