Chamarajanagar: ಸಚಿವ ವಿ.ಸೋಮಣ್ಣ ಅಭಿಮಾನಿಗಳಿಂದ ಸರ್ಕಾರಿ ಕಾಲೇಜಿಗೆ ರೋಬೋಟಿಕ್ ಪ್ರಯೋಗಾಲಯ ಕೊಡುಗೆ
ಕೇಕ್ ಕತ್ತರಿಸಿ, ಅದ್ದೂರಿ ಪಾರ್ಟಿ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಫ್ಲೆಕ್ಸ್, ಬಂಟಿಂಗ್‌ಗಳನ್ನು ಅಳವಡಿಸಿ, ದುಂದುವೆಚ್ಚ ಮಾಡಿ ಅಭಿಮಾನಿಗಳು ತಮ್ಮ ನಾಯಕನ ಹುಟ್ಟು ಹಬ್ಬವನ್ನು ಆಚರಿಸುವುದನ್ನು ನೋಡಿದ್ದೇವೆ.
ವರದಿ: ಪುಟ್ಟರಾಜು.ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜು.27): ಕೇಕ್ ಕತ್ತರಿಸಿ, ಅದ್ದೂರಿ ಪಾರ್ಟಿ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಫ್ಲೆಕ್ಸ್, ಬಂಟಿಂಗ್‌ಗಳನ್ನು ಅಳವಡಿಸಿ, ದುಂದುವೆಚ್ಚ ಮಾಡಿ ಅಭಿಮಾನಿಗಳು ತಮ್ಮ ನಾಯಕನ ಹುಟ್ಟು ಹಬ್ಬವನ್ನು ಆಚರಿಸುವುದನ್ನು ನೋಡಿದ್ದೇವೆ. ಆದರೆ ವಸತಿ ಹಾಗು ಮೂಲಸೌಕರ್ಯಗಳ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರ ಅಭಿಮಾನಿಗಳು ಹತ್ತಾರು ವರ್ಷ ನೆನಪಿನಲ್ಲಿ ಉಳಿಯುವಂತಹ ಜನೋಪಯೋಗಿ ಕೆಲಸವೊಂದನ್ನು ಮಾಡುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಶಿಷ್ಠವಾಗಿ ಆಚರಿಸಿದ್ದಾರೆ.
ಹೌದು! ಚಾಮರಾಜನಗರ ಮೈಸೂರು ಜಿಲ್ಲೆಯ ವಿ.ಸೋಮಣ್ಣ ಅಭಿಮಾನಿಗಳ ಬಳಗವು ಸರ್ಕಾರಿ ಪದವಿ ಪೂರ್ವ ಕಾಲೇಜೊಂದಕ್ಕೆ ಅತ್ಯಾಧುನಿಕ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡುವ ಮೂಲಕ ತಮ್ಮ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ. ಕಳೆದ ವರ್ಷ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕು ಹಂಗಳ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ಕೊಡುಗೆಯಾಗಿ ನೀಡಿದ್ದ ವಿ.ಸೋಮಣ್ಣ ಅಭಿಮಾನಿ ಬಳಗ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಇರಿಸಿ ಗುಂಡ್ಲುಪೇಟೆ ತಾಲೋಕು ಬೇಗೂರು ಹೋಬಳಿ ಕೇಂದ್ರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡುವ ಮೂಲಕ ತಮ್ಮ ನಾಯಕನ ಜನ್ಮದಿನದ ಆಚರಣೆಯನ್ನು ಸ್ಮರಣೀಯವಾಗಿಸಿದ್ದಾರೆ.
ಭಾರತದ ಸೈನಿಕರು ಮಾನವೀಯತೆ ಮೆರೆದಿದ್ದಾರೆ: ಮಾಜಿ ಸೈನಿಕ ಪುಟ್ಟಸ್ವಾಮಿ
ಇದರೊಂದಿಗೆ ಇಡೀ ರಾಜ್ಯದಲ್ಲೇ ಅತ್ಯಾಧುನಿಕ ರೊಬೋಟಿಕ್ ಪ್ರಯೋಗಾಲಯ ಹೊಂದಿದ ಪ್ರಥಮ ಸರ್ಕಾರಿ ಪದವಿಪೂರ್ವ ಕಾಲೇಜು ಎಂಬ ಹೆಗ್ಗಳಿಕೆಗೆ ಬೇಗೂರು ಸರ್ಕಾರಿ ಪದವಿಪೂರ್ವ ಕಾಲೇಜು ಪಾತ್ರವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುವ ಈ ಕಾಲೇಜಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಜ್ಷಾನ ಮತ್ತ ರೊಬೋಟಿಕ್ ಪ್ರಯೋಗಾಲಯ ನಿರ್ಮಿಸಿಕೊಟ್ಟು ಅದಕ್ಕೆ ಲಿಂಗೈಕ್ಯ ಶ್ರೀ ಸಿದ್ದಗಂಗಾ ಶಿವಕುಮಾರಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಈ ರೊಬೋಟ್‌ನೊಂದಿಗೆ 40ಕ್ಕು ಹೆಚ್ಚು ಸಲಕರಣೆಗಳ ಕಿಟ್‌ಗಳನ್ನು ಸಹ ನೀಡಲಾಗಿದ್ದು, ಶಿಕ್ಷಕರ ನೆರವಿಲ್ಲದೆ ರೊಬೋಟ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೆ ನಾನಾ ರೀತಿಯ ಮಾಡಲ್ ತಯಾರಿಸಬಹುದು, ಪ್ರಯೋಗಗಳನ್ನು ಮಾಡಬಹುದು. ಅದು ಭೌತಶಾಸ್ತ್ರವಿರಲಿ, ಜೀವಶಾಸ್ತ್ರವಿರಲಿ, ರಸಾಯನಶಾಸ್ತ್ರ ವಿರಲಿ, ಸಾಮಾನ್ಯ ಜ್ಞಾನವಾಗಿರಲಿ ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಗಳನ್ನು ರೊಬೋಟ್ ಮುಂದೆ ಕೇಳಿ ಉತ್ತರ ಪಡೆಯಬಹುದಾಗಿದೆ. ಜೊತೆಗೆ ಸಂಶಯಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ರೊಬೋಟ್ ಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾದ ಪಠ್ಯಗಳ ಪ್ರೋಗ್ರಾಮಿಂಗ್‌ಗಳನ್ನು ಅಳವಡಿಸಲಾಗಿದ್ದು ಪ್ರೌಢಶಾಲಾ ಹಾಗು ಪಿಯು ವಿದ್ಯಾರ್ಥಿಗಳ ಕ್ರಿಯಾಶೀಲ ಕಲಿಕೆಗೆ ಈ ವಿಜ್ಞಾನ ಮತ್ತು ರೊಬೋಟಿಕ್ ಪ್ರಯೋಗಾಲಯ ಪೂರಕವಾಗಿದೆ.
Chamarajanagar: ತನ್ನ ಸಮಾಧಿ ತಾನೆ ನಿರ್ಮಿಸಿ, ತಿಥಿಗೆ 1 ಲಕ್ಷ ಇಟ್ಟಿದ್ದ ಸ್ವಾಭಿಮಾನಿ!
ಇದು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕಲಿಕಾ ಆಸಕ್ತಿ ಮೂಡಿಸಲಿದೆ ಎನ್ನುತ್ತಾರೆ ಕಾಲೇಜಿನ ವಿಜ್ಞಾನ ಉಪನ್ಯಾಸಕ ಷಡಕ್ಷರಿ. ನಮ್ಮ ಕಾಲೇಜಿನಲ್ಲಿ ಪ್ರಯೋಗಾಲಯ ಇದ್ದರೂ ಬೇಕಾದ ಸೌಲಭ್ಯಗಳ ಕೊರತೆ ಇತ್ತು, ಇದೀಗ ರೊಬೋಟ್ ಸೇರಿದಂತೆ ಹಲವು ಉಪಕರಣಗಳನ್ನು ನೀಡಿರುವುದರಿಂದ ಕಲಿಯಲು ಇನ್ನೂ ಹೆಚ್ಚಿನ ಉತ್ಸಾಹ ಬಂದಿದೆ. ದೊಡ್ಡ ದೊಡ್ಡ ನಗರಗಳ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಕಾಣಬಹುದಾದ ಅತ್ಯಾಧುನಿಕ ಪ್ರಯೋಗಾಲಯ ನಮ್ಮ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲು ಇರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿನಿ ಬಸವಸಿರಿ ತಿಳಿಸಿದರು.