Asianet Suvarna News Asianet Suvarna News

ಬಳ್ಳಾರಿ: ಎಂಎಲ್‌ಸಿ ವೈ.ಎಂ. ಸತೀಶ ಸ್ಪಂದನೆ: ನೀಗಿದ ಶಾಲೆ ಸಮಸ್ಯೆ

ಪಾರ್ವತಿನಗರ ಸರ್ಕಾರಿ ಶಾಲೆಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ ಎಂಎಲ್‌ಸಿ ವೈ.ಎಂ. ಸತೀಶ 

MLC YM Satish Provided Drinking Water Facility to the Government School in Ballari grg
Author
Bengaluru, First Published Jul 31, 2022, 11:30 AM IST

ಬಳ್ಳಾರಿ(ಜು.31):  ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆಯಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಇಲ್ಲಿನ ಪಾರ್ವತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿಧಾನ ಪರಿಷತ್‌ ಸದಸ್ಯ ವೈ.ಎಂ. ಸತೀಶ್‌ ಅವರು ಸ್ವಂತ ಖರ್ಚಿನಿಂದ ಬೋರ್‌ವೆಲ್‌ ಅಳವಡಿಸುವ ಮೂಲಕ ನೀರಿನ ಸಮಸ್ಯೆಗೆ ಸ್ಪಂದಿಸಿದ್ದಾರೆ. ಇದರಿಂದ ಶಾಲೆಯಲ್ಲಿ ಓದುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಶಿಕ್ಷಕಿಯರು ಹಾಗೂ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗೆ ಶೌಚಾಲಯ ಸಮಸ್ಯೆಯೂ ನೀಗಿದೆ.

ನಗರದ ಪ್ರತಿಷ್ಠಿತ ಕಾಲೋನಿಯಾಗಿರುವ ಪಾರ್ವತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಡ ಸಮುದಾಯವೇ ಹೆಚ್ಚಾಗಿರುವ ಹರಿಚಂದ್ರನಗರ, ಮಹಾನಂದಿಕೊಟ್ಟಂ, ಭಗತ್‌ಸಿಂಗ್‌ ನಗರ, ತಾಳೂರು ರಸ್ತೆಯ ರೇಣುಕಾನಗರ, ಕನ್ನಡನಗರ ಸೇರಿದಂತೆ ವಿವಿಧೆಡೆಯಿಂದ ಮಕ್ಕಳು ಶಾಲೆಯ ವಿದ್ಯಾಭ್ಯಾಸಕ್ಕೆಂದು ಬರುತ್ತಿದ್ದು 1ರಿಂದ 8ನೇ ತರಗತಿ ವರೆಗಿನ ಈ ಶಾಲೆಯಲ್ಲಿ 304 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿತ್ತು. ಕುಡಿಯುವ ನೀರಿಗೆಂದು ಅಳವಡಿಸಿದ್ದ ಬೋರ್‌ವೆಲ್‌ ದುರಸ್ತಿಗೆ ಬಂದಿತ್ತು. ಪೈಪ್‌ಲೈನ್‌ ಸಹ ಹಾಳಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿಗೆ ತತ್ವಾರ ಎದುರಾಗಿತ್ತು. ಹೀಗಾಗಿ, ಮಕ್ಕಳು ಮನೆಯಿಂದಲೇ ಬಾಟಲ್‌ಗಳಿಂದ ನೀರು ತರುತ್ತಿದ್ದರು. ಇನ್ನು ಶಾಲೆಯ ಮುಂಭಾಗದ ಚರಂಡಿ ದುರಸ್ತಿ ಕಾಣದೆ ಗಬ್ಬುನಾರುತ್ತಿತ್ತು. ಮಕ್ಕಳು ನಿತ್ಯ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗಾಗಿ ಒದ್ದಾಡುತ್ತಿರುವುದನ್ನು ಕಂಡ ಶಾಲೆಯ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ವಿಧಾನಪರಿಷತ್‌ ಸದಸ್ಯ ವೈ.ಎಂ.ಸತೀಶ್‌ ಅವರನ್ನು ಭೇಟಿ ಮಾಡಿ ಅಹವಾಲು ಹೇಳಿಕೊಂಡರು.

6 ವರ್ಷ ತುಂಬಿದ್ದರೆ ಮಾತ್ರ 1ನೇ ಕ್ಲಾಸ್‌ಗೆ ಪ್ರವೇಶ..!

ಕೂಡಲೇ ಸ್ಥಳಕ್ಕೆ ತೆರಳಿದ ವೈ.ಎಂ.ಸತೀಶ್‌ ಅವರು ಶಾಲೆಯಲ್ಲಾಗಿರುವ ಸಮಸ್ಯೆಯನ್ನು ಖುದ್ದು ವೀಕ್ಷಿಸಿದರಲ್ಲದೆ ಹೊಸದಾಗಿ ಬೋರ್‌ವೆಲ್‌ ನಿರ್ಮಿಸಿ, ಹಳೆಯ ಪೈಪ್‌ಗಳನ್ನು ಬದಲಾಯಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ. ಶಾಲೆಯಲ್ಲಿ ಬಳಕೆಯಾಗುತ್ತಿದ್ದ ನೀರು ಚರಂಡಿಗೆ ಸೇರಿ ಅಲ್ಲಿಯೇ ನಿಲ್ಲುತ್ತಿದ್ದು, ಅದರಿಂದ ದುರ್ನಾತ ಬರುತ್ತಿರುವುದನ್ನು ಗಮನಿಸಿ, ಚರಂಡಿ ದುರಸ್ತಿಯನ್ನು ಸಹ ಕೈಗೊಂಡಿದ್ದಾರೆ.

ಸಂತಸ:

ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆ ನೀಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಕುಡಿವನೀರು ಹಾಗೂ ಶೌಚಾಲಯ ಸಮಸ್ಯೆಯಿಂದ ತೀವ್ರ ತೊಂದರೆಯಾಗಿತ್ತು. ಬಾಲಕಿಯರು ಶೌಚಾಲಯ ಬಳಕೆ ಮಾಡುವ ಸ್ಥಿತಿ ಇರಲಿಲ್ಲ. ಶಾಲೆಯಲ್ಲಿರುವ 11 ಶಿಕ್ಷಕರ ಪೈಕಿ 10 ಜನರು ಶಿಕ್ಷಕಿಯರೇ ಇದ್ದಾರೆ. ನೀರಿಲ್ಲದೆ ಒದ್ದಾಟವಾಗಿತ್ತು. ನೀರಿನ ಅಭಾವದಿಂದ ಶೌಚಾಲಯ ಬಳಕೆ ಮಾಡುವಂತಿರಲಿಲ್ಲ. ಶಾಲೆಯ ಸಮಸ್ಯೆ ಬಗ್ಗೆ ಕೆಲವು ಗಣ್ಯರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಣ ಇಲಾಖೆಗೆ ತಿಳಿಸಿ ಕಾಮಗಾರಿ ನಡೆದು ಶಾಲೆಗೆ ನೀರಿನ ವ್ಯವಸ್ಥೆ ಸರಿಯಾಗಲು ಸಾಕಷ್ಟುದಿನಗಳು ಬೇಕಾಗಬಹುದು ಎಂದರಿತ ಶಾಲೆಯ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ವಿಧಾನಪರಿಷತ್‌ ಸದಸ್ಯರಾದ ವೈ.ಎಂ.ಸತೀಶ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡೆವು. ಎಂಎಲ್‌ಸಿ ಅವರು ಕೂಡಲೇ ಸ್ಪಂದಿಸಿದರಲ್ಲದೆ, ಪೈಪ್‌ಲೈನ್‌, ಬೋರ್‌ವೆಲ್‌ ಅಳವಡಿಸಿ ನೀರಿನ ಸಮಸ್ಯೆ ನೀಗಿಸಿದರು. ಜೊತೆಗೆ ಚರಂಡಿ ಅವ್ಯವಸ್ಥೆಯನ್ನು ಸರಿಪಡಿಸಿ, ದುರ್ವಾಸನೆಯನ್ನು ತಡೆದರು ಎಂದು ಶಾಲೆಯ ಶಿಕ್ಷಕರು ಕನ್ನಡಪ್ರಭಕ್ಕೆ ವಿವರಿಸಿದರಲ್ಲದೆ, ಎಂಎಲ್‌ಸಿ ಅವರಿಂದ ಶಾಲೆಗೆ ಅನುಕೂಲವಾಗಿದೆ. ಕುಡಿಯುವ ನೀರಿನ ಸಮಸ್ಯೆ ದೂರಾಗಿದೆ ಎಂದು ಹೇಳಿದರು.

ಶಾಲೆಯಲ್ಲಿ ಕುಡಿವ ನೀರಿನ ಸಮಸ್ಯೆಯಿದ್ದು ಸ್ಪಂದಿಸುವಂತೆ ಶಿಕ್ಷಕರು ಮನವಿ ಮಾಡಿಕೊಂಡರು. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿ, ಪೈಪ್‌ಲೈನ್‌ ಹಾಳಾಗಿತ್ತು. ಬೊರ್‌ವೆಲ್‌ ಕೂಡಿಸಬೇಕಾಗಿತ್ತು. ಕೂಡಲೇ ಕ್ರಮ ಕೈಗೊಳ್ಳಲಾಯಿತು. ಇದೀಗ ಶಾಲೆಗೆ ನೀರಿನ ಸೌಕರ್ಯವಾಗಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲವಾಗಿದೆ ಅಂತ ಬಳ್ಳಾರಿ-ವಿಜಯನಗರ ಜಿಲ್ಲೆ ವಿಧಾನಪರಿಷತ್‌ ಸದಸ್ಯ ವೈ.ಎಂ.ಸತೀಶ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios