ಶಾಲಾ ಮಕ್ಕಳಿಂದ 100 ರು. ಸಂಗ್ರಹ, ಶಿಕ್ಷಣ ಇಲಾಖೆ ಸುತ್ತೋಲೆಗೆ ಹಲವರ ವಿರೋಧ
ಸರ್ಕಾರಿ ಶಾಲೆಗಳ ನಿರ್ವಹಣೆ ವೆಚ್ಚವನ್ನು ಪೋಷಕರಿಂದ ಸಂಗ್ರಹಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ, ದೇಣಿಗೆ ರೂಪದಲ್ಲಿ ಮಾಸಿಕ ತಲಾ 100 ರೂ ಸಂಗ್ರಹಕ್ಕೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು (ಅ.22): ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರಿಂದ ದಾನ, ದೇಣಿಗೆ ರೂಪದಲ್ಲಿ ಮಾಸಿಕ ತಲಾ .100 ಸಂಗ್ರಹಕ್ಕೆ ಅವಕಾಶ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸಂಸ್ಥಾಪಕ ಮಹಾಪೋಷಕ ಪ್ರೊ.ವಿ.ಪಿ.ನಿರಂಜನಾರಾಧ್ಯ, ಉಚಿತ ಮತ್ತು ಕಡ್ಡಾಯವಾದ ಗುಣಾತ್ಮಕ ಶಿಕ್ಷಣ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಿಕ್ಷಣ ಸಚಿವ ನಾಗೇಶ್ ಅವರು ಸಂವಿಧಾನಾತ್ಮಕ ಹಾಗೂ ನೆಲದ ಕಾನೂನುಗಳ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಸಂಪೂರ್ಣ ವಿಫಲರಾಗಿದ್ದು, ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ಅವರು ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿದ್ದು, ಪೋಷಕರು ಸ್ವಇಚ್ಛೆಯಿಂದ ದೇಣಿಗೆ ನೀಡದಿದ್ದರೆ ಶಾಲೆಯ ಅಭಿವೃದ್ಧಿ ಕೆಲಸಗಳು ಆಗುವುದಿಲ್ಲವೇ. ಎಸ್‌ಡಿಎಂಸಿ ಸದಸ್ಯರು ದೇಣಿಗೆ ಸಂಗ್ರಹ ಮಾಡುವುದು ಕಡ್ಡಾಯವೇ. ದೇಣಿಗೆ ನೀಡುವವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದೇ. ಪ್ರತಿ ತಿಂಗಳೂ 100 ರು. ಕೊಡುತ್ತಾ ಬರುವುದು ಶುಲ್ಕ ರೂಪ ಪಡೆದುಕೊಂಡು ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಆಶಯಕ್ಕೆ ಧಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಎಐಡಿಎಸ್‌ಒ ರಾಜ್ಯ ಸಮಿತಿಯೂ ದೇಣಿಗೆ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿದೆ.
ಆಮ್ ಆದ್ಮಿ ಪಕ್ಷ ಆಕ್ರೋಶ: ಮುಖ್ಯಮಂತ್ರಿ ಹಾಗೂ ಸಚಿವರ ಶೇಕಡ 40 ಕಮಿಷನ್ ದಂಧೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿರುವುದರಿಂದ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಪೋಷಕರಿಂದ ತಿಂಗಳಿಗೆ .100 ಪಡೆಯುವ ಹಂತಕ್ಕೆ ತಲುಪಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಶೂಗಳನ್ನು ಖರೀದಿಸುವಂತೆ ರಾಜ್ಯ ಸರ್ಕಾರವು ಶಾಲೆಗಳಿಗೆ ಈ ಹಿಂದೆ ಆದೇಶ ಹೊರಡಿಸಿತ್ತು. ಈಗ ಡೆಸ್‌್ಕ, ವಿದ್ಯುತ್ ಬಿಲ್ ಇನ್ನಿತರ ಖರ್ಚುಗಳಿಗಾಗಿ ವಿದ್ಯಾರ್ಥಿಗಳ ಪೋಷಕರಿಂದ ಪ್ರತಿ ತಿಂಗಳು .100 ಶುಲ್ಕ ಪಡೆಯುವಂತೆ ರಾಜ್ಯ ಶಿಕ್ಷಣ ಇಲಾಖೆಯು ಶಾಲೆಗಳ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿದೆ. ಬಿಜೆಪಿ ಆಡಳಿತದಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಸರ್ಕಾರ ದಿವಾಳಿಯಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.
ಪ್ರತಿ ತಿಂಗಳು .100 ಸಂಗ್ರಹ ಆದೇಶ ಜನ ವಿರೋಧಿ: ವೆಂಕಟೇಶ್
ಸರ್ಕಾರಿ ಶಾಲೆಗಳ ನಿರ್ವಹಣೆ ವೆಚ್ಚವನ್ನು ಪೋಷಕರಿಂದ ಸಂಗ್ರಹಿಸುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು ಸರ್ಕಾರದ ಆರ್ಥಿಕ ಅಧೋಗತಿ ಹಾಗೂ ಜನವಿರೋಧಿ ನೀತಿಗೆ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಟೀಕಿಸಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳಿಂದ ತಿಂಗಳಿಗೆ 100 ರು ಸಂಗ್ರಹ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಜನರಿಗೆ ಅನುಕೂಲವಲ್ಲದ ಯೋಜನೆಗಳಿಗೆ ತಮ್ಮ ವೈಯಕ್ತಿಕ ಪ್ರಚಾರಗಳಿಗಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಆದರೆ ಜನರಿಗೆ ಅಗತ್ಯವಿರುವ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಒತ್ತು ನೀಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಶಾಲಾ ಮಕ್ಕಳಿಂದ 100 ರು. ಸಂಗ್ರಹಕ್ಕೆ ಸಿದ್ದರಾಮಯ್ಯ ಗರಂ
ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದ ಪ್ರತಿ ತಿಂಗಳು .100 ಸಂಗ್ರಹಿಸುವಂತೆ ಹೇಳಿದೆ. ಇವರಿಗೆ ಸರ್ಕಾರಿ ಶಾಲೆಗಳ ನಿರ್ವಹಣೆಗೆ ಅನುದಾನ ಕೊರತೆ ಉಂಟಾಗಿದೆ ಎಂದರೆ ಆರ್ಥಿಕ ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ತಿಳಿಯುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಸಕಾಲದಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಶೂ ವಿತರಿಸಲು ಸಾಧ್ಯವಾಗದೆ ಯೋಜನೆಯನ್ನು ಹಳ್ಳ ಹಿಡಿಸಿದ್ದಾರೆ. ಇದೀಗ ಬಡ ವಿದ್ಯಾರ್ಥಿಗಳ ಪೋಷಕರಿಂದ ಹಣ ಪಡೆಯಲು ಹೊರಡಿಸಿರುವ ಆದೇಶದಿಂದ ಈ ಸರ್ಕಾರಕ್ಕೆ ಕರುಣೆಯೇ ಇಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.