*  1ರಿಂದ 5ನೇ ಕ್ಲಾಸ್‌ ಆರಂಭದ ನಂತರ ಪರಿಸ್ಥಿತಿ ನೋಡಿಕೊಂಡು ನಿರ್ಧಾರ*  ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ*  ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ

ಬೆಂಗಳೂರು(ಅ. 23): ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ಶಾಲೆ(School) ಆರಂಭದ ನಂತರ ಪರಿಸ್ಥಿತಿ ನೋಡಿಕೊಂಡು ಎಲ್‌ಕೆಜಿ(LKG), ಯುಕೆಜಿ(UKG) (ಪೂರ್ವ ಪ್ರಾಥಮಿಕ) ತರಗತಿ(Classes) ಪ್ರಾರಂಭ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಮಕ್ಕಳ ಕಲಿಕಾ ಸಂಚಾರಿ ಬಸ್ಸನ್ನು ಸ್ವಂತ ಚಾಲನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅ.25ರಿಂದ 1ರಿಂದ 5ನೇ ತರಗತಿಗಳ ಆರಂಭದ ನಂತರ ಪರಿಸ್ಥಿತಿ ನೋಡಿಕೊಂಡು ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳ(Children) ಹಾಜರಾತಿಯಲ್ಲಿ(Attendance) ಸುಧಾರಣೆ ಕಾಣುತ್ತಿದೆ. ಬಿಸಿಯೂಟ ಆರಂಭವಾಗಿರುವುದರಿಂದ ಇನ್ನು ಮುಂದೆ ಮಕ್ಕಳ ಹಾಜರಾತಿ ಮತ್ತಷ್ಟು ಹೆಚ್ಚಲಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಚೆನ್ನಾಗಿದೆ. ಶಿಕ್ಷಣ ಇಲಾಖೆಯ(Department of Education) ಜತೆ ಆರ್‌ಡಿಪಿಆರ್‌ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಮಕ್ಕಳನ್ನು ಶಾಲೆಗೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಕೊರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಚಿಣ್ಣರ ಧಾಮ”

ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ, ದೊಡ್ಡ ಮಕ್ಕಳು ಶಾಲೆಗೆ ಬರುತ್ತಿಲ್ಲ. ಅವರನ್ನು ಹುಡುಕಿ ಕರೆತರುವ ಪ್ರಯತ್ನ ಮಾಡುತ್ತೇವೆ. ಶಿಕ್ಷಕರ ಕೊರತೆ ಪ್ರಾಥಮಿಕ ಶಾಲೆಯಲ್ಲಿ ಇಲ್ಲ. 6ರಿಂದ 8ನೇ ತರಗತಿವರೆಗಿನ ಶಿಕ್ಷಕರ(Teachers) ಕೊರತೆ ಇದೆ. ಅದನ್ನು ಭರ್ತಿ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ:

ಬೆಂಗಳೂರು(Bengaluru) ನಗರದ ಕೊಳಚೆ ಪ್ರದೇಶದ(Slum) ಮಕ್ಕಳಿಗೆ ಶಿಕ್ಷಣ(Education) ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಸಂಚಾರಿ ಕಲಿಕಾ ಕೇಂದ್ರ ಬಸ್‌ಗಳಲ್ಲಿ ಸಾಕಷ್ಟು ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯ, ಪುಸ್ತಕ ಆಟದ ಸಾಮಗ್ರಿ, ಡಿಜಿಟಲ್‌ ರೂಪದ ಕಲಿಕಾ ಸಾಮಗ್ರಿಗಳನ್ನು ಬಸ್‌ ಹೊಂದಿದೆ. ನಗರದಲ್ಲಿ ಮೂರು ಸಂಚಾರಿ ಬಸ್‌ ಸೇವೆಗೆ ಸಿಗಲಿದೆ. ಪ್ರತಿದಿನ ನಗರದ 30 ಬೇರೆ ಬೇರೆ ಪ್ರದೇಶದಲ್ಲಿ ಈ ಬಸ್‌ ಸಂಚಾರ ನಡೆಸಲಿದೆ ಎಂದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಶಾಸಕರಾದ ಹರೀಶ್‌ ಪೂಂಜಾ, ಸೇವ್‌ ದಿ ಚಿಲ್ಡ್ರನ್‌ ಅಂಗಸಂಸ್ಥೆಯಾದ ಸಾಮೂಹಿಕ ಶಕ್ತಿಯ ನಿರ್ದೇಶಕ ಲಕ್ಷ್ಮೇ ಪಟ್ಟಾಭಿರಾಮನ್‌ ಇತರರು ಉಪಸ್ಥಿತರಿದ್ದರು.

ನಾನಾ ಕಾರಣಗಳಿಂದ ಶಾಲೆಗಳಿಂದ ಹೊರಗುಳಿದಿರುವ ವಲಸಿಗರು, ಕೊಳಗೇರಿ ಪ್ರದೇಶಗಳ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಜತೆಗೆ ಶಾಲೆಗೆ ಮರಳುವಂತೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆ ‘ಸೇವ್‌ ದಿ ಚಿಲ್ಡ್ರನ್‌’ ಮಕ್ಕಳ ಸ್ನೇಹಿ ಸಂಚಾರಿ ಕಲಿಕಾ ಕೇಂದ್ರಗಳನ್ನು ಒದಗಿಸಿದೆ. ಅವರಿದ್ದಲ್ಲಿಗೆ ತೆರಳಿ ಕಲಿಕಾ ಸಾಮಗ್ರಿ ಒದಗಿಸಿ ಅಕ್ಷರ ಜ್ಞಾನ ನೀಡುವ ಪ್ರಯತ್ನವನ್ನು ಸೇವ್‌ ದಿ ಚಿಲ್ಡ್ರನ್‌ ಮಾಡುತ್ತಿದೆ. ವೈಯಕ್ತಿಕ ಸ್ವಚ್ಛತೆ, ನೈರ್ಮಲ್ಯ ಸೇರಿದಂತೆ ಇನ್ನಿತರ ಆರೋಗ್ಯ ವಿಚಾರಗಳ ಕುರಿತಾಗಿ ಮಕ್ಕಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.