ಪಠ್ಯ ಪರಿಷ್ಕರಣೆ ವಿವಾದ: 2ನೇ ಪತ್ರ ಬರೆದ ದೇವನೂರು ಮಹಾದೇವ!
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಾಹಿತಿ ದೇವನೂರು ಮಹಾದೇವ ಮತ್ತೊಂದು ಪತ್ರ ಬರೆದಿದ್ದಾರೆ.
ಮೈಸೂರು (ಜೂ.03): ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸಾಹಿತಿ ದೇವನೂರು ಮಹಾದೇವ ಮತ್ತೊಂದು ಪತ್ರ ಬರೆದಿದ್ದಾರೆ. ‘ನನ್ನ ಮನವಿಯನ್ನು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ದೇವನೂರು ಪತ್ರದಲ್ಲೇನಿದೆ?: ಈ ಹಿಂದೆ, ಹತ್ತನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈ ಬಿಡಬೇಕೆಂದು ತಮಗೆ ವಿನಂತಿಸಿ ಮೇ 26 ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ. ಆ ಪತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೂ ಕೊರಿಯರ್ ಮಾಡಿದ್ದೆ. ಆ ಪತ್ರದಲ್ಲಿ ನನ್ನ ಪಠ್ಯಕ್ಕೆ ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ ಎಂದಿದ್ದೀರಿ.
ಪಠ್ಯ ಪರಿಷ್ಕರಣೆ ವಿವಾದ: ತಮ್ಮ ಪಠ್ಯವನ್ನೂ ಸಹ ಕೈಬಿಡಿ ಎಂದ ಸಾಹಿತಿ ದೇವನೂರು ಮಹಾದೇವ
ಕ್ಷಮಿಸಿ, ನಿಮ್ಮ ಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು. ಮತ್ತೂ ಹೇಳಬೇಕೆಂದರೆ, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಚತುರ್ವರ್ಣ ವಿರೋಧಿ ಬಸವಣ್ಣನವರ ಪಾಠದ ಕತ್ತು ಹಿಚುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿಸಿರುವುದು ಹಾಗೂ ಒಂದು ಒಕ್ಕೂಟ ಸರ್ಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು.
ಪೆನ್ನಿಗೆ ನಿವೃತ್ತಿ ಕೊಟ್ಟು ಮೈಕ್ ಮುಂದೆ ನಿಂತಿರುವ ದೇವನೂರು, Pratap Simha ಕಿಡಿ
ಭಿನ್ನಾಭಿಪ್ರಾಯಗಳನ್ನು ಟೂಲ್‌ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನ್ನಿಸುತ್ತದೆ. ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ-ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.