Asianet Suvarna News Asianet Suvarna News

ಸದ್ಯಕ್ಕೆ ಹೈಸ್ಕೂಲ್‌ ಮಾತ್ರ ಆರಂಭಿಸೋದು ಒಳ್ಳೆಯದು: ಸಚಿವ ಆನಂದ ಸಿಂಗ್‌

ದೊಡ್ಡವರೇ ಮಾಸ್ಕ್‌ ಹಾಕುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೀಗಿರುವಾಗ ಪುಟ್ಟಮಕ್ಕಳು ಹೇಗೆ ನಿಭಾಯಿಸುತ್ತಾರೆ ಎಂಬ ಗುಮಾನಿ ಇದ್ದೇ ಇದೆ| ಹೀಗಾಗಿಯೇ ಶಾಲೆಗಳನ್ನು ಆರಂಭಿಸುವ ಮುನ್ನ ಅನೇಕ ಚಿಂತನೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ಸದ್ಯಕ್ಕೆ ಹೈಸ್ಕೂಲ್‌ ಆರಂಭಿಸೋದು ಒಳ್ಳೆಯದು: ಆನಂದ ಸಿಂಗ್‌| 

Minister Anand Singh Talks Over Schoolgrg
Author
Bengaluru, First Published Sep 30, 2020, 2:54 PM IST

ಬಳ್ಳಾರಿ(ಸೆ.30): ಶಾಲೆಗಳನ್ನು ಆರಂಭಿಸುವ ಕುರಿತು ಸೂಕ್ತ ನಿರ್ಧಾರಕ್ಕೆ ಬರಲಾಗುತ್ತಿಲ್ಲ. ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಎಲ್ಲರ ಸಲಹೆಗಳನ್ನು ಪಡೆದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಜಿಲ್ಲಾ ಖನಿಜನಿಧಿ ಬಳಕೆ ಸಂಬಂಧಿಸಿದಂತೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಎಲ್ಲ ಶಾಸಕರು ಸೇರಿದಂತೆ ಶಿಕ್ಷಣ ತಜ್ಞರ ಜತೆ ಸುರೇಶ್‌ ಕುಮಾರ್‌ ಅವರು ಸಮಾಲೋಚನೆ ನಡೆಸುತ್ತಿದ್ದಾರೆ. ಹೈಸ್ಕೂಲ್‌ಗಳನ್ನು ಆರಂಭಿಸಿ, ಪ್ರಾಥಮಿಕ ಹಂತದ ಶಾಲೆಗಳನ್ನು ಸದ್ಯಕ್ಕೆ ತೆರೆಯುವುದು ಬೇಡ ಎಂದು ಸಲಹೆ ನೀಡಿದ್ದಾರೆ. ದೊಡ್ಡವರೇ ಮಾಸ್ಕ್‌ ಹಾಕುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೀಗಿರುವಾಗ ಪುಟ್ಟಮಕ್ಕಳು ಹೇಗೆ ನಿಭಾಯಿಸುತ್ತಾರೆ ಎಂಬ ಗುಮಾನಿ ಇದ್ದೇ ಇದೆ. ಹೀಗಾಗಿಯೇ ಶಾಲೆಗಳನ್ನು ಆರಂಭಿಸುವ ಮುನ್ನ ಅನೇಕ ಚಿಂತನೆ ಮಾಡಬೇಕಾದ ಅಗತ್ಯವಿದೆ. ಹೀಗಾಗಿ ಸದ್ಯಕ್ಕೆ ಹೈಸ್ಕೂಲ್‌ ಆರಂಭಿಸೋದು ಒಳ್ಳೇಯದು ಎಂದರು.

'ಶಾಲೆ ಆರಂಭಿಸುವುದು ಬೇಡ :ಇನ್ನೂ 3 ತಿಂಗಳು ಮುಂದೂಡಲಿ '

ಡಿಎಂಎಫ್‌ನಿಂದ 1214 ಕೋಟಿ ಸಂಗ್ರಹ

ಜಿಲ್ಲಾ ಖನಿಜ ನಿಧಿಯಿಂದ 2016ರಿಂದ ಈ ವರೆಗೆ 1214 ಕೋಟಿ ಸಂಗ್ರಹವಾಗಿದೆ. 2019/20ನೇ ಸಾಲಿನಲ್ಲಿ . 1493 ಕೋಟಿಯ ಕ್ರಿಯಾಯೋಜನೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಶಾಸಕರು, ಸಂಸದರ ಸಲಹೆಗಳನ್ನು ಪಡೆದು ಕ್ರಿಯಾಯೋಜನೆ ರೂಪಿಸಲಾಗಿದೆ. ಈ ಪೈಕಿ ಹೆಚ್ಚು ಗಣಿಗಾರಿಕೆ ಪ್ರದೇಶ ಹೊಂದಿರುವ ಹಾಗೂ ಹೆಚ್ಚು ಬಾಧಿತ ಪ್ರದೇಶ ಎನಿಸಿದ ಸಂಡೂರಿಗೆ ಹೆಚ್ಚಿನ ಪಾಲು ಅಂದರೆ ಶೇ. 32 ರಷ್ಟು(489 ಕೋಟಿ) ನೀಡಲಾಗಿದೆ. ಹೊಸಪೇಟೆಗೆ ಶೇ. 17 (250 ಕೋಟಿ) ನೀಡಲಾಗಿದೆ. ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಗಣಿಗಾರಿಕೆಯಿಂದ ಹೆಚ್ಚು ಆದಾಯವಿಲ್ಲದಿದ್ದರೂ ಇಡೀ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯನ್ನಿಟ್ಟುಕೊಂಡು ಶೇ. ಶೇ. 30ರಷ್ಟು(460 ಕೋಟಿ ) ನೀಡಲಾಗಿದೆ. ಕ್ರಿಯಾಯೋಜನೆ ಕ್ಯಾಬಿನೆಟ್‌ ಅನುಮೋದನೆಯ ಹಂತದಲ್ಲಿವೆ. ಕ್ರಿಯಾಯೋಜನೆ ನಂತರವೂ ಇನ್ನು 900 ಕೋಟಿ ಡಿಎಂಎಫ್‌ ನಿಧಿ ಇರಲಿದೆ. 2024ರೊಳಗೆ ಇನ್ನು 850 ಕೋಟಿ ಬರಬಹುದು ಎಂಬ ಅಂದಾಜಿದೆ ಎಂದು ತಿಳಿಸಿದರು.

ಆ್ಯಂಬುಲೆನ್ಸ್‌, ಆಕ್ಸಿಜನ್‌ ಖರೀದಿಗೆ ಸೂಚನೆ

ಜಿಲ್ಲಾ ಖನಿಜ ನಿಧಿ ಬಳಕೆ ಮಾಡಿಕೊಂಡು ಕೊರೋನಾಗೆ ಸಂಬಂಧಿಸಿದ ಪರಿಕರಗಳನ್ನು ಖರೀದಿ ಮಾಡಲಾಗುವುದು. ಇದಕ್ಕೆ ಎಲ್ಲ ಶಾಸಕರ ಒಪ್ಪಿಗೆಯೂ ಇದೆ. ಕೊರತೆ ಇರುವ ಆ್ಯಂಬುಲೆನ್ಸ್‌, ಆಕ್ಸಿಜನ್‌ ಖರೀದಿ ಮಾಡುವಂತೆ ಹಾಗೂ ಒಂದು ವರ್ಷದ ಅವಧಿಗೆ ವೈದ್ಯರು ಹಾಗೂ ನರ್ಸ್‌ಗಳನ್ನು ನೇಮಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವೆ. ಮಲ್ಟಿಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಇನ್ನು 20 ಕೋಟಿ ಬೇಕಾಗಿದ್ದು ಬಳಕೆ ಮಾಡಿಕೊಂಡು ಆರು ತಿಂಗಳೊಳಗೆ ಸಿದ್ಧಗೊಳಿಸಲಾಗುವುದು. ಎಲ್ಲ ತಾಲೂಕು ಕೇಂದ್ರಗಳಿಗೆ ವೆಂಟಿಲೇಟರ್‌, ಆಕ್ಸಿಜನ್‌, ಆ್ಯಂಬುಲೆನ್ಸ್‌ ಬೇಕು ಎಂಬ ಬೇಡಿಕೆ ಇದ್ದು, ಖನಿಜ ನಿಧಿಯೊಳಗೆ ಆರೋಗ್ಯ ಸಂಬಂಧಿಸಿದಂತೆ ಅಗತ್ಯ ಪರಿಕರಗಳನ್ನು ಖರೀದಿ ಮಾಡಲಾಗುವುದು ಎಂದು ಸಚಿವ ಆನಂದಸಿಂಗ್‌ ತಿಳಿಸಿದರು.

ಜಿಲ್ಲಾ ಕೋವಿಡ್‌ ಆಸ್ಪತ್ರೆಯನ್ನು (ಘೋಷ್‌ ಆಸ್ಪತ್ರೆ) ಅಕ್ಟೋಬರ್‌ ಮೊದಲ ವಾರದಿಂದ ಈ ಮೊದಲಿನಂತೆ ಸಾಮಾನ್ಯ ರೋಗಿಗಳ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಪತ್ರಕರ್ತರಿಗೆ ತಿಳಿಸಿದರು.
 

Follow Us:
Download App:
  • android
  • ios