NEET ಪರೀಕ್ಷೆ ವೇಳೆ ಅಗತ್ಯ ವಿದ್ಯಾರ್ಥಿಗಳಿಗೆ ಡೈಪರ್ ಧರಿಸಲು, ಬದಲಿಸಲು ಕೋರ್ಟ್ ಅನುಮತಿ!
ನೀಟ್ ಪರೀಕ್ಷೆ ಬರೆಯುವ ವಿಶೇಷ ವಿದ್ಯಾರ್ಥಿಗಳಿಗೆ ಡೈಪರ್ ಧರಿಸಲು ಹಾಗೂ ಬದಲಿಸಲು ಅವಕಾಶವಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ 19 ವಿದ್ಯಾರ್ಥಿನಿಗೆ ಬಿಗ್ ರಿಲೀಫ್ ನೀಡಿದೆ.
ಚೆನ್ನೈ(ಮೇ.05) ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ವಿಶೇಷ ವಿದ್ಯಾರ್ಥಿಗಳು ಅಗತ್ಯ ಬಿದ್ದರೆ ನೀಟ್ ಪರೀಕ್ಷೆ ವೇಳೆ ಡೈಪರ್ ಧರಿಸಲು ಹಾಗೂ ಬದಲಾಯಿಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ನೀಟ್ ಪರೀಕ್ಷಾ ನಿಯಮದ ಪ್ರಕಾರ ವಿದ್ಯಾರ್ಥಿಗಳು ಡೈಪರ್ ಸೇರಿದಂತೆ ಹೆಚ್ಚುವರಿ ಯಾವುದೇ ವಸ್ತುಗಳನ್ನು ಧರಿಸವುಂತಿಲ್ಲ. ಆದರೆ ನ್ಯೂರೋಜೆನಿಕ್ ಮೂತ್ರಕೋಶ ಬ್ಲಾಡೆರ್ ಸಮಸ್ಯೆ ಎದುರಿತ್ತಿರುವ 19 ವರ್ಷದ ವಿದ್ಯಾರ್ಥಿನಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
ಜಸ್ಟೀಸ್ ಜಿಆರ್ ಸ್ವಾಮಿನಾಥನ್ ಈ ತೀರ್ಪು ನೀಡಿದ್ದಾರೆ. ನೀಟ್ ಪರೀಕ್ಷೆ ಬರೆಯಲು ಸಿದ್ದತೆ ಮಾಡಿಕೊಂಡ 19 ವರ್ಷದ ವಿದ್ಯಾರ್ಥಿನಿ ನ್ಯೂರೋಜೆನಿಕ್ ಬ್ಲಾಡೆರ್ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಈಕೆಗೆ ಪದೇ ಪದೇ ಡೈಪರ್ ಬದಲಾಯಿಸುವ ಅನಿವಾರ್ಯತೆ ಇದೆ. ಮೂತ್ರಕೋಶ ಹಾಗೂ ಮೆದಳಿನ ನಡುವಿನ ನರಗಳಲ್ಲಿ ಸಮಸ್ಯೆಯಿಂದ ಮೂತ್ರ ಶೇಖರಣೆಯಾಗದೆ ಪದೇ ಪದೇ ವಿಸರ್ಜನೆಯಾಗುತ್ತದೆ. ಹೀಗಾಗಿ ಡೈಪರ್ ಧರಿಸದೆ, ಧರಿಸಿದ ಡೈಪರ್ ಬದಲಾಯಿಸಿದೆ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಆದರೆ ನೀಟ್ ಪರೀಕ್ಷಾ ನಿಯಮದ ಪ್ರಕಾರ ಡೈಪರ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ.
ಊಟಿ, ಕೊಡೈಕೆನಾಲ್ ಪ್ರವೇಶಕ್ಕೆ ಇ-ಪಾಸ್ ಕಡ್ಡಾಯ
ಸಂದಿಗ್ಧ ಪರಿಸ್ಥಿತಿಯಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿನಿ ಪರ ವಕೀಲರು ಸಮರ್ಥ ವಾದ ಮಂಡಿಸಿದ್ದರು. ವಿದ್ಯಾರ್ಥಿನಿ ವಿಶೇಷ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಚಿಕಿತ್ಸೆ ನಡೆಯುತ್ತಿದೆ. ಈ ಕುರಿತು ವೈದ್ಯರ ಸ್ಪಷ್ಟನೆಯನ್ನು ಕೋರ್ಟ್ ಮುಂದೆ ಪ್ರಸ್ತುತಪಡಿಸಲಾಗಿತ್ತು. ವೈದ್ಯರ ಪ್ರಕಾರ, ವಿದ್ಯಾರ್ಥಿನಿಗೆ ಮೂತ್ರ ನಿಯಂತ್ರಿಸುವ ಶಕ್ತಿ ಇಲ್ಲ. ನ್ಯೂರೋಜೆನಿಕ್ ಬ್ಲಾಡರ್ ಸಮಸ್ಯೆ ಎದುರಿಸುತ್ತಿರುವ ಈ ವಿದ್ಯಾರ್ಥಿನಿಗೆ ಪದೇ ಪದೇ ಡೈಪರ್ ಬದಲಾಯಿಸಬೇಕು ಎಂದಿದ್ದರು. ವೈದ್ಯರ ಸ್ಪಷ್ಟನೆ, ವಿದ್ಯಾರ್ಥಿನಿಯ ಸಮಸ್ಯೆಯಿಂದ ಆಕೆಗೆ ನೀಟ್ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರನ್ನಾಗಿ ಮಾಡಬಾರದು. ನೀಟ್ ಪರೀಕ್ಷಾ ನಿಯಮದಲ್ಲಿ ಈ ವಿಶೇಷ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿತ್ತು.
ಆರೋಗ್ಯ ನ್ಯೂನತೆಗಳಿರುವ ವಿದ್ಯಾರ್ಥಿನಿಯನ್ನು ಅಂಗಕವಿಕಲರ ಕಾಯ್ದೆ 2106ರ ಅಡಿಯಲ್ಲಿ ಪರಿಗಣಿಸಲು ಅರ್ಹಳಾಗಿದ್ದಾಳೆ. ಈ ವಿದ್ಯಾರ್ಥನಿಗೆ ಆಕೆಯ ಹಕ್ಕಾಗಿರುವ ಪರೀಕ್ಷೆಯನ್ನು ಬರೆಯಲು ನಿರಾಕರಿಸುವುದು ಆರ್ಟಿಕಲ್ 14ರ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ಜಿಆರ್ ಸ್ವಾಮಿನಾಥನ್ ಮಹತ್ವದ ತೀರ್ಪು ನೀಡಿದ್ದಾರೆ. ನೀಟ್ ಪರೀಕ್ಷೆ ಬರೆಯುವ ವಿಶೇಷ ವಿದ್ಯಾರ್ಥಿಗಳಿಗೆ ಅಗತ್ಯ ಬಿದ್ದರೆ ಡೈಪರ್ ಧರಿಸುವ ಹಾಗೂ ಬದಲಾಯಿಸಲು ಅವಕಾಶವಿದೆ ಎಂದಿದೆ.
ತಮಿಳುನಾಡು ಪೊಲೀಸ್‌ಗೆ ಮುಖಭಂಗ, ಮೋದಿ ರೋಡ್ ಶೋಗೆ ಹೈಕೋರ್ಟ್ ಅನುಮತಿ!