ಏನಿದು ವಿಧಿಯಾಟ... 24 ವರ್ಷದ ಹಿಂದೆ ಪರೀಕ್ಷೆ ಬರೆದವನಿಗೆ 57ಕ್ಕೆ ಸಿಕ್ತು ಸರ್ಕಾರಿ ಕೆಲಸ

ಭಾರತದಲ್ಲಿ ಕಾನೂನು ನ್ಯಾಯಾಂಗ ಪ್ರಕ್ರಿಯೆ ಎಷ್ಟು ನಿಧಾನ. ಇದರಿಂದ ಕೆಲವರ ಬದುಕಿನಲ್ಲಿ ಸರಿಪಡಿಸಲಾಗದಷ್ಟು ಅನಾಹುತಗಳಾಗಿವೆ. ಹಾಗೆಯೇ ನಿಧಾನ ನ್ಯಾಯ ತೀರ್ಮಾನದ ಸಂತ್ರಸ್ತರಾದ ವ್ಯಕ್ತಿಯೊಬ್ಬರ ಕತೆವ್ಯಥೆ ಇದು. 

man get job after 24 year of his examination held in srikakulam akb

ಶ್ರೀಕಾಕುಲಂ: ಭಾರತದಲ್ಲಿ ಕಾನೂನು ನ್ಯಾಯಾಂಗ ಪ್ರಕ್ರಿಯೆ ಎಷ್ಟು ನಿಧಾನ. ಇದರಿಂದ ಕೆಲವರ ಬದುಕಿನಲ್ಲಿ ಸರಿಪಡಿಸಲಾಗದಷ್ಟು ಅನಾಹುತಗಳಾಗಿವೆ. ಕೊಲೆಗಾರ ಎಂದು ಜೈಲು ಸೇರಿ ಆತ ತೀರಿಕೊಂಡ ಬಳಿಕ ಆತ ನಿರಪರಾಧಿ ಎಂದು ತೀರ್ಪು ಬಂದ ಪ್ರಕರಣ, ಆಸ್ತಿ ವಿವಾದಗಳು ಹೀಗೆ ಒಂದೊಂದು ಪ್ರಕರಣಗಳು ನ್ಯಾಯ ತೀರ್ಮಾನಕ್ಕೆ ಹಲವು ದಶಕಗಳೇ ಕಳೆದಂತಹ ಘಟನೆಗಳು ಹೊಸತೇನೋ ಅಲ್ಲ. ಹಾಗೆಯೇ ನಿಧಾನ ನ್ಯಾಯ ತೀರ್ಮಾನದ ಸಂತ್ರಸ್ತರಾದ ವ್ಯಕ್ತಿಯೊಬ್ಬರ ಕತೆವ್ಯಥೆ ಇದು. 

ಆಂಧ್ರಪ್ರದೇಶ (Andhrapradesh) ಶ್ರೀಕಾಕುಲಂ (srikakulam) ಜಿಲ್ಲೆಯ ಪಥಪಟ್ಟಣದ ಪೆದ್ದಾ ಸಿದ್ದಿಯ ಅಲಕಾ ಕೇದಾರೇಶ್ವರ ರಾವ್ (Kedareswara Rao) ಅವರ ದುರಂತ ಕತೆ ಇದು. ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಲಕಾ ಕೇದಾರೇಶ್ವರ ರಾವ್ ಅವರು 24 ವರ್ಷಗಳ ಹಿಂದೆ 1998ರಲ್ಲಿ 33ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆದಿದ್ದರು. ಸರ್ಕಾರಿ ಶಿಕ್ಷಕರನ್ನು ಆಯ್ಕೆ ಮಾಡಲು ಬರೆಯುವ ಪರೀಕ್ಷೆ DSC ಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರೂ ಕಾನೂನು ಸಮಸ್ಯೆಗಳಿಂದಾಗಿ ಅಂತಿಮ ಆಯ್ಕೆಯು ವಿಳಂಬವಾಯಿತು. ವಿಳಂಬ ಎಂದರೆ ಇದು ಒಂದೆರಡು ವರ್ಷಗಳ ವಿಳಂಬವಲ್ಲ, ಬರೋಬರಿ 24 ವರ್ಷಗಳ ವಿಳಂಬವಿದು. ಪ್ರಸ್ತುತ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಲಕಾ ಕೇದಾರೇಶ್ವರ ರಾವ್ ಅವರು ಆಯ್ಕೆಯಾಗಿದ್ದಾರೆ ಎಂದು ತೀರ್ಪು ಬಂದಿದೆ. ಈ ತೀರ್ಪು ಬಂದ ಈ ಸಂದರ್ಭದಲ್ಲಿ ಕೇದಾರೇಶ್ವರ ರಾವ್ ವಯಸ್ಸು 57 ವರ್ಷ. 

ಸರ್ಕಾರಿ ನೌಕರಿ ಕೊಡಿಸೋದಾಗಿ ಉದ್ಯಮಿಗೆ 1 ಕೋಟಿ ಟೋಪಿ ಹಾಕಿದ ಬ್ರದರ್ಸ್‌..!

ಪ್ರತಿಭೆ ಇದ್ದರೂ ಉದ್ಯೋಗಕ್ಕೆ ಆಯ್ಕೆಯ ವಿಳಂಬ ಕೇದಾರೇಶ್ವರ್ ಬದುಕಿನಲ್ಲಿ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ಉದ್ಯೋಗ ವಿಲ್ಲದ ಕಾರಣಕ್ಕೆ ಇವರು ಮದುವೆ ಸಾಂಸಾರಿಕ ಜೀವನದಿಂದ ದೂರವೇ ಉಳಿದರು. ಹೈದಾರಾಬಾದ್‌ಗೆ ಉದ್ಯೋಗ ಅರಸಿ ತೆರಳುವ ಮೊದಲು ಅವರು ಹಳ್ಳಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ನಿರುದ್ಯೋಗ ಮತ್ತು  ತಾಯಿಯ ಮರಣವು ಅವರನ್ನು ಖಿನ್ನತೆಗೆ ತಳ್ಳಿತು. ಕುಟುಂಬವನ್ನು ನೋಡಿಕೊಳ್ಳಲು ಕೆಲಸವಿಲ್ಲದೆ ಒಂಟಿಯಾಗಿ ಉಳಿಯಲು ನಿರ್ಧರಿಸಿದರು.

ಹೈದರಾಬಾದ್‌ಗೆ ತೆರಳಿದ ರಾವ್ ಅವರು ಎಂಟು ವರ್ಷಗಳ ಹಿಂದೆ ಪೆದ್ದ ಸಿದ್ದಿಗೆ (Pedda Sidhi) ಮರಳಿದರು. ಈ ವೇಳೆ ಅವರ ಸಂಬಂಧಿಕರು ಅವರನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು. ಅವರ ದೈಹಿಕ ಸ್ವರೂಪವು ಬದಲಾಯಿತು. ಮತ್ತು ಅವರು ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಲು ಪ್ರಾರಂಭಿಸಿದರು. ಈ ವೇಳೆ ಜನರು ನೀಡಿದ ಆಹಾರವನ್ನು ಸೇವಿಸಿ ಜೀವನ ಮಾಡುತ್ತಿದ್ದರು. ಬರುಬರುತ್ತಾ ಜನ ಈತನನ್ನು ಮಾನಸಿಕ ಅಸ್ವಸ್ಥನೆಂದೇ ಭಾವಿಸಿದ್ದರು. 

ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಪತ್ನಿಯ ಕೈ ಕತ್ತರಿಸಿದ ಗಂಡ, ಇದ್ಯಾವ ಬಗೆಯ ಅಸೂಯೆ?

DSC 1998 ರ ಕಡತವನ್ನು ವಾಪಸ್‌ ತೆರೆಯುವುದು ಎಂದು ಅವರು ಎಂದಿಗೂ ನಿರೀಕ್ಷಿಸಿರಲಿಲ್ಲ. ಈ ಬಗ್ಗೆ ವಿಚಾರ ಎಲ್ಲೆಡೆ ಹಬ್ಬುತ್ತಿದ್ದಂತೆ ರಾವ್ ಅವರು ಉತ್ಸುಕರಾಗಿ ಅಪನಂಬಿಕೆಯಿಂದ ಮಾತನಾಡಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಲ್ಲದೇ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ  ಆತನ ಅಸ್ತಿತ್ವವನ್ನೇ ನಿರ್ಲಕ್ಷಿಸುತ್ತಿದ್ದವರು ಹೊಸ ಬಟ್ಟೆ, ಊಟ ಹಾಕಲು ಶುರು ಮಾಡಿದರು ಎಂದು ತಿಳಿದು ಬಂದಿದೆ. 

ಅಲ್ಲದೇ ತನ್ನ ಗ್ರಾಮ ಪೆದ್ದ ಸಿದ್ಧಿಯಲ್ಲಿ ರಾವ್ ಶೀಘ್ರದಲ್ಲೇ ಸ್ಟಾರ್ ಆದರು. ಗ್ರಾಮಸ್ಥರು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಬಗ್ಗೆ  ಮಾಧ್ಯಮಗಳೊಂದಿಗೆ ಮಾತನಾಡಿದ ರಾವ್, ಅವರು 1981 ರಲ್ಲಿ ಪೆದ್ದ ಸಿದ್ದಿ ಶಾಲೆಯಿಂದ (SSC)10ನೇ ತರಗತಿ ಪೂರ್ಣಗೊಳಿಸಿದ್ದರು. ನಂತರ 1992 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ B.Ed ಪದವಿ ಪಡೆದ ಅವರು, 1994 ಮತ್ತು 1996 ರಲ್ಲಿ DSCಗೆ ಹಾಜರಾಗಿದ್ದರು. ದುರದೃಷ್ಟವಶಾತ್, ನನಗೆ ಎರಡೂ ಬಾರಿ ಕೆಲಸ ಸಿಗಲಿಲ್ಲ. 1998ರಲ್ಲಿ ಮತ್ತೊಮ್ಮೆ ಡಿಎಸ್‌ಸಿಗೆ ಹಾಜರಾಗಿ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದೆ. ಆದರೆ, ವಿವಿಧ ಕಾನೂನು ಸಮಸ್ಯೆಗಳಿಂದ ಅಂತಿಮ ಆಯ್ಕೆ ವಿಳಂಬವಾಯಿತು ಎಂದು ರಾವ್ ನೆನಪಿಸಿಕೊಂಡರು.

ಭಾನುವಾರ, DSC 1998 ಕ್ಕೆ ನನ್ನೊಂದಿಗೆ ಹಾಜರಾದ ಇತರ ಅಭ್ಯರ್ಥಿಗಳು ಮತ್ತು ನೆರೆಹೊರೆಯವರು ನಾನು ಶಿಕ್ಷಕ ಕೆಲಸಕ್ಕೆ ಆಯ್ಕೆಯಾಗಿದ್ದೇನೆ ಎಂದು ತಿಳಿಸಿದರು. ನಾನು 57 ನೇ ವಯಸ್ಸಿನಲ್ಲಿ ಕೆಲಸ ಪಡೆಯಲು ಸಂತೋಷಪಡುತ್ತೇನೆ ಎಂದು ಅವರು ಯಾವುದೇ ದೂರಿನ ಸುಳಿವು ಇಲ್ಲದೆ ಸಂತೋಷದಿಂದ ಹೇಳಿದರು. ಒಟ್ಟಿನಲ್ಲಿ ಕೆಲವರ ಬದುಕಿನಲ್ಲಿ ವಿಧಿ ಎಂಥಾ ಆಟವಾಡುವುದು ಎಂದು ಹೇಳಲಾಗದು. ಎಲ್ಲಾ ಪ್ರತಿಭೆಗಳಿದ್ದರೂ ಕೆಲವರಿಗೆ ಅದನ್ನು ಪ್ರಸ್ತುತಪಡಿಸುವ ಯೋಗವಿರುವುದಿಲ್ಲ. ಅಂತಹ ಕತೆವ್ಯಥೆಗೆ ರಾವ್ ಬದುಕು ಸಾಕ್ಷಿಯಾಗಿದೆ.

Latest Videos
Follow Us:
Download App:
  • android
  • ios