ಅಂತೂ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ : ಯಾವಾಗಿಂದ ಶುರು..?
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಶಿಕ್ಷಕರನ್ನೂ ಒಳಗೊಂಡಂತೆ ಎಲ್ಲಾ ಶಿಕ್ಷಕರು ಹಾಗೂ ತತ್ಸಮಾನ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ.
ಬೆಂಗಳೂರು (ನ.13): ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಶಿಕ್ಷಕರನ್ನೂ ಒಳಗೊಂಡಂತೆ ಎಲ್ಲಾ ಶಿಕ್ಷಕರು ಹಾಗೂ ತತ್ಸಮಾನ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಸರ್ಕಾರ ಗುರುವಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿದೆ. ವರ್ಗಾವಣೆಯನ್ನು ಕಡ್ಡಾಯವಾಗಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲು ನಡೆಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.
ವೇಳಾಪಟ್ಟಿಪ್ರಕಾರ ನ.18ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಡಿ.31ಕ್ಕೆ ಅಂತಿಮ ಅರ್ಹತಾ ಆದ್ಯತಾ ಪಟ್ಟಿಪ್ರಕಟವಾಗಲಿದೆ. ಆ ನಂತರ 2021ರ ಜನವರಿ 1ರಿಂದ ವರ್ಗಾವಣೆಗೆ ಕೌನ್ಸೆಲಿಂಗ್ ಆರಂಭವಾಗಲಿದ್ದು ಫೆಬ್ರವರಿ 22ಕ್ಕೆ ಪೂರ್ಣಗೊಳ್ಳಲಿದೆ. ಅಧಿಕಾರಿಗಳು ಖಚಿತಪಡಿಸಿದ ಪ್ರಸ್ತುತ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಮಾತ್ರ ವರ್ಗಾವಣೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು. ಸಾಮಾನ್ಯ/ಪರಸ್ಪರ ಕೋರಿಕೆ ವರ್ಗಾವಣೆಗೆ ಶಿಕ್ಷಕರ ಸೇವಾ ಅಂಕಗಳ ಲೆಕ್ಕಾಚಾರವನ್ನು ಪರಿಗಣಿಸಬೇಕು. ಕೋರಿಕೆ ವರ್ಗಾವಣೆ (ಜಿಲ್ಲೆಯ ಒಳಗೆ) ಶೇ.7ರಷ್ಟು, ಕೋರಿಕೆ ವರ್ಗಾವಣೆ (ವಿಭಾಗದ ಒಳಗೆ) ಶೇ.2ರಷ್ಟುಮತ್ತು ವಿಭಾಗದ ಹೊರಗೆ ವರ್ಗಾವಣೆ ಶೇ.2ರಷ್ಟುಪರಿಮಿತಿ ವಿಧಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಗೆ ಸಿಎಂ ಬಿಎಸ್‌ವೈರಿಂದ ಬಂಪರ್ ದೀಪಾವಳಿ ಕೊಡುಗೆ
ಮಾರ್ಗಸೂಚಿ: ಶಿಕ್ಷಕರ ವರ್ಗಾವಣೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಅವರು ಗುರುವಾರ 16 ಪುಟಗಳ ಸಮಗ್ರ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಆ ಪ್ರಕಾರ, ಶಿಕ್ಷಕರು ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಲು ನ.18ರಿಂದ 30ರವರೆಗೆ ಅವಕಾಶ ನೀಡಲಾಗಿದೆ.
ಸಲ್ಲಿಕೆಯಾದ ಅರ್ಜಿ ಪರಿಶೀಲನೆ ಮತ್ತು ಅನುಮೋದನೆ ನೀಡಲು ಡಿ.1ರಿಂದ 11ರವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಒಳಗೆ, ವಿಭಾಗದ ಒಳಗೆ, ವಿಭಾಗದ ಹೊರಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಶಿಕ್ಷಕರ ಕರಡು ಅರ್ಹ/ಅನರ್ಹ ಆದ್ಯತಾ ಪಟ್ಟಿಯನ್ನು ಡಿ.15ರಂದು ಪ್ರಕಟಿಸುವುದಾಗಿ ತಿಳಿಸಲಾಗಿದೆ. ಈ ಪಟ್ಟಿಗೆ ಡಿ.16ರಿಂದ 23ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಆಕ್ಷೇಪಣೆಗಳ ಪರಿಶೀಲನೆ ಮತ್ತು ಮುಕ್ತ ಆಲಿಕೆಗೆ ಡಿ.24ರಿಂದ 29ರವರೆಗೆ ಅವಕಾಶ ನೀಡಲಾಗಿದೆ. ಎಲ್ಲ ಆಕ್ಷೇಪಗಳನ್ನು ಪರಿಶೀಲಿಸಿ ಡಿ.31ರಂದು ಅಂತಿಮ ಅರ್ಹ ಆದ್ಯತಾ ಪಟ್ಟಿಪ್ರಕಟಿಸುವುದಾಗಿ ಇಲಾಖೆ ವೇಳಾಪಟ್ಟಿಯಲ್ಲಿ ಪ್ರಕಟಿಸಿದೆ.
ಜ.1ರಿಂದ ಕೌನ್ಸೆಲಿಂಗ್: ಅಂತಿಮ ಆದ್ಯತಾ ಪಟ್ಟಿಪ್ರಕಟಗೊಂಡ ಬಳಿಕ ಜಿಲ್ಲೆಯೊಳಗಿನ, ವಿಭಾಗೀಯ, ಅಂತರ್ ವಿಭಾಗೀಯ ಹಂತದ ಕೋರಿಕೆ ವರ್ಗಾವಣೆ, ಪರಸ್ಪರ ವರ್ಗಾವಣೆಗೆ ಜ.1ರಂದು ಅಂತಿಮ ಆದ್ಯತಾ ಪಟ್ಟಿಪ್ರಕಟಿಸಿ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಸೂಚಿಸಲಾಗಿದೆ. ವೇಳಾಪಟ್ಟಿಪ್ರಕಾರ ಎಲ್ಲಾ ವರ್ಗದ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಫೆ.22ರ ವರೆಗೆ ನಡೆಯಲಿದೆ.
ಪ್ರತೀ ಬಾರಿ ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ವರ್ಗಾವಣೆ ನಡೆಸಬೇಕು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗ ವರ್ಗಾವಣೆ ಪ್ರಕ್ರಿಯೆಗೆ ತೀರ್ಮಾನಿಸಲಾಗಿದೆ. ಈ ಬಾರಿ ವಲಯ ವರ್ಗಾವಣೆ ಹಾಗೂ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆಯನ್ನು ಕೈಬಿಡಲಾಗಿದೆ. ಶಿಕ್ಷಕರ ವರ್ಗಾವಣೆಗೆ ಅರ್ಹತೆಗಳು, ಷರತ್ತುಗಳು, ಸಕ್ಷಮ ಪ್ರಾಧಿಕಾರ, ವೇಳಾಪಟ್ಟಿಸೇರಿದಂತೆ ಸಮಗ್ರ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.
ಕಡ್ಡಾಯ ವರ್ಗಾವಣೆಗೆ ಪ್ರತ್ಯೇಕ ವೇಳಾಪಟ್ಟಿ
2019-20ನೇ ಸಾಲಿನಲ್ಲಿ ಕಡ್ಡಾಯ/ಹೆಚ್ಚುವರಿಯಾಗಿ ತಾಲ್ಲೂಕಿನಿಂದ, ಜಿಲ್ಲೆಯಿಂದ ಹೊರಗಡೆ ವರ್ಗಾವಣೆಯಾಗಿರುವ ಶಾಲಾ ಶಿಕ್ಷಕರುಗಳ ಆನ್‌ಲೈನ್ ಮೂಲಕ ವರ್ಗಾವಣೆಗೆ ಪ್ರತ್ಯೇಕ ವೇಳಾಪಟ್ಟಿಪ್ರಕಟಿಸಲಾಗಿದೆ.
ಕಳೆದ ಬಾರಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಯಿಂದ ಆದ ಅನ್ಯಾಯ ಸರಿಪಡಿಸಲು ಅಂತಹ ಶಿಕ್ಷಕರಿಗೆ ವಿಶೇಷ ಅವಕಾಶ ನೀಡಲಾಗಿದ್ದು, ನ.17ರಂದು ಕಳೆದ ವರ್ಷ ಈ ಎರಡು ಪ್ರಕರಣಗಳಲ್ಲಿ ವರ್ಗಾವಣೆಗೊಂಡ ಶಿಕ್ಷಕರ ಪಟ್ಟಿಪ್ರಕಟಿಸಲಾಗುವುದು. ನ.20ರಿಂದ 23ರವರೆಗೆ ಈ ಪಟ್ಟಿಗೆ ಆಕ್ಷೇಪ ಸಲ್ಲಿಸಬಹುದು. ಪಟ್ಟಿಯಲ್ಲಿನ ಶಿಕ್ಷಕರು ನ.24ರಿಂದ 30ವರೆಗೆ ವರ್ಗಾವಣೆಗೆ ಆಸಕ್ತಿ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಡಿ.5ರ ವೇಳೆಗೆ ಅರ್ಜಿಗಳನ್ನು ಪರಿಶೀಲನೆ ಅಂತಿಮಗೊಳಿಸಿ ಡಿ.14ರಂದು ಕೌನ್ಸೆಲಿಂಗ್‌ಗೆ ಅರ್ಹತಾ ಪಟ್ಟಿಪ್ರಕಟಿಸಬೇಕು. ಡಿ.16ರಿಂದ 19ರವರೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ನಡೆಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಸಹಾಯವಾಣಿ ಸ್ಥಾಪಿಸಲು ಸೂಚನೆ
ಪ್ರಸಕ್ತ ಸಾಲಿನ ವರ್ಗಾವಣೆಗೆ ಶಿಕ್ಷಕರಿಗೆ ಮಾಹಿತಿ ಒದಗಿಸಲು ಸಂಬಂಧಿಸಿದ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ವರ್ಗಾವಣೆ ಕೋಶದಲ್ಲಿ ಸಹಾಯವಾಣಿ ಸ್ಥಾಪಿಸಬೇಕು. ಕೋಶದ ನೋಡೆಲ್ ಅಧಿಕಾರಿ ಶಿಕ್ಷಕರ ವರ್ಗಾವಣೆ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.