Asianet Suvarna News Asianet Suvarna News

LKG-UKG: 262 ಸರ್ಕಾರಿ ಶಾಲೇಲಿ ಈ ವರ್ಷವೇ ಎಲ್‌ಕೆಜಿ, ಯುಕೆಜಿ ಆರಂಭ

ರಾಜ್ಯದ ಆಯ್ದ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ತಡವಾದರೂ ಪ್ರಸಕ್ತ ಸಾಲಿನಿಂದಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ-ಯುಕೆಜಿ) ಆರಂಭಿಸಲು ಸಿದ್ಧತೆ ನಡೆದಿದ್ದು, ಈ ಸಂಬಂಧ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶನಾಲಯ ಸೂಚಿಸಿದೆ.

lkg ukg will start in government schools in karnataka from this year itself gvd
Author
First Published Aug 31, 2023, 2:00 AM IST

ಬೆಂಗಳೂರು (ಆ.31): ರಾಜ್ಯದ ಆಯ್ದ 262 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ, ತಡವಾದರೂ ಪ್ರಸಕ್ತ ಸಾಲಿನಿಂದಲೇ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್‌ಕೆಜಿ-ಯುಕೆಜಿ) ಆರಂಭಿಸಲು ಸಿದ್ಧತೆ ನಡೆದಿದ್ದು, ಈ ಸಂಬಂಧ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರಿಗೆ ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶನಾಲಯ ಸೂಚಿಸಿದೆ. ಮಾಹಿತಿ ಪ್ರಕಾರ ಸೆಪ್ಟಂಬರ್‌ ತಿಂಗಳಿಂದಲೇ ಪ್ರಾಯೋಗಿಕವಾಗಿ ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾಗಲಿವೆ.

ರಾಜ್ಯದ 276 ಕರ್ನಾಟಕ ಪಬ್ಲಿಕ್‌ ಶಾಲೆಗಳೂ ಸೇರಿದಂತೆ ಒಟ್ಟು 900 ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲಾಗುತ್ತಿದೆ. ಪ್ರತಿ ತರಗತಿಯು ಕನಿಷ್ಠ 20 ಮತ್ತು ಗರಿಷ್ಠ 30 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಎಸ್‌ಡಿಎಂಸಿಗಳು 10 ತಿಂಗಳ ಅವಧಿಗೆ ಅತಿಥಿ ಶಿಕ್ಷಕರನ್ನು ಮತ್ತು ಆಯಾಗಳನ್ನು ನೇಮಿಸಿಕೊಂಡು ತಿಂಗಳಿಗೆ ಕ್ರಮವಾಗಿ 7,000 ರು. ಮತ್ತು 5,000 ರು. ಪಾವತಿಸುತ್ತಿವೆ.

ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ

ಪ್ರಸಕ್ತ 2023-24ನೇ ಸಾಲಿನಲ್ಲಿ ಇನ್ನೂ 300 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಪ್ರಸಕ್ತ ಸಾಲಿನ ವಾರ್ಷಿಕ ಯೋಜನಾ ಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಶಿಕ್ಷಣ ಮಂತ್ರಾಲಯವು 262 ಶಾಲೆಗಳಲ್ಲಿ ಈ ಬಾರಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಷರತ್ತು ಬದ್ದ ಅನುಮೋದನೆ ನೀಡಿತ್ತು. ಅದರಂತೆ ಬೆಂಗಳೂರು ದಕ್ಷಿಣದಲ್ಲಿ 10 ಮತ್ತು ಬೆಂಗಳೂರು ಉತ್ತರದಲ್ಲಿ ನಾಲ್ಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 262 ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಕ್ಕೆ ಪೂರ್ವ ಸಿದ್ದತೆ ಮಾಡಿಕೊಳ್ಳಲು ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶಕರು ಡಿಡಿಪಿಐಗಳಿಗೆ ಸೂಚಿಸಿದ್ದಾರೆ.

ಈಗಾಗಲೇ ಶಿಕ್ಷಣ ಇಲಾಖೆಯು ಆರ್‌ಟಿಇ ಕಾಯ್ದೆ ಅನುಸಾರ 2025-26ನೇ ಶೈಕ್ಷಣಿಕ ಸಾಲಿನಿಂದ 1ನೇ ತರಗತಿ ಪ್ರವೇಶಕ್ಕೆ ಮಗುವಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು. ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ಪೂರ್ಣಗೊಂಡಿರಬೇಕೆಂದು ನಿಯಮ ಮಾಡಿದೆ. ಅದರಂತೆ 4 ವರ್ಷ ಪೂರ್ಣಗೊಂಡಿರುವ ಮಕ್ಕಳನ್ನು ಎಲ್‌ಕೆಜಿಗೆ ಮತ್ತು 5 ವರ್ಷ ವಾಗಿರುವ ಮಕ್ಕಳನ್ನು ಯುಕೆಜಿಗೆ ಸೇರಿಸಬಹುದಾಗಿದೆ.

ರೌಡಿ ಶೀಟರ್‌ಗಳು ಬಾಲ ಬಿಚ್ಚದಂತೆ ಹತೊಟಿಗೆ ತನ್ನಿ: ಸಚಿವ ಪ್ರಿಯಾಂಕ್‌ ಖರ್ಗೆ

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲು ಪೋಷಕರಿಂದ ರಾಜ್ಯಾದ್ಯಂತ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ಪ್ರತಿ ವರ್ಷ ನಿರ್ದಿಷ್ಟಸಂಖ್ಯೆಯ ಶಾಲೆಗಳಲ್ಲಿ ಈ ತರಗತಿಗಳನ್ನು ಆರಂಭಿಸಿಕೊಂಡು ಬರುತ್ತಿರುವುದು ಸ್ವಾಗತಾರ್ಹ ಕ್ರಮ. ಆದರೆ, ಪೂರ್ಣ ಪ್ರಮಾಣದಲ್ಲಿ ಎಲ್ಲ ಶಾಲೆಗಳಲ್ಲೂ ಆರಂಭವಾದರೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಬಡ ಜನರ ಮಕ್ಕಳಿಗೆ ಅನುಕೂಲವಾಗಲಿದೆ ಎನ್ನುವುದು ಶಿಕ್ಷಣ ತಜ್ಞರು ಹಾಗೂ ರಾಜ್ಯ ಪೋಷಕರ ಸಂಘಟನೆಗಳ ಅಭಿಪ್ರಾಯವಿದೆ.

Follow Us:
Download App:
  • android
  • ios