ಬೆಂಗಳೂರು(ಜೂ.05): ದ್ವಿತೀಯ ಪಿಯು ಪರೀಕ್ಷೆ ರದ್ದು ಪಡಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಪೋಷಕ ಸಂಘಟನೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿರುವ ಇಲಾಖಾ ಕ್ರಮಕ್ಕೆ ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಖಾಸಗಿ ಶಾಲಾ ಸಂಘಟನೆಗಳಿಂದಲೂ ಸರ್ಕಾರದ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಳವಾಗಿಯಾದರೂ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖಾ ಕ್ರಮ ಸರಿಯಾಗಿದೆ. ಆದರೆ, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿದ್ದು ಸರಿಯಲ್ಲ. ವಿದ್ಯಾರ್ಥಿ ಜೀನವನದಲ್ಲಿ ಅತಿ ಮುಖ್ಯವಾದ ಘಟ್ಟದ್ವಿತೀಯ ಪಿಯುಸಿ. ಇಲ್ಲಿನ ಕಲಿಕೆ, ಫಲಿತಾಂಶ ಮಕ್ಕಳ ಉನ್ನತ ಶಿಕ್ಷಣಕ್ಕೆ ಭದ್ರ ಅಡಿಪಾಯ. ಇಂತಹ ಹಂತದಲ್ಲಿ ಪರೀಕ್ಷೆ ನಡೆಸದೆ ಫಲಿತಾಂಶ ನೀಡುವುದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಂತೂ ತಾರತಮ್ಯವಾಗಲಿದೆ. ಜತೆಗೆ ಮಕ್ಕಳ ಭವಿಷ್ಯ ಹಾಗೂ ವೃತ್ತಿಜೀನವಕ್ಕೂ ಸಾಕಷ್ಟುತೊಂದರೆಯಾಗಲಿದೆ ಎಂದು ಕ್ಯಾಮ್ಸ್‌ ಸಂಘಟನಾ ಕಾರ್ಯದರ್ಶಿ ಡಿ.ಶಶಿಕುಮಾರ್‌ ಮತ್ತು ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್‌ ತಾಳೀಕಟ್ಟೆ ಹೇಳಿದ್ದಾರೆ.

ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ SSLC ಎಕ್ಸಾಮ್: ಯಾರೂ ಫೇಲ್ ಆಗೋಲ್ಲ

ಪೋಷಕ ಸಂಘಟನೆ ಪ್ರತಿಕ್ರಿಯೆ:

ದ್ವಿತೀಯ ಪಿಯು ಪರೀಕ್ಷೆ ರದ್ದು ಕ್ರಮವನ್ನು ಕರ್ನಾಟಕ ರಾಜ್ಯ ಖಾಸಗಿ ಶಾಲಾ ಮಕ್ಕಳ ಪೋಷಕ ಸಂಘಟನೆಗಳ ಸಮನ್ವಯ ವೇದಿಕೆ ಸ್ವಾಗತಿಸಿದೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನೂ ರದ್ದುಪಡಿಸಬೇಕೆಂಬ ನಮ್ಮ ಬೇಡಿಕೆಗೆ ಸರ್ಕಾರ ಮನ್ನಣೆ ನೀಡದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ನಿರ್ಧಾರದಿಂದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗೊಂದಲಕ್ಕೀಡಾಗಿದ್ದಾರೆ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಕೂಡಲೇ ಈ ನಿರ್ಧಾರ ಪುನರ್‌ ಪರಿಶೀಲಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನೂ ರದ್ದುಪಡಿಸಬೇಕು. ಮಕ್ಕಳ ಇದುವರೆಗಿನ ಕಲಿಕಾ ಸಾಮರ್ಥ್ಯ, ಶಾಲಾ ಹಂತದ ಪರೀಕ್ಷೆಗಳನ್ನು ಆಧಾರಿಸಿ ಫಲಿತಾಂಶ ನೀಡಬೇಕು ಎಂದು ವೇದಿಕೆ ಸದಸ್ಯ ಬಿ.ಎನ್‌.ಯೋಗಾನಂದ ಒತ್ತಾಯಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿರ್ಧಾರ ಅರ್ಥಹೀನ

ರಾಜ್ಯ ಸರ್ಕಾರ ದ್ವಿತೀಯ ಪಿಯು ರದ್ದು ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಹಾಸ್ಯಾಸ್ಪದ ಹಾಗೂ ಅರ್ಥಹೀನ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಟೀಕಿಸಿದ್ದಾರೆ. ದ್ವಿತೀಯ ಪಿಯು ಮಕ್ಕಳಿಗೆ ಪ್ರಥಮ ಪಿಯು ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡಿ ಪಾಸು ಮಾಡಲು ಇಲಾಖೆ ನಿರ್ಧರಿಸಿದೆ. ಅದೇ ರೀತಿ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳನ್ನೂ ಅವರ ಹಿಂದಿನ ತರಗತಿಗಳ ಸಂಚಿತ ಸಾಧನೆಯನ್ನು ಪರಿಗಣಿಸಿ ಮಂಡಳಿ ಪರೀಕ್ಷೆ ಇಲ್ಲದೆಯೇ ವಸ್ತುನಿಷ್ಠವಾಗಿ ಹಾಗೂ ವೈಜ್ಞಾನಿಕವಾಗಿ ತೇರ್ಗಡೆಗೊಳಿಸಲು ಅವಕಾಶವಿದೆ. ಅಲ್ಲದೆ ಬಹುತೇಕ ಮಕ್ಕಳು ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಹಾಗಾಗಿ 8, 9ನೇ ತರಗತಿ ಸೇರಿ ಹಿಂದಿನ ಕನಿಷ್ಠ ಮೂರು ವರ್ಷಗಳ ಶೈಕ್ಷಣಿ ಸಾಧನೆ ಪರಿಗಣಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ನೀಡಬಹುದು. ಆದರೆ, ಸರ್ಕಾರ ಪಿಯುಸಿ ಪರೀಕ್ಷೆ ರದ್ದು ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಯಾವ ಆಧಾರದಲ್ಲಿ ತೆಗೆದುಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಇದು ವೈಜ್ಞಾನಿಕವಾಗಿ ಮಾತ್ರವಲ್ಲ ಶೈಕ್ಷಣಿಕವಾಗಿಯೂ ತಪ್ಪು ನಿರ್ಧಾರ ಎಂದು ಹೇಳಿದ್ದಾರೆ.

ಕೊರೋನಾ ಕಂಟ್ರೋಲ್‌ಗೆ ಬರದಿದ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು: ಸಿಎಂ ಬಿಎಸ್‌ವೈ

ಕಳೆದ 14 ತಿಂಗಳಿಂದ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೈಕ್ಷಣಿಕ ಕಲಿಕಾ ಚಟುವಟಿಕೆಗಳು ಸಮರ್ಪಕವಾಗಿ ನಡೆದಿಲ್ಲ. ಹಾಗಾಗಿ ಮಕ್ಕಳು ಮತ್ತು ಪೋಷಕರ ಆತಂಕ ಮತ್ತು ಮಾನಸಿಕ ಒತ್ತಡ ನಿವಾರಿಸಲು ಕೂಡಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನೂ ರದ್ದುಮಾಡಬೇಕು. ಅದೇ ರೀತಿ ದ್ವಿತೀಯ ಪಿಯು ಪರೀಕ್ಷೆಗಳನ್ನು ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳನ್ನು ಸಹ ಪಾಸ್‌ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ವಿಚಾರದಲ್ಲಿ ಎಲ್ಲರನ್ನೂ ಸಮಾಧಾನ ಪಡಿಸುವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಿಕ್ಷಣ ಹಾಗೂ ಆರೋಗ್ಯ ತಜ್ಞರು, ಶಿಕ್ಷಕರು, ಪೋಷಕರು, ಜನಪ್ರತಿನಿಧಿಗಳು ಎಲ್ಲರೊಂದಿಗೆ ಚರ್ಚಿಸಿ ಅಭಿಪ್ರಾಯಗಳನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲರೂ ಸಹಕರಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.