ಬೆಂಗಳೂರು(ನ.14): ನವೆಂಬರ್‌ 17ರಿಂದ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಆರಂಭವಾಗುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಡಿ.1ರಿಂದ ಎಲ್ಲ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಗ್‌, ಫಾರ್ಮಸಿ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಡಿ (ಆರ್‌ಜಿಯುಎಚ್‌ಎಸ್‌) ಬರುವ ಎಲ್ಲ ವೈದ್ಯಕೀಯ, ನರ್ಸಿಂಗ್‌ ಮತ್ತು ಫಾರ್ಮಸಿ ಕಾಲೇಜುಗಳನ್ನು ಡಿ.1ರಿಂದ ಪುನಾರಂಭಿಸಲು ನಿರ್ಧರಿಸಲಾಗಿದೆ. ಕಾಲೇಜುಗಳ ಆರಂಭ ಹಾಗೂ ಕೋವಿಡ್‌ ನಿಯಂತ್ರಣ ಸಂಬಂಧ ಈಗಾಗಲೇ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳನ್ನು ವಿನಂತಿಸಿಕೊಂಡಿದ್ದಾರೆ.

ಅಂತೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ : ಯಾವಾಗಿಂದ ಶುರು..?

ಇದರೊಂದಿಗೆ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಲೇಜುಗಳ ಆರಂಭಕ್ಕೆ ದಿನಾಂಕ ನಿಗದಿಯಾದಂತಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಕಾಲೇಜುಗಳ ಆರಂಭಕ್ಕೆ ಉನ್ನತ ಶಿಕ್ಷಣ ಇಲಾಖೆಯು ಈಗಾಗಲೇ ನ.17ರ ದಿನಾಂಕ ನಿಗದಿಪಡಿಸಿ ಕಾಲೇಜು ಆರಂಭಿಸುವ ವೇಳೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ.

ವಿವಿ, ಕಾಲೇಜುಗಳಿಂದ ಸಿದ್ಧತೆ

ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಸಂಬಂಧಿಸಿದ ಎಲ್ಲ ವಿಶ್ವವಿದ್ಯಾಲಯಗಳು, ಕಾಲೇಜುಗಳು ನಿಗದಿತ ದಿನಾಂಕದಿಂದ ಪಾಠ ಆರಂಭಿಸಲು ತರಗತಿ ಕೊಠಡಿ, ಹಾಸ್ಟೆಲ್‌ಗಳ ಕೊಠಡಿಗಳ ಸ್ಯಾನಿಟೈಸಿಂಗ್‌ ಮಾಡುವಿಕೆ, ಮೂಲಸೌಕರ್ಯ ಪರಿಶೀಲನೆ ಸೇರಿದಂತೆ ಸರ್ವ ಸಿದ್ಧತೆ ನಡೆಸಿವೆ. ಈ ಮಧ್ಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ಕೂಡ ಡಿಸೆಂಬರ್‌ನಿಂದಲೇ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ವರದಿ ಪರಿಶೀಲಿಸಿ ಸರ್ಕಾರ ದಿನಾಂಕ ಘೋಷಿಸಬೇಕಿದೆ.