ಆನ್‌ಲೈನ್ ಕ್ಲಾಸ್ ನಿಯಮ ಉಲ್ಲಂಘಿಸಿದರೆ ದೂರು ನೀಡಿ: ಸಚಿವ ಸುರೇಶ ಕುಮಾರ್
18004257302ಗೆ ಕರೆ ಮಾಡಿ ಅಥವಾ 9483045ವಾ ವಾಟ್ಸ್‌ಆ್ಯಪ್ ಮಾಡಿ| ಶಾಲೆಗಳು ತಮಗೆ ತೋಚಿದಂತೆ ಆನ್‌ಲೈನ್ ಶಿಕ್ಷಣ ನಡೆಸುವಂತಿಲ್ಲ, ಈ ಸಂಬಂಧ ತಜ್ಞರ ಸಮಿತಿ ನೀಡಿರುವ ವರದಿ ಆಧರಿಸಿ ಇಲಾಖೆ ಹೊರಡಿಸಿರುವ ಸುತ್ತೋಲೆ ಅನುಸಾರ ನಡೆಸುವಂತೆ ಸ್ಪಷ್ಟ ಸೂಚನೆ|
ಬೆಂಗಳೂರು(ನ.07): ಆನ್‌ಲೈನ್ ಶಿಕ್ಷಣದ ನಿಯಮ ಪಾಲಿಸದ ಶಾಲೆಗಳ ವಿರುದ್ಧ ಪೋಷಕರು, ಸಾರ್ವಜನಿಕರು ಇಲಾಖೆಯ ಸಹಾಯವಾಣಿ ಸಂಖ್ಯೆಗೆ (18004257302 ಅಥವಾ 9483045130) ಕರೆ ಅಥವಾ ವಾಟ್ಸ್‌ಆ್ಯಪ್ ಮೂಲಕ ದೂರು ನೀಡಬಹುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಆನ್‌ಲೈನ್ ಶಿಕ್ಷಣಕ್ಕೆ ಶಾಲಾವಧಿ ನಿಗದಿಪಡಿಸುವಂತೆ ಹಾಗೂ ಬರುವ ದೂರುಗಳ ನಿರ್ವಹಣೆಗೆ ಕೂಡಲೇ ಆಯುಕ್ತರ ಕಚೇರಿ ಹಾಗೂ ಜಿಲ್ಲಾ ಮಟ್ಟದ ಡಿಡಿಪಿಐಗಳ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಇಲಾಖಾ ಕಚೇರಿಯಲ್ಲಿ ಆನ್‌ಲೈನ್ ಶಿಕ್ಷಣ ನಿಯಮಗಳ ಸುತ್ತೋಲೆಗಳ ಅನುಷ್ಠಾನ ಹಾಗೂ ಅವುಗಳ ಅನುಪಾಲನೆಯ ಪರಿಶೀಲನೆ ನಡೆಸಿದ ಮಾತನಾಡಿದ ಅವರು, ಶಾಲೆಗಳು ತಮಗೆ ತೋಚಿದಂತೆ ಆನ್‌ಲೈನ್ ಶಿಕ್ಷಣ ನಡೆಸುವಂತಿಲ್ಲ, ಈ ಸಂಬಂಧ ತಜ್ಞರ ಸಮಿತಿ ನೀಡಿರುವ ವರದಿ ಆಧರಿಸಿ ಇಲಾಖೆ ಹೊರಡಿಸಿರುವ ಸುತ್ತೋಲೆ ಅನುಸಾರ ನಡೆಸುವಂತೆ ಸ್ಪಷ್ಟಸೂಚನೆ ನೀಡಲಾಗಿದೆ. ಆದರೂ, ಯಾವುದಾದರೂ ಶಾಲೆಗಳು ನಿಯಮ ಪಾಲಿಸುತ್ತಿಲ್ಲವಾದರೆ ಅಂತಹ ಶಾಲೆಗಳ ವಿರುದ್ಧ ಸಾರ್ವಜನಿಕರು ಶಿಕ್ಷಣವಾಣಿ ಸಂಖ್ಯೆ(18004257302), ಇಲ್ಲವೇ ಸಹಾಯವಾಣಿ ವಾಟ್ಸ್ ಆ್ಯಪ್ ಸಂಖ್ಯೆಗೆ (9483045130) ದೂರು ಸಲ್ಲಿಸಿ ಸಲ್ಲಿಸಿ ಇಲಾಖೆಯ ಗಮನಕ್ಕೆ ತರಬಹುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಸಿದ್ಧತೆ
ಬೆಂಗಳೂರು, ಕಲ್ಬುರ್ಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-‰ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಆಯಾ ನಗರಗಳ ಅಧಿಕಾರಿಗಳ ಸಭೆ ನಡೆಸಿ ಕ್ರಮ ವಹಿಸಲು ಆಯುಕ್ತರಿಗೆ ಸಚಿವರು ಸೂಚಿಸಿದರು.
ಆನ್‌ಲೈನ್ ಶಾಲಾವಧಿ ನಿಗದಿಗೆ ಸೂಚನೆ:
ಕೆಲ ಶಾಲೆಗಳು ಹಗಲು ರಾತ್ರಿ ಎನ್ನದೆ ಯಾವುದೇ ಸಮಯದಲ್ಲೂ ಆನ್‌ಲೈನ್ ಶಿಕ್ಷಣ ನಡೆಸುತ್ತಿರುವ ದೂರುಗಳಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಆನ್‌ಲೈನ್ ಶಿಕ್ಷಣಕ್ಕೂ ಶಾಲಾವಧಿ ನಿಗದಿಪಡಿಸುವಂತೆ ಸಭೆಯಲ್ಲಿ ಸಚಿವರು ಆಯುಕ್ತರಿಗೆ ಸೂಚಿಸಿದ್ದಾರೆ.
ಈಗಾಗಲೇ ಯಾವ್ಯಾವ ತರಗತಿಗೆ ದಿನಕ್ಕೆ ಎಷ್ಟು ಅವಧಿ (ಪೀರಿಯಡ್) ಆನ್‌ಲೈನ್ ಶಿಕ್ಷಣ ನಡೆಸಬೇಕೆಂದು ಸೂಚಿಸಲಾಗಿದೆ. ಜೊತೆಗೆ ಬೆಳಗ್ಗೆ ಎಷ್ಟುಗಂಟೆಯಿಂದ ಸಂಜೆ ಎಷ್ಟುಗಂಟೆಯೊಳಗೆ ಆನ್‌ಲೈನ್ ಶಿಕ್ಷಣ ನಡೆಸಬೇಕೆಂದು ಶಾಲಾ ಅವಧಿಯನ್ನೂ ನಿಗದಿಪಡಿಸಿ ಪ್ರತ್ಯೇಕ ಸುತ್ತೋಲೆ ಹೊರಡಿಸಲು ನಿರ್ದೇಶನ ನೀಡಿದ್ದಾರೆ.
ಇಂದು ಶಿಕ್ಷಣ ನೀತಿ ಕುರಿತು ತಜ್ಞರ ವರದಿ ಸಲ್ಲಿಕೆ
ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅಳವಡಿಸಿಕೊಳ್ಳುವ ಕುರಿತು ನೇಮಿಸಲಾಗಿರುವ ತಜ್ಞರ ಸಮಿತಿ ನ.7ರಂದು ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಇದೇ ವೇಳೆ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ವರದಿ ಸ್ವೀಕರಿಸಲಿದ್ದಾರೆ. ತಜ್ಞರ ವರದಿ ಶಿಫಾರಸುಗಳ ಆಧಾರದಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸರ್ಕಾರ ಕ್ರಮ ವಹಿಸಲಿದೆ. ಇದರೊಂದಿಗೆ ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಮೊದಲನೇ ರಾಜ್ಯವಾಗಲಿದೆ ಎಂದರು.