ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ದಿಸೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳು ಶುರುವಾಗಲಿವೆ. ಎಲ್ಲವೂ ಅಂದುಕೊಂಡಂತಾದರೆ ಪಾಠ-ಬೋಧನೆಗೆ ಶೀಘ್ರವೇ ಈ ತರಗತಿಗಳು ತೆರೆದುಕೊಳ್ಳಲಿವೆ.

ರವಿ ಕಾಂಬಳೆ

ಹುಕ್ಕೇರಿ(ಸೆ.21): ಬಾಲ್ಯಾವಸ್ಥೆಯಿಂದಲೇ ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿ ಹಾಕುವ ದೃಷ್ಟಿಯಿಂದ ಅಂಗನವಾಡಿಗಳ ಮಾದರಿಯಲ್ಲಿ ಇದೀಗ ಆಯ್ದ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ(ಎಲ್‌ಕೆಜಿ, ಯುಕೆಜಿ)ಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 20 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಅನುಮತಿ ಸಿಕ್ಕಿದೆ.

ಹೌದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ದಿಸೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳು ಶುರುವಾಗಲಿವೆ. ಎಲ್ಲವೂ ಅಂದುಕೊಂಡಂತಾದರೆ ಪಾಠ-ಬೋಧನೆಗೆ ಶೀಘ್ರವೇ ಈ ತರಗತಿಗಳು ತೆರೆದುಕೊಳ್ಳಲಿವೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸೂಚನೆ; ಅಂಗನವಾಡಿ ಕಾರ್ಯಕರ್ತರು ತೀವ್ರ ವಿರೋಧ

ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶನಾಲಯ ಸೂಚನೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಸಾರಾಪುರ ಹಾಗೂ ಹುನ್ನೂರ ಮಾಸ್ತಿಹೊಳಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ, ಗ್ರಾಮದಲ್ಲಿ ಈವರೆಗೂ ಒಂದೂ ಖಾಸಗಿ ಶಾಲೆ ಇಲ್ಲದಿರುವುದನ್ನು ಪರಿಗಣಿಸಿ ಸಾರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಯೋಜನೆಯ ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ.

ಚುರುಕುಗೊಂಡ ಕಾರ್ಯ:

ಶಿಕ್ಷಣ ಪಡೆಯುವ ಆರಂಭಿಕ ಹಂತದಲ್ಲಿಯೇ ಮಕ್ಕಳ ಭವಿಷ್ಯ ಆಶಾದಾಯಕವಾಗಲು ಈ ನೂತನ ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆಯ್ಕೆಯಾದ ಶಾಲೆಗಳಿಗೆ ಕೊಠಡಿ ಗುರುತಿಸುವುದು ಸೇರಿದಂತೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಸಜ್ಜುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಇದರೊಂದಿಗೆ ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿಯೂ ಎಲ್‌ಕೆಜಿ-ಯುಕೆಜಿ ವಿದ್ಯಾರ್ಜನೆ ದೊರೆಯಲಿದೆ. ತನ್ಮೂಲಕ ಮಕ್ಕಳಿಗೆ ಎಲ್‌ಕೆಜಿ-ಯುಕೆಜಿ ಕಲಿಸಬೇಕೆಂಬ ಬಡ ಹಾಗೂ ಮಧ್ಯಮ ವರ್ಗದ ಪಾಲಕರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ಲಕ್ಷಕ್ಕೂ ಅಧಿಕ ಅನುದಾನ:

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಸ್‌ಡಿಎಂಸಿ ನೇತೃತ್ವದಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಈ ಪೂರ್ವ ಪ್ರಾಥಮಿಕ ತರಗತಿಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ಮಾತ್ರ ನಡೆಸುವುದು. ಇದಕ್ಕೆ ಬೇಕಾದ ಅತಿಥಿ ಶಿಕ್ಷಕರು, ಆಯಾಗಳ ನೇಮಕ ಸೇರಿದಂತೆ ಪರಿಕರ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು 1 ಲಕ್ಷಕ್ಕೂ ಅಧಿಕ ಅನುದಾನ ದೊರೆಯಲಿದೆ. 4 ರಿಂದ 5 ವರ್ಷದೊಳಗಿನ ಕನಿಷ್ಠ 20 ಗರಿಷ್ಠ 30 ಮಕ್ಕಳನ್ನು

ದಾಖಲಿಸುವಂತೆ ಸರ್ಕಾರ ಸೂಚಿಸಿದೆ.

ಇನ್ನು ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ನಗರ ವ್ಯಾಪ್ತಿಯ ಮಹಾಂತೇಶ ನಗರದ ಕೆಎಚ್‌ಪಿಎಸ್ ನಂ.24 ಶಾಲೆ, ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕರಡಿಗುದ್ದಿ, ಯಳ್ಳೂರವಾಡಿ, ರಾಮದುರ್ಗ ತಾಲೂಕಿನ ಚಿಲಮೂರ, ಹೊಸಕೋಟಿ, ಚನ್ನಮ್ಮನ ಕಿತ್ತೂರ ವ್ಯಾಪ್ತಿಯ ಬೈಲೂರ, ಬೈಲಹೊಂಗಲ ತಾಲೂಕಿನ ನೇಸರಗಿ, ಖಾನಾಪುರ ತಾಲೂಕಿನ ಬೀಡಿ, ಹಂದೂರ ಹುಲಿಕೊತ್ತಲ, ಸವದತ್ತಿ ತಾಲೂಕು ಚಚಡಿ ಶಾಲೆಗಳು ಯೋಜನೆಗೆ ಸೇರ್ಪಡೆಯಾಗಿವೆ.

ಎಲ್ಲೆಲ್ಲಿ, ಯಾವ ಶಾಲೆ ಆಯ್ಕೆ?

ಜಿಲ್ಲೆಯ ಒಟ್ಟು 20 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಅನುಮತಿ ಸಿಕ್ಕಿದೆ. ಆದರೆ, ರಾಯಬಾಗ ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರಗಳ ಶಾಲೆಗಳನ್ನು ಆಯ್ದುಕೊಂಡಿಲ್ಲ. ಇದು ಆ ಭಾಗದ ಶಿಕ್ಷಣ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಅಥಣಿ ವಲಯದ ಖವಟಕೊಪ್ಪ, ಕಾಗವಾಡದ ಮೋಳೆ, ಚಿಕ್ಕೋಡಿ ವಲಯದ ಚಿಕ್ಕೋಡಿ ವಾರ್ಡ್-23ರ ನಂ1 ಶಾಲೆ, ಖಡಕಲಾಟ, ವಿಜಯನಗರ, ನಿಪ್ಪಾಣಿ ವಲಯದ ಕೆಎಚ್‌ಪಿಎಸ್ ನಂ.1, ಹುಕ್ಕೇರಿ ತಾಲೂಕಿನ ಸಾರಾಪುರ, ಹುನ್ನೂರ-ಮಾಸಿಹೊಳಿ, ಮೂಡಲಗಿ ವಲಯದ ಮೂಡಲಗಿ, ಗೋಕಾಕ ತಾಲೂಕು ಬೆಣಚಿನಮರಡಿ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.

LKG-UKG: 262 ಸರ್ಕಾರಿ ಶಾಲೇಲಿ ಈ ವರ್ಷವೇ ಎಲ್‌ಕೆಜಿ, ಯುಕೆಜಿ ಆರಂಭ

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಶಾಸಕ ನಿಖಿಲ್ ಕತ್ತಿ ತಿಳಿಸಿದ್ದಾರೆ.

ಮಕ್ಕಳ ಶೈಕ್ಷಣಿಕ ಜೀವನದ ಆರಂಭಿಕ ಹಂತಕ್ಕೆ ಭದ್ರಬುನಾದಿ ಹಾಕಲು ಈ ಯೋಜನೆ ಸಹಕಾರಿಯಾಗಲಿದೆ. ಯೋಜನೆಯಡಿ ಆಯ್ಕೆಯಾದ ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ಎಲ್ಲ ವಾತಾವರಣ ಸೃಷ್ಟಿಸಲು ಆದ್ಯತೆ ನೀಡಲಾಗಿದೆ ಎಂದು ಬಿಇಒ ಪ್ರಭಾವತಿ ಪಾಟೀಲ ಹೇಳಿದ್ದಾರೆ.