ಕಣ್ಣಿನ ಸೋಂಕಿಗೆ ಮನೆ ಮದ್ದು: ಅನಾರೋಗ್ಯಕ್ಕೆ ಹೇಳಿ ಗುಡ್ ಬೈ

ಪಿಂಕ್‌ ಐ ಅಥವಾ ಕಣ್ಣಿನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಅದರಿಂದ ರಕ್ಷಿಸಿಕೊಳ್ಳಲು ಕಣ್ಣುಗಳಿಗೆ ರಾತ್ರಿ ಮಲಗುವ ಸಮಯದಲ್ಲಿ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಸೋಂಕನ್ನು ಕಡಿಮೆ ಮಾಡಲೂ ಸಹ ಮನೆಯಲ್ಲೇ ಹಲವು ವಿಧಾನ ಅನುಸರಿಸಬಹುದು.
 

simple home remedies for eye infection conjunctives spreading in monsoon sum

ಕಣ್ಣು ಬೇನೆ, ಐ ಫ್ಲೂ, ಪಿಂಕ್‌ ಐ, ಮದ್ರಾಸ್‌ ಐ ಎಂದೆಲ್ಲ ಕರೆಸಿಕೊಳ್ಳುವ ಕಂಜಂಕ್ಟಿವಿಟಿಸ್‌ ಸೋಂಕು ಎಲ್ಲೆಡೆ ತೀವ್ರವಾಗಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಸೋಂಕು ಈ ಬಾರಿ ಮಳೆಯ ಸಮಯದಲ್ಲೂ ಹಬ್ಬಿರುವುದಕ್ಕೆ ಅಚ್ಚರಿ ವ್ಯಕ್ತವಾಗಿದೆ. ದೆಹಲಿ ಸೇರಿದಂತೆ ದೇಶದ ಹಲವು ಭಾಗಗಳು ಹಾಗೂ ನಮ್ಮ ರಾಜ್ಯದ ಬಹಳಷ್ಟು ಪ್ರದೇಶಗಳಲ್ಲಿ ತೀವ್ರವಾಗಿದೆ. ಶಾಲೆ-ಕಾಲೇಜುಗಳಲ್ಲಿ ಸೋಂಕು ಹೆಚ್ಚುತ್ತಿದೆ. ಒಬ್ಬರಿಂದ ಒಬ್ಬರಿಗೆ ಬಹುಬೇಗ ಹರಡುವ ಕಣ್ಣಿನ ಸೋಂಕು ಸಾಕಷ್ಟು ಕಿರಿಕಿರಿ ನೀಡುವಂಥದ್ದು. ಮೊದಲು ಕಣ್ಣುಗಳು ಕೆಂಪಗಾಗಿ ನೀರು ಬರುವುದು, ಬಳಿಕ ಮಡ್ಡು ಬರುತ್ತದೆ. ತುರಿಕೆ, ಕೊರತೆ ಹಾಗೂ ರೆಪ್ಪೆ ದಪ್ಪಗಾಗುವುದು ಇದರ ಸಾಮಾನ್ಯ ಲಕ್ಷಣಗಳು. ಸೋಂಕು ಹೆಚ್ಚಾಗಿದ್ದರೆ ಜ್ವರ ಕೂಡ ಬರುವುದುಂಟು. ಕನಿಷ್ಠ ನಾಲ್ಕೈದು ದಿನಗಳ ಕಾಲ ಎಲ್ಲಿಗೂ ಹೋಗದೆ, ಯಾರೊಂದಿಗೂ ಬೆರೆಯದೇ ಏಕಾಂಗಿಯಾಗಿ ಇದ್ದಲ್ಲಿ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಗಾಳಿಯ ಮೂಲಕವೂ ಸೋಂಕು ಹರಡುವುದರಿಂದ ಸೋಂಕಿತ ವ್ಯಕ್ತಿಯ ಸಮೀಪ ಹೋಗಲೂ ಹೆಚ್ಚಿನ ಜನರು ಭಯಪಡುತ್ತಾರೆ. ಆದರೆ, ಇದಕ್ಕೆ ಭಯ ಬೇಕಾಗಿಲ್ಲ. ಮನೆಯಲ್ಲೇ ಸರಳ ಮಾರ್ಗೋಪಾಯಗಳ ಮೂಲಕ ನಿವಾರಣೆ ಮಾಡಿಕೊಳ್ಳಬಹುದು. 

•    ಜೇನುತುಪ್ಪ (Honey)
ಎಲ್ಲರಿಗೂ ಗೊತ್ತಿರುವಂತೆ ಜೇನುತುಪ್ಪ ಬ್ಯಾಕ್ಟೀರಿಯಾ ನಿರೋಧಕ (Antibacterial) ಅಂಶವನ್ನು ಒಳಗೊಂಡಿದೆ. ಜೇನುತುಪ್ಪ ಪಿಂಕ್‌ ಐ (Pink Eye) ಸೋಂಕಿನ (Infection) ನಿವಾರಣೆಗೆ ಸಹಕಾರಿಯಾಗಿದೆ. ಒಂದು ಗ್ಲಾಸ್‌ ಶುದ್ಧ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ. ಬಳಿಕ ಈ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು. ಜೇನುತುಪ್ಪದಿಂದ ಕೂಡಿರುವ ನೀರಿನಿಂದ ಕಣ್ಣುಗಳಲ್ಲಿ ಉಂಟಾಗುವ ಉರಿ ಹಾಗೂ ನೋವು (Pain) ಕಡಿಮೆಯಾಗುತ್ತದೆ. ಹಾಗೂ ಸೋಂಕು ಬೇಗ ಕಡಿಮೆಯಾಗುತ್ತದೆ.

ಮಳೆಗಾಲದಲ್ಲಿ ಬಿಸಿ ಬಿಸಿ ಟೀ ಕುಡಿಯೋದನ್ನು ಮಿಸ್ ಮಾಡ್ಲೇಬೇಡಿ

•    ಗುಲಾಬಿ ಜಲ (Rose Water)
ಕಣ್ಣು ಬೇನೆಯ ನೋವನ್ನು ಕಡಿಮೆ ಮಾಡಿಕೊಳ್ಳಲು ಗುಲಾಬಿ ಜಲವನ್ನೂ ಸಹ ಬಳಕೆ ಮಾಡಬಹುದು. ಇದರಲ್ಲೂ ಸಹ ಆಂಟಿ ಬ್ಯಾಕ್ಟೀರಿಯಲ್‌ ಮತ್ತು ಆಂಟಿಸೆಪ್ಟಿಕ್‌ (Antiseptic) ಅಂಶಗಳಿರುತ್ತವೆ. ಸೋಂಕಿಗೆ ಕಾರಣವಾಗುವ ಕೀಟಾಣುಗಳ ವಿರುದ್ಧ ಇವು ಹೋರಾಡುತ್ತವೆ. ಈ ಸಮಯದಲ್ಲಿ ಉಂಟಾಗುವ ಉರಿ, ಚುಚ್ಚುವಿಕೆಯನ್ನು ಕಡಿಮೆಗೊಳಿಸಲು ಗುಲಾಬಿ ಜಲ ಸಹಕಾರಿ. ಗುಲಾಬಿ ದಳಗಳನ್ನು ನೀರಿನಲ್ಲಿ (Water) ನೆನೆಸಿ ಅದರಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು ಅಥವಾ ಹನಿಯನ್ನು ಆಗಾಗ ಕಣ್ಣುಗಳಿಗೆ (Eyes) ಸವರಿಕೊಳ್ಳಬೇಕು. 

•    ಆಲೂಗಡ್ಡೆ (Potato)
ಕಣ್ಣುಬೇನೆಯ ಕಿರಿಕಿರಿಯನ್ನು ಆಲೂಗಡ್ಡೆಯಿಂದಲೂ ಕಡಿಮೆ ಮಾಡಿಕೊಳ್ಳಬಹುದು. ಆಲೂಗಡ್ಡೆಯ ಹೋಳುಗಳನ್ನು ಕಣ್ಣುಗಳ ಮೇಲೆ ಇರಿಸಿಕೊಳ್ಳಬೇಕು. ಆಲೂಗಡ್ಡೆಯ ಹೋಳುಗಳು ತಣ್ಣಗಿರುತ್ತವೆ. ಇದರಿಂದ ಕಣ್ಣುಗಳಿಗೆ ಸಹಾಯವಾಗುತ್ತದೆ. 10-15 ನಿಮಿಷಗಳ ಕಾಲ ಆಲೂ ಹೋಳುಗಳನ್ನು (Slice) ಇಟ್ಟುಕೊಳ್ಳಬಹುದು.

•    ತುಳಸಿ (Tulsi)
ತುಳಸಿಯಲ್ಲಿ ಹಲವು ಔಷಧೀಯ (Medicinal) ಗುಣವಿರುತ್ತದೆ. ಇದು ಆಂಟಿಬ್ಯಾಕ್ಟೀರಿಯಲ್‌, ಆಂಟಿಆಕ್ಸಿಡೆಂಟ್ಸ್ ಗುಣ ಹೊಂದಿದ್ದು, ಕಣ್ಣು ಸೋಂಕಿನ ತೀವ್ರತೆಯನ್ನು ಶಮನಗೊಳಿಸುತ್ತದೆ.‌ ಶುದ್ಧವಾದ ಒಂದು ಲೋಟ ನೀರಿಗೆ ನಾಲ್ಕಾರು ತುಳಸಿ ದಳಗಳನ್ನು ರಾತ್ರಿ ಹಾಕಿ ಅದನ್ನು ಬೆಳಗ್ಗೆ ಕಣ್ಣುಗಳಿಗೆ ಬಿಟ್ಟುಕೊಳ್ಳಬೇಕು. 

•    ದೇಸಿ ತುಪ್ಪ (Ghee)
ಕಣ್ಣುಗಳಿಗೆ ತುಪ್ಪ ಅಥವಾ ಎಣ್ಣೆ ಬಿಡುವುದನ್ನು ವೈದ್ಯರು ಶಿಫಾರಸು ಮಾಡುವುದಿಲ್ಲ. ಆದರೆ, ಗ್ರಾಮೀಣರ ಅನುಭವದ ಪ್ರಕಾರ, ದೇಸಿ ದನದ ತುಪ್ಪ ಬಿಡುವುದು ಅತ್ಯುತ್ತಮ. ಹಾಗೆಯೇ, ಸೋಂಕು ಬಾರದಿರಲು ಮುನ್ನೆಚ್ಚರಿಕೆಯಾಗಿಯೂ ಕಣ್ಣುಗಳಿಗೆ ತುಪ್ಪ ಅಥವಾ ತೆಂಗಿನ ಎಣ್ಣೆಯನ್ನು (Coconut Oil) ಸವರಬಹುದು.  

Health Tips: ನೋವಲ್ಲಿರುವ ಪತ್ನಿಗೆ ಮದ್ದಾಗ್ಬಹುದು ಪತಿಯ ಸ್ಪರ್ಶ

•    ಕಡಲೆಬೇಳೆ ನೆನೆಸಿದ ನೀರು
ಕಡಲೆಬೇಳೆಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮಾರನೆಯ ದಿನ ಬೆಳಗ್ಗೆ ಕಣ್ಣುಗಳಿಗೆ ಬಿಡುವುದರಿಂದ ಸೋಂಕಿನ ತೀವ್ರತೆ ಕಡಿಮೆಯಾಗುತ್ತದೆ. ಉರಿ, ನೋವು ಇಲ್ಲವಾಗುತ್ತವೆ. ಕಡಲೆ ನೀರು ಕಣ್ಣುಗಳಿಗೆ ತಂಪು. 

•    ಲಿಂಬೆರಸ (Lemon)
ಕಣ್ಣುಗಳಿಗೆ ಹುಳಿಯಾದ ಲಿಂಬೆರಸ ಬಿಡುವುದಕ್ಕೆ ಬಹುತೇಕ ಜನ ಹೆದರುತ್ತಾರೆ. ಆದರೆ, ಕಣ್ಣಿನ ಸೋಂಕಿಗೆ ಇದು ರಾಮಬಾಣ. ಸೋಂಕು ಉಂಟಾದಾಗ ಒಂದು ಹನಿ ಲಿಂಬೆರಸವನ್ನು ಕಣ್ಣುಗಳಿಗೆ ಬಿಟ್ಟರೆ ಮಾರನೆಯ ದಿನವೇ ಸೋಂಕು ದೂರವಾಗುತ್ತದೆ. ಅಲ್ಲದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ಕಣ್ಣುಗಳಿಗೆ ಸಂಬಂಧಿಸಿ ಬೇರ್ಯಾವುದೇ ಸಮಸ್ಯೆ ಇಲ್ಲದವರು ಇದನ್ನು ಮಾಡಬಹುದು. 
 
 

Latest Videos
Follow Us:
Download App:
  • android
  • ios