ಶಾಲೆ ಆರಂಭ ಬೇಡ ಎಂಬ ಬಗ್ಗೆ ಮರುವಿಮರ್ಶೆ ಅಗತ್ಯ: ಸುರೇಶ್ ಕುಮಾರ್!

ಶಾಲಾರಂಭ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಪೋಷಕರ ವಿರೋಧ ಎಂಬುದು ಮಾಧ್ಯಮಗಳ ಪ್ರಮುಖ ಟಿಪ್ಪಣಿ. ನಾನು ಒಂದಂತೂ ಸ್ಪಷ್ಟಪಡಿಸುತ್ತೇನೆ. ಶಾಲೆ ಆರಂಭಕ್ಕೆ ಸರ್ಕಾರ ತರಾತುರಿಯಲ್ಲಿಲ್ಲ. ಅದು ಪ್ರತಿಷ್ಠೆಯ ವಿಷಯವೂ ಅಲ್ಲ. ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾದಲ್ಲಿ ನಾನೂ ಸಹ ಶಾಲಾರಂಭದ ವಿರೋಧಿಯೇ!

Minister Suresh Kumar Speaks On Reopening Of Schools In Karnataka pod

ಎಸ್‌.ಸುರೇಶ್‌ ಕುಮಾರ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

‘ಕೋವಿಡ್‌ ಪಾಸಿಟಿವ್‌’ ಎಂಬ ಹಣೆಪಟ್ಟಿಯು ನನಗೆ ಭಯ, ಆತಂಕವನ್ನೇನೂ ಮೂಡಿಸಲಿಲ್ಲ. ಆದರೆ ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯಬೇಕಾದ ಪರಿಸ್ಥಿತಿ ಒಂದು ಸುದೀರ್ಘವಾದ ಬೇಸರವನ್ನು ತಂದಿದೆ. ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಜನಸಂಪರ್ಕವೆನ್ನುವುದು ಪ್ರಾಣವಾಯುವಿನ ಹಾಗೆ ಕೆಲಸ ಮಾಡುತ್ತದೆ. ಜನರ ನಡುವೆಯೇ ನಮ್ಮ ಜೀವನ ಸಾರ್ಥಕತೆ ಹೊಂದುತ್ತದೆ. ಹಾಗಾಗಿ ನನ್ನಂಥವನಿಗೆ ಇದು ನೆಮ್ಮದಿಯೇನೂ ತಾರದ ಬಂಧನ. ಆದರೆ ಆ ಬಂಧನವೂ ನಮ್ಮ ನಿನ್ನೆಗಳನ್ನು ನೆನಪಿಸಿಕೊಳ್ಳುವ ಮೂಲಕ ನಾಳೆಗಳಿಗೆ ಸಿದ್ಧಗೊಳ್ಳುವುದರಲ್ಲಿದೆ ಎಂದು ಭಾವಿಸಿ ಸಮಾಧಾನಪಟ್ಟುಕೊಂಡಿದ್ದೇನೆ. ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಮರೆಯಲಾದೀತೆ’ ಸೇರಿದಂತೆ ಹಲವು ಪುಸ್ತಕಗಳು ಕ್ವಾರಂಟೈನ್‌ ಸಂದರ್ಭದ ನನ್ನ ನೆಚ್ಚಿನ ಸಂಗಾತಿಗಳಾಗಿವೆ.

ಬೀದರ್‌-ಚಾ.ನಗರ ಭೇಟಿ

ಮಾಚ್‌ರ್‍ ಅಂತ್ಯದಲ್ಲಿಯೇ ಮಾಧ್ಯಮಗಳಿಗೆ ಕೋವಿಡ್‌ ಕುರಿತಾದ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ನೀಡಿದರು. ಅದೇ ಸಂದರ್ಭದಲ್ಲಿ ನಾವು ಶಿಕ್ಷಣ ಕ್ಷೇತ್ರದ ಹಲವು ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತಿದ್ದೆವು. ಪ್ರಾಥಮಿಕ ಮತ್ತು ಪ್ರೌಢ ತರಗತಿಗಳನ್ನು ಸ್ಥಗಿತಗೊಳಿಸಿ ವಾರ್ಷಿಕ ಪರೀಕ್ಷೆಗಳನ್ನು ರದ್ದುಪಡಿಸಬೇಕಾಯಿತು. ಎಸ್‌ಎಸ್‌ಎಲ…ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಬೇಕಾದ ಜವಾಬ್ದಾರಿ ಹೆಗಲೇರಿತ್ತು. ಆಡಳಿತ ಯಂತ್ರವನ್ನು ಕ್ರಿಯಾಶೀಲಗೊಳಿಸಬೇಕಾದ ಹೊಣೆಗಾರಿಕೆ ನನ್ನನ್ನು ಇಡೀ ರಾಜ್ಯ ಸುತ್ತುವ ಹಾಗೆ ಮಾಡಿತ್ತು. ಸುಮಾರು 4-5 ಸಾವಿರ ಕಿಲೋಮೀಟರ್‌ ಓಡಾಡಿದೆ. ಈ ಅವಧಿಯಲ್ಲಿ ಬೀದರ್‌ನಿಂದ ಚಾಮರಾಜನಗರದವರೆಗೂ ಬಹುಪಾಲು ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ.

ಸುದೀರ್ಘವಾದ ಈ ಅವಧಿಯಲ್ಲಿ ಅಸಂಖ್ಯ ಶಾಲೆಗಳು, ಸಾವಿರಾರು ವಿದ್ಯಾರ್ಥಿಗಳನ್ನು ಖುದ್ದಾಗಿ ಭೇಟಿ ಮಾಡಿದ್ದೇನೆ. ನೂರಾರು ಸಭೆಗಳು, ಪೋಷಕರು, ವಿದ್ಯಾರ್ಥಿಗಳೊಂದಿಗೆ ಸಂವಾದ, ಶಿಕ್ಷಕರ ಜೊತೆ ಚರ್ಚೆ, ಪರೀಕ್ಷಾ ಕೇಂದ್ರಗಳು, ಮೌಲ್ಯಮಾಪನ ಕೇಂದ್ರಗಳ ಪರಿವೀಕ್ಷಣೆ, ವಿವಿಧ ಸಮಸ್ಯೆಗಳ ಕುರಿತಂತೆ ಪರಿಹಾರ ಹುಡುಕಲು ಸಮಾಲೋಚನಾ ಸಭೆಗಳು-ಈ ಒಟ್ಟು ಅವಧಿಯ ಒಂದು ದಿನವೂ ಸುಮ್ಮನಿರಲು ನನ್ನಿಂದ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪನವರು ಈ ಅವಧಿಯಲ್ಲಿ ನನಗೆ ನೀಡಿದ ಬೆಂಬಲ, ಪ್ರೋತ್ಸಾಹ ಅವಿಸ್ಮರಣೀಯ.

ಸುರಕ್ಷತಾ ಕ್ರಮ ಕೈ ಹಿಡಿದವು

ಈ ನಡುವೆ ನನ್ನ ಉಸ್ತುವಾರಿ ಜಿಲ್ಲೆಯಾದ ಚಾಮರಾಜನಗರ, ಬೆಂಗಳೂರಿನ ಬೊಮ್ಮನಹಳ್ಳಿ ವಲಯಗಳಲ್ಲಿ ಕೋವಿಡ್‌ ನಿಯಂತ್ರಣಾ ಕಾರ್ಯಗಳು, ಬೆಂಗಳೂರಿನಲ್ಲಿದ್ದ ವಲಸೆ ಕಾರ್ಮಿಕರ ವಸಾಹತುಗಳಿಗೆ ಆಹಾರ-ಸಾರಿಗೆ ವ್ಯವಸ್ಥೆ ಜವಾಬ್ದಾರಿ ಇವೆಲ್ಲವನ್ನೂ ನಿರಂತರವಾಗಿ ನಿರ್ವಹಿಸಿದ್ದೇನೆ. ಆದರೂ ಪ್ರವಾಸ, ಭೇಟಿ ಸಂದರ್ಭದಲ್ಲಿ ಜನರನ್ನು ಸನಿಹ ಬಾರದಂತೆ ನೋಡಿಕೊಳ್ಳುವುದು ಸುಲಭ ಸಾಧ್ಯವಾದ ಸಂಗತಿಯೇನಾಗಿರಲಿಲ್ಲ. ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುವವರು, ಹಾರ-ತುರಾಯಿ ಬೇಡವೆಂದರೂ ಹಾಕಲು ಬರುವವರು, ಮಾಸ್ಕ್‌ ತೆಗೆದೇ ಮಾತನಾಡಲು ಸಿದ್ಧವಾಗುವವರು- ಕೊರೋನಾ ವೈರಾಣು ಯಾರಲ್ಲಿ ಹೊಂಚು ಹಾಕುತ್ತದೆಯೆನ್ನುವುದು ತಿಳಿಯಲು ಸಾಧ್ಯವಾಗದೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು. ಆದರೂ ಇಷ್ಟೆಲ್ಲದರ ನಡುವೆಯೂ ನಾನು ವೈಯಕ್ತಿಕವಾಗಿ ಪಾಲಿಸಿದ ಸ್ವಚ್ಛತೆ, ಸುರಕ್ಷತಾ ಕ್ರಮಗಳು ಇಲ್ಲಿಯವರೆಗೆ ಕೈಹಿಡಿದವು. ಇಂದು ನನ್ನ ಅದೃಷ್ಟವನ್ನು ಸಹ ನಾನು ನೆನೆದಿದ್ದೇನೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳ ಸಂದರ್ಭವೋ, ಮೌಲ್ಯಮಾಪನದ ಸಂದರ್ಭವೋ, ಅಧಿವೇಶನದ ಸಂದರ್ಭವೋ, ಪ್ರಮುಖ ಚರ್ಚೆಗಳ ಸಂದರ್ಭದಲ್ಲೋ ನಾನು ಕೊರೋನಾ ಪೀಡಿತನಾಗಿದ್ದಲ್ಲಿ ನನ್ನಿಂದ ಸಮಾಜಕ್ಕೆ ಎಷ್ಟುತೊಂದರೆಯಾಗಿ ಬಿಡುತ್ತಿತ್ತು!

ಶಾಲಾರಂಭಕ್ಕೆ ತಾರಾತುರಿ ಇಲ್ಲ

ಇಂದು ನಮ್ಮ ಮುಂದಿರುವ ಅತ್ಯಂತ ಪ್ರಮುಖ ಸವಾಲು ಶಾಲೆಗಳನ್ನು ತೆರೆಯುವುದು. ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಿಶ್ವದಾದ್ಯಂತ ಶಾಲೆಗಳು ಪರ್ಯಾಯ ಮಾದರಿಯ ಬೋಧನೆಯನ್ನು ಅನುಸರಿಸುತ್ತಿವೆ. ನಾವೂ ಸಹ ಕಲಿಕೆಯನ್ನು ಮುಂದುವರೆಸಲು ಗಟ್ಟಿಯಾದ ಅಡಿಪಾಯವನ್ನು ಹಾಕಿದ್ದೇವೆ. ವಿದ್ಯಾಗಮ, ನಮ್ಮೆಲ್ಲ ಸಮಸ್ಯೆಗಳ ನಡುವೆಯೂ ಯಶಸ್ವಿಯಾಗಿ ಮುಂದುವರೆದಿದೆ. ಕೇಂದ್ರ ಶಿಕ್ಷಣ ಸಚಿವಾಲಯವೂ ನಮ್ಮ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ನಡುವೆ ಮಾಧ್ಯಮಗಳಲ್ಲಿ ಶಾಲಾರಂಭದ ಕುರಿತಂತೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಶಾಲಾರಂಭಕ್ಕೆ ಪೋಷಕರ ವಿರೋಧ ಎಂಬುದು ಮಾಧ್ಯಮಗಳ ಪ್ರಮುಖ ಟಿಪ್ಪಣಿಯಾಗಿದೆ. ನಾನು ಒಂದನ್ನು ಸ್ಪಷ್ಟಪಡಿಸಬಯಸುತ್ತೇನೆ; ಸರ್ಕಾರವು ಶಾಲೆಗಳನ್ನು ಪ್ರಾರಂಭಿಸಲು ಯಾವುದೇ ತರಾತುರಿಯಲ್ಲಿಲ್ಲ. ಇಂತಹ ಸಂದರ್ಭದಲ್ಲಿ ದಿಢೀರನೆ ಶಾಲಾರಂಭ ಮಾಡಬೇಕೆನ್ನುವುದು ನಮ್ಮ ಪ್ರತಿಷ್ಠೆಯೂ ಅಲ್ಲ. ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾದಲ್ಲಿ ಖಂಡಿತವಾಗಿಯೂ ನಾನೂ ಸಹ ಶಾಲಾರಂಭದ ವಿರೋಧಿಯೇ!

ಮಧ್ಯಮ ವರ್ಗದ ಆದ್ಯತೆ ಏನು?

ಆದರೆ ಶಾಲಾರಂಭವನ್ನು ಮಾಡಲೇಬಾರದೆನ್ನುವುದನ್ನೂ ನಾವು ಮರುವಿಮರ್ಶೆ ಮಾಡಿಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಕೆಳವರ್ಗದ ವಿದ್ಯಾರ್ಥಿಗಳ ಕೌಟುಂಬಿಕ ಸ್ಥಿತಿಗತಿ, ಹೆಚ್ಚುತ್ತಿರುವ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಮಸ್ಯೆಗಳನ್ನೂ ನಾವು ನೆನಪಿಸಿಕೊಳ್ಳಬೇಕು. ಮಧ್ಯಮ ವರ್ಗದ ಆದ್ಯತೆಗಳು ನನಗೆ ಗೊತ್ತಿದೆ. ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸುವ ಶಕ್ತಿಯಿರುವ ಪೋಷಕರ ಕಾಳಜಿ ಸಹ ತಿಳಿದಿದೆ. ಹಾಗಾಗಿ ಶಾಲಾರಂಭವೆನ್ನುವುದು ಸಾರ್ವತ್ರಿಕವಾಗಿ ಅನ್ವಯಿಸಲು ಸಾಧ್ಯವಿಲ್ಲದ ವಿಷಯ. ವಿದ್ಯಾಗಮವನ್ನು ಶಾಲಾವರಣಕ್ಕೆ ತರುವುದು ಒಂದು ಸಲಹಾತ್ಮಕ ಆಲೋಚನೆಯಾದರೆ, ಶಿಕ್ಷಣದ ವಿಕೇಂದ್ರೀಕರಣವೆನ್ನುವುದು ಆಯಾ ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುವ ಪರಿಕಲ್ಪನೆಗಳಾಗಿ ನಮ್ಮನ್ನು ಜಾಗೃತ ಮಾಡಬೇಕಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಿಡುಗಡೆಯಾದ ಹಿನ್ನೆಲೆಯಲ್ಲಿಯೇ ನಮ್ಮ ಆರೋಗ್ಯ ಸಚಿವರು ಶಾಲಾರಂಭ ಕುರಿತಂತೆ ಆರೋಗ್ಯ ಇಲಾಖೆ ಹೇಗೆ ಸಹಕರಿಸಬಹುದು, ಯಾವ ರೀತಿ ಸರ್ಕಾರವು ಮುನ್ನಡೆಯಬಹುದೆಂದು ಚರ್ಚೆ ನಡೆಸಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ.

ಶಿಕ್ಷಣದ ವಿಕೇಂದ್ರೀಕರಣ ಪರಿಕಲ್ಪನೆಯನ್ನು ಅನುಷ್ಠಾನಗಳಿಸುವ ಸಲುವಾಗಿ ನಾವು ವಿದ್ಯಾಗಮವನ್ನು ಜಾರಿಗೆ ತಂದಿದ್ದೇವೆ. ಅಂತೆಯೇ ಸಾರ್ವಜನಿಕ ಶಿಕ್ಷಣವೆನ್ನುವುದು ಬಹುಮುಖಿ ಸವಾಲುಗಳನ್ನು ಹೊಂದಿರುವ ಕ್ಷೇತ್ರ. ಹಾಗಾಗಿಯೇ ನಾವು ಮಕ್ಕಳ ಹಿತ, ಮಕ್ಕಳ ಭವಿಷ್ಯ ಎರಡನ್ನೂ ಕೂಡ ಆಳವಾಗಿ ಅಧ್ಯಯನ ಮಾಡಿ, ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದು ಶಿಕ್ಷಣದ ಸಮತೋಲನಕ್ಕೆ ನಮ್ಮ ಮನಸ್ಸುಗಳು ತುಡಿಯಬೇಕಾದ ತುರ್ತು ಸಂದರ್ಭ.

Latest Videos
Follow Us:
Download App:
  • android
  • ios