Chamarajanagar: ತನ್ನ ಸಮಾಧಿ ತಾನೆ ನಿರ್ಮಿಸಿ, ತಿಥಿಗೆ 1 ಲಕ್ಷ ಇಟ್ಟಿದ್ದ ಸ್ವಾಭಿಮಾನಿ!
ಚಾಮರಾಜನಗರ ತಾಲೂಕಿನ ನಂಜೇದೇವನಪುರದ ಪುಟ್ಟನಂಜಪ್ಪ ಎಂಬುವವರು ತನ್ನ ಸಮಾಧಿಯನ್ನು ತಾನೇ 20 ವರ್ಷಗಳ ಹಿಂದೆಯೇ ನಿರ್ಮಿಸಿ ಇಟ್ಟಿದ್ದು, ಮಕ್ಕಳಿಗೆ ತೊಂದರೆಯಾಗಬಾರದೆಂದು ಅಂತ್ಯಸಂಸ್ಕಾರ ಹಾಗು ತಿಥಿಗೆ 1 ಲಕ್ಷ ರೂಪಾಯಿ ಇಟ್ಟಿದ್ದರು.
ಚಾಮರಾಜನಗರ (ಜು.25): ಸಾಮಾನ್ಯವಾಗಿ ಸ್ವಾಮೀಜಿಗಳು ತಾವು ನಿಧನವಾಗುವ ಮುನ್ನೆವೇ ಮಠದಲ್ಲಿ ಅವರ ಸಮಾಧಿಯನ್ನ ನಿರ್ಮಾಣವಾಗಿರುತ್ತೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾನು ಬದುಕಿದ್ದಾಗಲೆ 20 ವರ್ಷದ ಹಿಂದೆಯೆ ತನ್ನ ಸಮಾಧಿ ನಿರ್ಮಾಣ ಮಾಡಿಕೊಂಡಿದ್ದು, ಆ ಸಮಾಧಿಯಲ್ಲೆ ಅಂತ್ಯಕ್ರಿಯೆ ನೇರವೇರಿಸಬೇಕೆಂದು ಆಸೆ ಪಟ್ಟಿದ್ದರು ಅವರ ಆಸೆಯಂತೆ ಇಂದು ನಿಧನರಾಗಿದ್ದು ಅವರು ನಿರ್ಮಿಸಿದ್ದ ಸಮಾಧಿಯಲ್ಲೆ ಸಮಾಧಿಯಲ್ಲೆ ಅವರ ಅಂತ್ಯಕ್ರಿಯೆ ನೆರವೇರಿತು. ಮುಂಚೆಯೆ ಸಮಾಧಿ ನಿರ್ಮಾಣವಾಗಿರುವ ವ್ಯಕ್ತಿ. ಅದೇ ಸಮಾಧಿಯಲ್ಲೆ ಅಂತ್ಯಕ್ರಿಯೆ. ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಚಾಮರಾಜನಗರ. ಹೌದು, ಚಾಮರಾಜನಗರ ತಾಲೂಕಿನ ನಂಜೇದೇವನಪುರ ನಿವಾಸಿ ಪುಟ್ಟನಂಜಪ್ಪ (85) ಇವರಿಗೆ 3 ಜನ ಗಂಡು ಮಕ್ಕಳಿದ್ದು ಮಕ್ಕಳಿಗೆ ಮುಂದೆ ಯಾವುದೇ ರೀತಿಯ ಹೊರೆಯಾಗದಂತೆ ಜೀವನ ಸಾಗಿಸುತ್ತಿದ್ದ ಪುಟ್ಟನಂಜಪ್ಪ ಹಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಿನ್ನೆ ರಾತ್ರಿ ಸಾವನಪ್ಪಿದ್ದಾರೆ. ಆದ್ರೆ ಇವರು ಸಾಯುವ ಮುನ್ನೆವೆ ಯಾರಿಗೂ ಹೊರೆಯಾಗದಂತೆ ತಮ್ಮ ಸಮಾಧಿಯನ್ನು ತಾವೆ ನಿರ್ಮಿಸಿಕೊಂಡಿದ್ದು ವಿಶೇಷ.
ಈ ರೀತಿಯ ಸಮಾಧಿಗಳನ್ನ ಸಾಮಾನ್ಯವಾಗಿ ಮಠಗಳಲ್ಲಿ ಸ್ವಾಮಿಜಿಗಳು ನಿರ್ಮಾಣ ಮಾಡಿಕೊಂಡಿರುತ್ತಾರೆ. ಅಂತಹ ಸಮಾಧಿಯಲ್ಲಿ ಅವರು ಕಾಲವಾದಾಗ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತೆ. ಆದ್ರೆ ಪುಟ್ಟನಂಜಪ್ಪ ತಮ್ಮ ಜಮೀನಲ್ಲೆ 20 ವರ್ಷದ ಹಿಂದೆಯೆ ಅವರ ಇಚ್ಚೆಯಂತೆ ತಮ್ಮ ಸಮಾಧಿಯನ್ನ ತಾವೆ ಕಟ್ಟಿಸಿಕೊಂಡಿದ್ದಾರೆ. ಸಮಾಧಿ ಕಟ್ಟಿಸಿಕೊಂಡು ಅಲ್ಲಿಗೆ ಮರಳನ್ನು ತುಂಬಿಸಿದ್ರಂತೆ. ನಿನ್ನೆ ಸಾವನಪ್ಪಿದ್ರಿಂದ ಇಂದು ಆ ಸಮಾಧಿಗೆ ತುಂಬಿದ್ದ ಮರಳನ್ನು ತೆಗೆದು ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದಷ್ಟೆ ಅಲ್ಲದೆ ಅಂತ್ಯಕ್ರಿಯೆಗೆ ಬೇಕಾಗುವಂತ ವಿಭೂತಿ ಕಳಸ, ಸೇರಿದಂತೆ ಇತರೆ ಪೂಜಾ ಸಾಮಾಗ್ರಿಗಳು ತೆಗೆದಿಟ್ಟಿದ್ದರಂತೆ. ಅಷ್ಟೆ ಅಲ್ಲದೆ ತಮ್ಮ 11 ನೇ ದಿನದ ತಿಥಿ ಕಾರ್ಯಕ್ಕು ಕೂಡ 1 ಲಕ್ಷ ಹಣವನ್ನು ಸಹ ತೆಗೆದಿಟ್ಟಿದ್ದರಂತೆ. ಅಷ್ಟಕ್ಕೂ ಅವರು ಈ ರೀತಿ ಸಮಾಧಿ ನಿರ್ಮಾಣ ಮಾಡಿಕೊಳ್ಳಲು ಕಾರಣ ಇದೆಯಂತೆ. ಪುಟ್ಟ ನಂಜಪ್ಪರಿಗೆ ಮೂವರು ಮಕ್ಕಳಿದ್ದು, ಈಗಾಗಲೇ ಅವರಿಗೆ ಸಮಾನಾವಾಗಿ ತಮ್ಮ ಆಸ್ತಿಯನ್ನ ಅಂಚಿಕೆ ಮಾಡಿದ್ದಾರಂತೆ. ಇದರಿಂದ ತಾವು ಸಾವನಪ್ಪಿದ ಸಂಧರ್ಭದಲ್ಲಿ ಮಕ್ಕಳಿಗೆ ಹಣ ವಿಚಾರವಾಗಿ ಯಾವುದೇ ತೊಂದರೆಯಾಗಬಾರದು ಅನ್ನೋ ಒಂದು ಕಾರಣವಾದ್ರೆ, ಅವರ ಪತ್ನಿಯ ಸಮಾಧಿ ಪಕ್ಕದಲ್ಲೆ ತಮ್ಮ ಸಮಾಧಿ ಇರಬೇಕು ಎಂಬುದು ಅವರ ಆಸಯಾಗಿತ್ತಂತೆ.
ಒಟ್ಟಾರೆ, ಪುಟ್ಟನಂಜಪ್ಪ ತಾವು ಸತ್ತಮೇಲು ತನ್ನ ಮಕ್ಕಳಿಗೆ ತೊಂದರೆಯಾಗಬಾರದು ಅನ್ನೋ ಕಾರಣದಿಂದ ತಮ್ಮ ದುಡಿಮೆಯನ್ನೆ ಕೂಡಿಟ್ಟು ಸ್ವಾಭಿಮಾನನ್ನ ತೋರಿದ್ದಾರೆ..