ನಿಲ್ಲದ ಕೊರೋನಾ ಕಾಟ: 5 ರಿಂದ 7ನೇ ತರಗತಿಗೂ ‘ಸಂವೇದ ಇ-ಕ್ಲಾಸ್‌’

ಅ.12ರಿಂದ ಚಂದನ, ಯೂಟ್ಯೂಬ್‌ ಮೂಲಕ ಶುರು| ಈವ​ರೆಗೆ ಹೈಸ್ಕೂಲ್‌ ಮಕ್ಕ​ಳಿಗೆ ಮಾತ್ರ ಇ-ಕ್ಲಾಸ್‌ ಇತ್ತು| ಇಲಾಖೆಯ ಎಲ್ಲ ಹಂತದ ಶಿಕ್ಷಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯೂಟ್ಯೂಬ್‌ಗಳಲ್ಲಿ ಮಕ್ಕಳು ಪಾಠ ವೀಕ್ಷಿಸುವಂತೆ ಗಮನ ಹರಿಸಿ ಮೇಲ್ವಿಚಾರಣೆ ಮಾಡಬೇಕು|

Minister Suresh Kumar Says  E-Class for 5th to 7th Classgrg

ಬೆಂಗಳೂರು(ಅ.08): ಪ್ರಸ್ತುತ ಪ್ರೌಢ ಶಾಲಾ ಮಕ್ಕಳಿಗೆ ಯೂಟ್ಯೂಬ್‌ ಚಾನೆಲ್‌ ಹಾಗೂ ದೂರದರ್ಶನ ಚಂದನ ವಾಹಿನಿ ಮೂಲಕ ನಡೆಸಲಾಗುತ್ತಿರುವ ‘ಸಂವೇದ’ ಇ-ಕ್ಲಾಸ್‌ ಸರಣಿ ಪಠ್ಯ ಬೋಧನಾ ಕಾರ್ಯಕ್ರಮವನ್ನು ಅ.12ರಿಂದ 5ರಿಂದ 7ನೇ ತರಗತಿ ಮಕ್ಕಳಿಗೂ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಕೊರೋನಾ ಸೋಂಕು ಹರಡುವಿಕೆ ಕಡಿಮೆಯಾಗದ ಕಾರಣ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ (ಡಿಎಸ್‌ಇಆರ್‌ಟಿ) ಮೊದಲ ಹಂತದಲ್ಲಿ 8ರಿಂದ 10ನೇ ತರಗತಿ ಮಕ್ಕಳಿಗೆ ಜ್ಞಾನದೀಪ ಮತ್ತು ಮಕ್ಕಳವಾಣಿ ಯೂಟ್ಯೂಬ್‌ ಚಾಲೆನ್‌ಗಳ ಮೂಲಕ ಇ-ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ. ಇದನ್ನು ದೂರದರ್ಶನ ಚಂದನವಾಹಿನಿಯಲ್ಲೂ ಪ್ರತಿ ದಿನ 4 ಗಂಟೆ ಮರುಪ್ರಸಾರ ಮಾಡಲಾಗುತ್ತಿದೆ. ಅದೇ ರೀತಿ ಎರಡನೇ ಹಂತದಲ್ಲಿ 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಅ.12ರಿಂದ ಯೂಟ್ಯೂಬ್‌ ಚಾಲನೆಗಳ ಮೂಲಕ ವಿಡಿಯೋ ಪಾಠ ಪ್ರಸಾರ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಶಾಲೆ ಆರಂಭ ಬೇಡ ಎಂಬ ಬಗ್ಗೆ ಮರುವಿಮರ್ಶೆ ಅಗತ್ಯ: ಸುರೇಶ್ ಕುಮಾರ್!

ಈ ಮೂರೂ ತರಗತಿ ಮಕ್ಕಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್‌, ತೃತೀಯ ಭಾಷೆ ಹಿಂದಿ, ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ವಿಡಿಯೋ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರ ಬೆನ್ನಲ್ಲೇ ಅದೇ ತರಗತಿಗಳು ದೂರದರ್ಶನದ ಚಂದನ ವಾಹಿನಿಯಲ್ಲಿಯೂ ಮರುಪ್ರಸಾರಗೊಳ್ಳಲಿವೆ. ಕೋವಿಡ್‌ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಮಯದ ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಉಳಿದ ತರಗತಿಗಳಿಗೂ ಇದೇ ರೀತಿ ಇ-ಕ್ಲಾಸ್‌ ತರಗತಿಗಳನ್ನು ಆರಂಭಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲಾಖೆಯ ಎಲ್ಲ ಹಂತದ ಶಿಕ್ಷಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಯೂಟ್ಯೂಬ್‌ಗಳಲ್ಲಿ ಮಕ್ಕಳು ಪಾಠ ವೀಕ್ಷಿಸುವಂತೆ ಗಮನ ಹರಿಸಿ ಮೇಲ್ವಿಚಾರಣೆ ಮಾಡಬೇಕು. ಪೋಷಕರು ಮಕ್ಕಳು ಪಾಠ ವೀಕ್ಷಿಸಲು ಪ್ರೋತ್ಸಾಹಿಸಬೇಕೆಂದು ಸಚಿವರು ಕೋರಿದ್ದಾರೆ.
 

Latest Videos
Follow Us:
Download App:
  • android
  • ios