ಮದ್ರಾಸ್ EYE ಗೆ ನಲುಗಿ ಹೋದ ವಿದ್ಯಾರ್ಥಿಗಳು, ಕೂಲಿಂಗ್ ಗ್ಲಾಸ್ ಧರಿಸಿ ಶಾಲೆಗೆ
ಶಾಲಾ, ಕಾಲೇಜುಗಳಲ್ಲಿ ಮದ್ರಾಸ್ ಐ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಅದ್ರಲ್ಲೂ ಕೋಟೆನಾಡು ಚಿತ್ರದುರ್ಗದ ವಿದ್ಯಾರ್ಥಿಗಳು ಮದ್ರಾಸ್ ಐ ನಿಂದಾಗಿ ನಲುಗಿ ಹೋಗಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.29): ಶಾಲಾ, ಕಾಲೇಜುಗಳಲ್ಲಿ ಮದ್ರಾಸ್ ಐ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಅದ್ರಲ್ಲೂ ಕೋಟೆನಾಡು ಚಿತ್ರದುರ್ಗದ ವಿದ್ಯಾರ್ಥಿಗಳು ಮದ್ರಾಸ್ ಐ ನಿಂದಾಗಿ ನಲುಗಿ ಹೋಗಿದ್ದಾರೆ. ಹೀಗಾಗಿ ಮನೆಯಿಂದ ಹೊರ ಬರಲು ಯೋಚಿಸ್ತಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿಕೊಂಡಿರೋ ವಿದ್ಯಾರ್ಥಿಗಳು. ಮಕ್ಕಳ ಕಣ್ಣಿನ ಸ್ಥಿತಿ ನೋಡಿ ಕಂಗಾಲಾಗಿರುವ ಪೋಷಕರು. ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು ಚಿತ್ರದುರ್ಗದ ಖಾಸಗಿ ಶಾಲೆಗಳಲ್ಲಿ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ಮದ್ರಾಸ್ ಐ ವೈರಸ್ ತಾಂಡವ ವಾಡ್ತಿದೆ. ಪಕ್ಕದ ದಾವಣಗೆರೆ ಜಿಲ್ಲೆಯಿಂದ ಈ ಸೊಂಕು ಕೋಟೆನಾಡಿಗೆ ಹರಡಿದ್ದು, ಶಾಲೆಗೆ ತೆರಳುವ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಸೊಂಕು ವೈರಲ್ ಆಗಿದೆ.
ಹೀಗಾಗಿ ಅವರ ಕಣ್ಣುಗಳು ಕೆಂಪಾಗಿದ್ದೂ, ಕಣ್ಣಿನ ರೆಪ್ಪೆಗಳು ಊದಿಕೊಳ್ತಿವೆ. ಅಲ್ಲದೇ ನೀರು ಸೋರುತ್ತಾ ಕಣ್ಣು ಬಿಡಲಾಗದಂತೆ ಉರಿಯಲಿವೆ. ಹೀಗಾಗಿ, ವಿದ್ಯಾರ್ಥಿಗಳು ಕಿರು ಪರೀಕ್ಷೆಗೂ ಹಾಜಾರಾಗದ ಸ್ಥಿತಿ ನಿರ್ಮಾಣವಾಗಿದೆಯಂತೆ. ಹಾಗೆಯೇ ಪಾಠ ಕೇಳಲಾಗದಂತೆ ಸಮಸ್ಯೆ ಎದುರಿಸುವ ಮಕ್ಕಳು ಗಾಳಿಗೆ ಕಣ್ಣು ಬಿಡಲು ಯೋಚಿಸುವಂತಾಗಿದೆ. ಈ ಸೊಂಕು ಒಬ್ಬರಿಂದ ಒಬ್ಬರಿಗೆ ಹರಡುವ ಪರಿಣಾಮ,ಮದ್ರಾಸ್ ಐ ಸೊಂಕಿನಿಂದ ಬಳಲುವ ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಕೊನೆಯ ಬೆಂಚಲ್ಲಿ ಕೂರಿಸಲಾಗ್ತಿದೆಯಂತೆ. ಇದರಿಂದಾಗಿ ಮದ್ರಾಸ್ ಐ ಸಹವಾಸ ಬೇಡಪ್ಪ ಅನ್ನುವಂತೆ ಚಿತ್ರದುರ್ಗದ ವಿದ್ಯಾರ್ಥಿಗಳು ಅಸಮಾಧಾನ ಹೊರ ಹಾಕಿದ್ದಾರೆ.
ದಾವಣಗೆರೆಯಲ್ಲಿ ಹೆಚ್ಚಾದ ಮಳೆ, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕಣ್ಣಿನ ವೈರಸ್ ಸಮಸ್ಯೆ
ಇನ್ನು ಮದ್ರಾಸ್ ಐ ಸಮಸ್ಯೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಹರಡಿದೆ. ಕಳೆದ ಗುರುವಾರ ಒಂದೇ ದಿನ 373 ಕೇಸುಗಳು ಪತ್ತೆಯಾಗಿವೆ. ಹೀಗಾಗಿ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಡೆ ಜಾಗೃತಿ ಮೂಡಿಸ್ತಿದೆ. ಅಲ್ಲದೇ ಜನರು ಸ್ವಯಂ ಪ್ರೇರಿತ ಚಿಕಿತ್ಸೆಗೆ ಮುಂದಾಗದೇ ವೈದ್ಯರ ಸಲಹೆ ಪಡೆದು ಅಗತ್ಯ ಚಿಕಿತ್ಸೆ ಪಡೆಯುವ ಮೂಲಕ ಮದ್ರಾಸ್ ಐ ಸೊಂಕು ಹರಡದಂತೆ ಬ್ರೇಕ್ ಹಾಕಲು ಸಹಕರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಮದ್ರಾಸ್ ಐ ಆತಂಕ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ವೈರಸ್ ವೈರಲ್ ಆಗ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಕೇವಲ ಜಾಗೃತಿಗೆ ಸೀಮಿತವಾಗದೇ ಸೊಂಕು ವೈರಲ್ ಆಗದಂತೆ ಬ್ರೇಕ್ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಹವಾಮಾನದ ವ್ಯತ್ಯಾಸ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಜನರಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿವೆ.
ಕಣ್ಣಿನ ಸೋಂಕಿಗೆ ಮನೆ ಮದ್ದು: ಅನಾರೋಗ್ಯಕ್ಕೆ ಹೇಳಿ ಗುಡ್ ಬೈ
ಚಿಕ್ಕಮಗಳೂರಲ್ಲೂ ಮದ್ರಾಸ್ ಐ
ಮಳೆ ಜೋರಾಗುತ್ತಿದ್ದಂತೆ ಪಟ್ಟಣ ಹಾಗೂ ಸುತ್ತ ಮುತ್ತಲಿನ ಹಲವು ಗ್ರಾಮಗಳಲ್ಲಿ ಮದ್ರಾಸ್ ಕಣ್ಣಿನ ಕಾಯಿಲೆ ( ಕಂಜಕ್ಟವೈಟೀಸ್ ) ವ್ಯಾಪಕವಾಗಿ ಹರಡುತ್ತಿದೆ.
ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ಉರಿ, ಕಣ್ಣಿನಲ್ಲಿ ನೀರು ಬರುತ್ತಿದ್ದು ಹಲವರು ಕಪ್ಪು ಕನ್ನಡಕ ಹಾಕಿಕೊಂಡು ಹೊರಗೆ ಬರುತ್ತಿದ್ದಾರೆ. ಹಲವರು ಮನೆಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಮದ್ರಾಸ್ ಕಣ್ಣಿನ ಕಾಯಿಲೆ ಹರಡಿದೆ. ಕೆಲವರ ಕಣ್ಣು ಊತ ಬಂದಿದೆ. ಮಕ್ಕಳಿಗೂ ಸಹ ಮದ್ರಾಸ್ ಕಣ್ಣಿನ ಕಾಯಿಲೆ ಬರುತ್ತಿದೆ. ಕೆಲವು ಮಕ್ಕಳು 2-3 ದಿನ ಶಾಲೆಗೆ ಹೋಗದೆ ಮನೆಯಲ್ಲಿ ಉಳಿಯುತ್ತಿದ್ದಾರೆ. ಹಲವರು ಆಸ್ಪತ್ರೆಗೆ ತೆರಳಿ ಕಣ್ಣಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮುನ್ನೆಚ್ಚರಿಕೆ: ಸರ್ಕಾರಿ ಆಸ್ಪತ್ರೆ ನೇತ್ರ ತಜ್ಞರಾದ ಡಾ.ಶ್ರೀ ರಂಜನಿ ಮದ್ರಾಸ್ ಕಣ್ಣಿನ ಬೇನೆ ಬಗ್ಗೆ ಕನ್ನಡಪ್ರಭಕ್ಕೆ ಮಾಹಿತಿ ನೀಡಿ, ಇದು ವೈರಸ್ ನಿಂದ ಬರುವ ಸಮಸ್ಯೆ. ಕಣ್ಣಿನ ಕಾಯಿಲೆ ಕಾಣಿಸಿಕೊಂಡವರಿಗೆ 11 ದಿನ ವೈರಸ್ ಇರುವುದರಿಂದ ಬೇರೆಯವರಿಂದ ದೂರವಿರಬೇಕು. ಹೆಚ್ಚು ಜನರಿರುವ ಪ್ರದೇಶಕ್ಕೆ ಹೋಗಬಾರದು. ಕಣ್ಣನ್ನು ಮುಟ್ಟಿದಾಗ ಸೋಪಿನಲ್ಲಿ ಆಗಾಗ ಕೈ ತೊಳೆದು ಕೊಳ್ಳಬೇಕು. ರೋಗ ಬಂದ ಕಣ್ಣನ್ನು ಮುಟ್ಟಿಕೊಂಡವರು ಲೋಟ, ಪಾತ್ರೆ ಹಾಗೂ ಇತರೆ ವಸ್ತುಗಳನ್ನು ಮುಟ್ಟಿದರೆ ಅದರ ಮೂಲಕ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ಅವರು ಉಪಯೋಗಿಸಿದ ಟವಲ್, ತಲೆ ದಿಂಬುಗಳನ್ನು ಇತರರು ಉಪಯೋಗಿಸದಂತೆ ಎಚ್ಚರ ವಹಿಸಬೇಕು. ವಿಶೇಷವಾಗಿ 2-3 ದಿನ ಕಣ್ಣಿನಲ್ಲಿ ಉರಿ, ಕೆಂಪಾಗುವುದು, ಕಣ್ಣೀರು ಬರುವುದು ಇದರ ಲಕ್ಷಣವಾಗಿದೆ. ಹಲವರಿಗೆ ಕಣ್ಣಿನ ಬೇನೆ ಬಂದಾಗ ಸೀತ, ಜ್ವರ ಸಹ ಬರುತ್ತದೆ. ತಕ್ಷಣ ನೇತ್ರ ತಜ್ಞರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು.