ಕುವೆಂಪು ಪಠ್ಯವನ್ನು ಚಕ್ರತೀರ್ಥ ಮುಟ್ಟಿಲ್ಲ: ನಾಗೇಶ್
* ಹಿಂದಿನ ಪರಿಷ್ಕರಣೆ ಯಥಾವತ್ ಮುಂದುವರಿಕೆ
* ಪಠ್ಯ ಪರಿಷ್ಕರಣೆ ವಿವಾದ ಕುರಿತು ಸಿಎಂಗೆ ಸಚಿವ ಸವಿಸ್ತಾರ ವಿವರಣೆ
* ತೆಗೆದ ಪಾಠಗಳೆಷ್ಟು- ಸೇರಿಸಿದ್ದೆಷ್ಟು?
ಬೆಂಗಳೂರು(ಜೂ.05): ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದ ಪ್ರತಿಯೊಂದು ಆರೋಪ, ಆಕ್ಷೇಪ, ವಿವಾದಗಳಿಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಾಖಲೆಗಳ ಸಹಿತ ಸವಿವರವಾದ ಸ್ಪಷ್ಟೀಕರಣದ ವರದಿಯನ್ನು ಸಲ್ಲಿಸಿದ್ದಾರೆ. ಸಚಿವರ ವರದಿ ಪರಿಶೀಲಿಸಿದ ಬಳಿಕ ಮುಖ್ಯಮಂತ್ರಿ ಅವರು ಪಠ್ಯ ವಿವಾದಕ್ಕೆ ತೆರೆ ಎಳೆಯಲು ಕೆಲವೊಂದು ನಿರ್ಧಾರಗಳನ್ನು ಕೈಗೊಂಡು ಪ್ರಕಟಿಸಿದ್ದರು. ಸಚಿವರು ಸಲ್ಲಿಸಿದ ವರದಿಯ ವಿವರ ಹೀಗಿದೆ.
ಕುವೆಂಪು ಪಠ್ಯ ಪರಿಷ್ಕರಣೆಯಾಗಿಲ್ಲ:
4ನೇ ತರಗತಿ ಪರಿಸರ ಅಧ್ಯಯನ ಪಠ್ಯದಲ್ಲಿ ‘ಅನೇಕರ ಪ್ರೋತ್ಸಾಹದಿಂದ ಕುವೆಂಪು ಅವರು ಪ್ರಖ್ಯಾತ ಕವಿ ಎನಿಸಿಕೊಂಡರು’ ಎಂಬ ಸಾಲುಗಳಿಂದ ಕುವೆಂಪು ಅವರ ವ್ಯಕ್ತಿತ್ವಕ್ಕೆ ಅವಮಾನವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಚಿವರು ತಮ್ಮ ವರದಿಯಲ್ಲಿ 1ರಿಂದ 5ನೇ ತರಗತಿ ಪರಿಸರ ಅಧ್ಯಯನ ಪಠ್ಯಪುಸ್ತಕಗಳನ್ನು ರೋಹಿತ್ ಚಕ್ರತೀರ್ಥ ಸಮಿತಿಯು ಪರಿಷ್ಕರಣೆಯನ್ನೇ ಮಾಡಿಲ್ಲ. 2014-15ರಲ್ಲಿ ಪ್ರೊ.ಮುಡಂಬಡಿತ್ತಾಯ ಸಮಿತಿಯು ರಚಿಸಿದ ಪಠ್ಯ ಹಾಗೂ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಮಿತಿಯು ಪರಿಷ್ಕರಿಸಿದ ಪಠ್ಯಗಳಲ್ಲಿ ಇದ್ದ ಕುವೆಂಪು ಅವರ ವಿಷಯಗಳನ್ನು ಯಥಾವತ್ತಾಗಿ ಮುಂದುವರೆಸಲಾಗಿದೆ. ಆದರೆ, 2014-15ನೇ ಸಾಲಿನಿಂದಲೂ ಈ ಪಠ್ಯಪುಸ್ತಕ ಜಾರಿಯಲ್ಲಿದ್ದರೂ ಯಾವುದೇ ವಿವಾದ ಆಗಿರಲಿಲ್ಲ ಎಂಬ ಬಗ್ಗೆಯೂ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಪಠ್ಯ ಪರಿಷ್ಕರಣೆ ವಿವಾದ: 2ನೇ ಪತ್ರ ಬರೆದ ದೇವನೂರು ಮಹಾದೇವ!
ಅದೇ ರೀತಿ ಕುವೆಂಪು ಅವರ ಯಾವುದೇ ಬರಹಗಳನ್ನು ಭಾಷಾ ಪಠ್ಯಗಳಿಂದ ಕೈಬಿಟ್ಟಿಲ್ಲ. ಪ್ರೊ.ಮುಡಂಬಡಿತ್ತಾಯ ಸಮಿತಿಯು ರಚಿಸಿದ ಪಠ್ಯದಲ್ಲಿ ಕುವೆಂಪು ಅವರ ಒಟ್ಟು 8 ಪಾಠ/ಪದ್ಯಗಳಿದ್ದವು. ಪ್ರೊ.ಬರಗೂರು ಸಮಿತಿಯು ಇದರಲ್ಲಿ 1 ಪಾಠ ಕಡಿಮೆ ಮಾಡಿ 7 ಬರಹಗಳನ್ನು ಅಳವಡಿಸಿತ್ತು. ಆದರೆ, ನಮ್ಮ ಸಮಿತಿ ಆ ಏಳರ ಜೊತೆಗೆ ಕುವೆಂಪು ಅವರ ಇನ್ನೂ ಮೂರು ಹೊಸ ಪಾಠಗಳನ್ನೂ ಸೇರಿಸಿ 10ಕ್ಕೇರಿಸಿದೆ ಎಂದು ತಿಳಿಸಿದ್ದಾರೆ.
ಟಿಪ್ಪು, ಭಗತ್, ನಾರಾಯಣ ಗುರು ಕೈಬಿಟ್ಟಿಲ್ಲ:
ಭಗತ್ ಸಿಂಗ್, ನಾರಾಯಣಗುರು ಹಾಗೂ ಪೆರಿಯಾರ್ ಪಾಠಗಳನ್ನು ತೆಗೆದುಹಾಕಿಲ್ಲ. 2021-22ನೇ ಸಾಲಿನ ಕನ್ನಡ ಭಾಷೆಯ ಪಠ್ಯಪುಸ್ತಕದಲ್ಲಿ ಇದ್ದ ಜಿ.ರಾಮಕೃಷ್ಣ ಅವರ ಭಗತ್ ಸಿಂಗ್ ಪಾಠವನ್ನು ಮುಂದುವರೆಸಲಾಗಿದೆ. ಜತೆಗೆ ಸಮಾಜ ವಿಜ್ಞಾನ 7ನೇ ತರಗತಿ ಹಾಗೂ 10ನೇ ತರಗತಿ ಪಠ್ಯದಲ್ಲೂ ಭಗತ್‌ಸಿಂಗ್ ಕುರಿತ ಮಾಹಿತಿ ನೀಡಲಾಗಿದೆ. ಕಳೆದ ಸಾಲಿನ 10ನೇ ತರಗತಿ ಸಮಾಜ ವಿಜ್ಞಾನ ಪಾಠಗಳು ಮಕ್ಕಳಿಗೆ ಹೊರೆಯಾಗುತ್ತಿರುವ ಬಗ್ಗೆ ದೂರುಗಳಿದ್ದಿದ್ದರಿಂದ ಪರಿಷ್ಕರಣೆ ವೇಳೆ ಕೆಲವು ಪಠ್ಯದ ಘಟಕಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು. ಕೆಲವನ್ನು ಸಂಕ್ಷಿಪ್ತಗೊಳಿಸಲಾಗಿತ್ತು. ಇನ್ನು ಕೆಲವನ್ನು ಬೇರೆ ವಿಷಯಗಳಿಗೆ ವರ್ಗಾಯಿಸಿದ್ದೇವೆ.
ಅದರಂತೆ ನಾರಾಯಣ ಗುರು ಮತ್ತು ಪೆರಿಯಾರ್ ಕುರಿತಾದ ವಿಷಯಗಳನ್ನು 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪುಸ್ತಕಕ್ಕೆ ವರ್ಗಾಯಿಸಲಾಗಿದೆ. ನಾರಾಯಣ ಗುರು ಕುರಿತ ಪಾಠವನ್ನು 7ನೇ ತರಗತಿ ವಿಜ್ಞಾನ ಪಠ್ಯದಲ್ಲಿ ಮುಂದುವರೆಸಲಾಗಿದೆ. ಟಿಪ್ಪು ಸುಲ್ತಾನ್ ಕುರಿತು ಕಳೆದ ಸಾಲಿನ ಸಮಾಜ ವಿಜ್ಞಾನ 6, 7 ಮತ್ತು 10ನೇ ತರಗತಿ ಪಠ್ಯಗಳಲ್ಲಿದ್ದ ಪಾಠಗಳನ್ನು ಉಳಿಸಿಕೊಳ್ಳಲಾಗಿದೆ.
ಬಸವಣ್ಣನವರನ್ನು ಕುರಿತ ಪಾಠದಲ್ಲಿ ವಿವಾದಾತ್ಮಕ ಅಂಶಗಳಿವೆ ಎಂಬ ಆರೋಪಗಳ ಬಗ್ಗೆ, ಹಿಂದಿನ ಪಠ್ಯಪುಸ್ತದಲ್ಲಿ ಬಸವೇಶ್ವರ ಪಾಠ ಹಾಗೂ ಈಗ ಅಳವಡಿಸಿರುವ ಪಾಠ ಎರಡರಲ್ಲೂ ಅವರು ‘ವೀರಶೈವ ಧರ್ಮ’ ಸ್ಥಾಪಿಸಿದರು ಹಾಗೂ ‘ಲಿಂಗದೀಕ್ಷೆ ಪಡೆದರು’ ಎಂಬ ಉಲ್ಲೇಖಗಳಿವೆ ಎಂದು ತಿಳಿಸಿದ್ದಾರೆ.
ಶೇ.66.98 ಶಾಲೆಗಳಿಗೆ ಪಠ್ಯ
ಇನ್ನು, ಪರಿಷ್ಕೃತ ಪಠ್ಯಗಳು ಮುದ್ರಣಗೊಂಡಿಲ್ಲ ಎಂಬುದು ಸರಿಯಲ್ಲ. ಪಠ್ಯಪುಸ್ತಕಗಳ ಮುದ್ರಣ ಪೂರೈಕೆಗಾಗಿ 2021ರ ಡಿಸೆಂಬರ್ 22ರಂದು ಟೆಂಡರ್ ಕರೆದು 2022ರ ಫೆ.18ರಿಂದ ಮಾಚ್‌ರ್ 5ರಲ್ಲಿ ಕಾರ್ಯಾದೇಶ ನೀಡಲಾಗಿತ್ತು. ಜೂನ್ 3ರವರೆಗಿನ ಅಂಕಿ ಅಂಶಗಳ ಪ್ರಕಾರ ಶೇ.79.70ರಷ್ಟು ಪಠ್ಯಗಳ ಮುದ್ರಣವಾಗಿದ್ದು ಶೇ.66.98ರಷ್ಟುಶಾಲೆಗಳಿಗೆ ಸರಬರಾಜಾಗಿವೆ ಎಂದು ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ವಿಕೃತ ನಾಡಗೀತೆ ಬರೆದಿದ್ದು ಚಕ್ರತೀರ್ಥ ಅಲ್ಲ: ನಾಗೇಶ್
ಕುವೆಂಪು ವಿರಚಿತ ನಾಡಗೀತೆಯ ಪದ್ಯದ ಧಾಟಿಯಲ್ಲಿ ಯಾರೋ ವಿಕೃತವಾಗಿ ಬರೆದಿದ್ದ ಕವನವನ್ನು ರೋಹಿತ್ ಚಕ್ರತೀರ್ಥ 2017ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದರಷ್ಟೆ. ಇದು ಅವರು ಬರೆದಿದ್ದಲ್ಲ. ಈ ಕುರಿತು ಪೊಲೀಸ್ ತನಿಖೆಯೂ ಆಗಿ ‘ಬಿ’ ರಿಪೋರ್ಚ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ನಾಗೇಶ್ ತಿಳಿಸಿದ್ದಾರೆ.
ಸಚಿವ ನಾಗೇಶ್ ನಿವಾಸ ಮೇಲೆ ಕಾಂಗ್ರೆಸ್ ದಾಳಿ: ಬಿಜೆಪಿ ಕಾರ್ಯಕರ್ತರೂ ಸುಮ್ಮನಿರಲ್ಲ: ಕಟೀಲ್
ಸುಕುಮಾರ ಸ್ವಾಮಿ ಕಥೆ ಬದಲು ಹೆಡಗೇವಾರ್ ಪಾಠ:
ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’ ಎಂಬ ಭಾಷಣವನ್ನು ಪಾಠ್ಯದಲ್ಲಿ ಸೇರಿಸಿದ್ದು ಇದು ವ್ಯಕ್ತಿಗಳ ಬದಲು ತತ್ವವನ್ನು ಗೌರವಿಸಿ ಎಂಬ ಸಂದೇಶ ನೀಡುತ್ತದೆ. ಶಿವಕೋಟ್ಯಾಚಾರ್ಯರ ‘ಸುಕುಮಾರ ಸ್ವಾಮಿ ಕಥೆ’ ಬದಲು ಇದನ್ನು ಸೇರಿಸಲಾಗಿದೆ. ಜತೆಗೆ ಚಕ್ರವರ್ತಿ ಸೂಲಿಬೆಲೆ ಅವರ ‘ತಾಯಿ ಭಾರತಿಯ ಅಮರ ಪುತ್ರರು’ ಎಂಬ ಪಾಠವನ್ನು ಸೇರಿಸಲಾಗಿದೆ. ಇದು ಭಗತ್ ಸಿಂಗ್, ಸುಖದೇವ್ ಹಾಗು ರಾಜಗುರು ಅವರ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ಕಥೆಯನ್ನು ಒಳಗೊಂಡಿದ್ದು ಪಾಠದ ವಿಷಯದ ಮೌಲ್ಯದ ಕಾರಣಕ್ಕೆ ಆಯ್ಕೆ ಮಾಡಲಾಗಿದೆ.
ತೆಗೆದ ಪಾಠಗಳೆಷ್ಟು- ಸೇರಿಸಿದ್ದೆಷ್ಟು?:
ರೋಹಿತ್ ಚಕ್ರತೀರ್ಥ ಸಮಿತಿಯು ವಾಸ್ತವಾಗಿ 1ರಿಂದ 10ನೇ ತರಗತಿ ಕನ್ನಡ ಭಾಷೆಯ 15 ಪಠ್ಯಪುಸ್ತಕಗಳನ್ನು, 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನದ 5 ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿದೆ. ಪ್ರಥಮ ಭಾಷಾ ವಿಷಯಗಳಲ್ಲಿ ಒಟ್ಟು 33 ಪಾಠ/ಪದ್ಯಗಳನ್ನು ಪರಿಷ್ಕರಿಸಿ ಉಳಿದ 165 ಪಾಠಗಳನ್ನು ಯಥಾವತ್ತಾಗಿ ಉಳಿಸಿಕೊಂಡಿದೆ. ದ್ವಿತೀಯ ಭಾಷೆಯಲ್ಲಿ 8 ಪಾಠಗಳನ್ನು ಪರಿಷ್ಕರಿಸಿ 162ರನ್ನು ಉಳಿಸಿಕೊಂಡಿದೆ, ತೃತೀಯ ಭಾಷೆಯಲ್ಲಿ 4 ಪದ್ಯಗಳನ್ನು ಮಾತ್ರ ಬದಲಾವಣೆ ಮಾಡಿ ಉಳಿದ 94ಅನ್ನು ಉಳಿಸಿಕೊಂಡಿದೆ. 1ರಿಂದ 10ನೇ ತರಗತಿ ಪರಿಷ್ಕೃತ ಕನ್ನಡ ಭಾಷೆ ಪಠ್ಯಪುಸ್ತಕಗಳಲ್ಲಿರುವ ತಮ್ಮ ಪದ್ಯ/ಗದ್ಯಗಳಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುವುದಾಗಿ ಇದುವರೆಗೆ 7 ಲೇಖಕರು ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.