Asianet Suvarna News Asianet Suvarna News

ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಪತ್ನಿಯ ಕೈ ಕತ್ತರಿಸಿದ ಗಂಡ, ಇದ್ಯಾವ ಬಗೆಯ ಅಸೂಯೆ?

* ಹೆಂಡತಿಗೆ ಕೆಲಸ ಸಿಕ್ಕಿದ್ದಕ್ಕೆ ಗಂಡನಿಗೆ ಅಸೂಯೆ

* ಅಸೂಯೆಯಿಂದ ಹೆಂಡತಿ ಕೈಯ್ಯನ್ನೇ ಕತ್ತರಿಸಿದ ಮೂರ್ಖ

* ಕೈಯಿಲ್ಲದೇ ಮಹಿಳೆಯ ಕನಸುಗಳೆಲ್ಲಾ ಭಗ್ನ

West Bengal Man Chops off Wife's Hand After She gets govt job as nurse pod
Author
Bangalore, First Published Jun 7, 2022, 9:35 AM IST

ಕೋಲ್ಕತ್ತಾ(ಮೇ.07): ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಸಿಕ್ಕಿದೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯ ಕೈಯನ್ನು ಕತ್ತರಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. 24 ವರ್ಷದ ಮಹಿಳೆ ರೇಣು ಖಾತೂನ್ ಅವರನ್ನು ದುರ್ಗಾಪುರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದ್ದು, ಆರೋಪಿ ಶೇರ್ ಮೊಹಮ್ಮದ್ ಶೇಖ್ (26) ತಲೆಮರೆಸಿಕೊಂಡಿದ್ದಾನೆ. ಪೂರ್ವ ಬುರ್ದ್ವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಮ್ನಾಶಿಶ್ ಸೇನ್, "ಪ್ರಕರಣ ದಾಖಲಿಸಲಾಗಿದೆ. ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ, ತನ್ನ ಹೆಂಡತಿಗೆ ಕೆಲಸ ಸಿಕ್ಕಿದ ನಂತರ ಅಸೂಯೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕ ಗ್ರಾಮದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರೆ, ಮಹಿಳೆ ಮೊದಲು ಖಾಸಗಿ ನರ್ಸಿಂಗ್ ಹೋಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಮಹಿಳೆ ನರ್ಸಿಂಗ್ ಕೋರ್ಸ್ ಪೂರೈಸಿದ್ದರು. ಈ ನಡುವೆ ದಂಪತಿ ಆಗಾಗ್ಗೆ ಜಗಳವಾಗುತ್ತಿತ್ತು. ಸಂತ್ರಸ್ತೆಯ ಸಹೋದರ ರಿಪನ್ ಶೇಖ್, "ನನ್ನ ಸಹೋದರಿಯನ್ನು ದೈಹಿಕವಾಗಿ ವಿಕಲಾಂಗರನ್ನಾಗಿ ಮಾಡಲು ಅವನು ನನ್ನ ಸಹೋದರಿಯ ಮಣಿಕಟ್ಟನ್ನು ಸೀಳಿದನು, ಆದ್ದರಿಂದ ಅವಳು ಎಂದಿಗೂ ನರ್ಸ್ ಕೆಲಸ ಪಡೆಯಲು ಸಾಧ್ಯವಿಲ್ಲ" ಎಂದಿದ್ದಾರೆ. ಸಂತ್ರಸ್ತೆಯ ಪ್ರಕಾರ, ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ  ಆಕೆಯ ಪತಿ ಮತ್ತು ಅವರ ಇಬ್ಬರು ಸಹಚರರು ಅವಳು ಮಲಗಿದ್ದಾಗ ಕೋಣೆಗೆ ಪ್ರವೇಶಿಸಿದ್ದಾರೆ.

ಹೆಂಡತಿಯ ಕಿರುಚಾಟವನ್ನು ಹತ್ತಿಕ್ಕಲು ಆತ ಮೊದಲು ಆಕೆಯ ಮುಖದ ಮೇಲೆ ದಿಂಬನ್ನು ಇರಿಸಿದ್ದಾನೆ ಮತ್ತು ಬಳಿಕ ಆಕೆಯ ಬಲ ಮಣಿಕಟ್ಟನ್ನು ಸೀಳಿದ್ದಾನೆ. ಇಬ್ಬರು ಸಹಚರರನ್ನು ಗುರುತಿಸುವುದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಕೇತುಗ್ರಾಮ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, "ಆರೋಪಿ ವ್ಯಕ್ತಿಗೆ ತನ್ನ ಹೆಂಡತಿ ನರ್ಸ್ ಆಗಿ ಕೆಲಸ ಮಾಡುವುದನ್ನು ಸಹಿಸಲು ಆಘಲಿಲ್ಲ. ಆತನ ಹೆಂಡತಿಯನ್ನು ಬೇರೆಡೆ ವರ್ಗ ಮಾಡುವ ಸಾಧ್ಯತೆಯೂ ಇತ್ತು. ಇದೇ ಕೋಪದಿಂದ ಆತ ಹೆಂಡತಿಯ ಕೈ ಕತ್ತರಿಸಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ" ಎಂದು ಹೇಳಿದ್ದಾರೆ. ಮಣಿಕಟ್ಟು ಕತ್ತರಿಸಿದ ಬಳಿಕ ಆರೋಪಿ ತನ್ನ ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ, ಆರೋಪಿ ಪತಿ ಕತ್ತರಿಸಿದ ಕೈಯನ್ನು ತನ್ನೊಂದಿಗೆ ಆಸ್ಪತ್ರೆಗೆ ಕೊಂಡೊಯ್ಯದ ಕಾರಣ ಹೊಲಿಗೆ ಹಾಕಿ ಮತ್ತೆ ಸೇರಿಸಲು ಆಗಲಿಲ್ಲ. 

ಸಂತ್ರಸ್ತೆಯ ತಂದೆ ಅಜೀಜುಲ್ ಹಕ್ ಮಾತನಾಡಿ, ''ನರ್ಸ್ ಆಗಿ ದುಡಿದು ಸಮಾಜ ಸೇವೆ ಮಾಡುವುದು ನನ್ನ ಮಗಳ ಕನಸಾಗಿತ್ತು. ಆಕೆಯ ಕನಸುಗಳು ಈಗ ಭಗ್ನವಾಗಿವೆ. ಪ್ಯಾನೆಲ್‌ನಲ್ಲಿ ಆಕೆಯ ಹೆಸರು ಕಾಣಿಸಿಕೊಂಡ ದಿನದಿಂದ, ಆಕೆಯ ಪತಿ ಆಕೆಯನ್ನು ನರ್ಸ್ ಆಗಿ ಕೆಲಸ ಮಾಡಲು ಬಿಡುವುದಿಲ್ಲ  ಎಂದು ಬೆದರಿಕೆ ಹಾಕಿದ್ದಾನೆ. ಈ ಘಟನೆ ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ. ಪಶ್ಚಿಮ ಬಂಗಾಳದ ಮಹಿಳಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮಾತನಾಡಿದ ಲೀನಾ ಗಂಗೋಪಾಧ್ಯಾಯ, "ಇದೊಂದು ಘೋರ ಘಟನೆ. ಮಹಿಳೆಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಹೇಳಿದ್ದಾರೆ.

Follow Us:
Download App:
  • android
  • ios