‘ನೋ ಬ್ಯಾಗ್ ಡೇ’ ಈಗಲಾದರೂ ಜಾರಿಯಾಗಲಿ
* 2020-21ರ ಬಜೆಟ್ನಲ್ಲೇ ಘೋಷಿಸುದ್ದ ಯೋಜನೆ
* ಮಕ್ಕಳಿಗೆ ಪಠ್ಯದ ಹೊರೆ ತಪ್ಪಿಸಲು ಬಿಎಸ್ವೈ ಘೋಷಿಸಿದ್ದ ಯೋಜನೆ
* ಪ್ರತಿದಿನ ಹೊರುವ ಬ್ಯಾಗ್ ತೂಕ ಇಳಿಸುವಂತಾಗಬೇಕು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.24): ಮಕ್ಕಳಿಗೆ ಪಠ್ಯ ಪುಸ್ತಕ ಹೊರೆಯಾಗಬಾರದೆಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದ್ದ ‘ನೋ ಬ್ಯಾಗ್ ಡೇ’ ಈ ಸಲವಾದರೂ ಜಾರಿಯಾಗುವುದೇ? ಇದು ಶಿಕ್ಷಣ ಪ್ರೇಮಿಗಳು ಹಾಗೂ ಪಾಲಕರ ಪ್ರಶ್ನೆ. 2020-21ರಲ್ಲೇ ಘೋಷಿಸಿದ್ದ ನೋ ಬ್ಯಾಗ್ ಡೇ ಈ ವರೆಗೂ ಸಮರ್ಪಕವಾಗಿ ಜಾರಿಯಾಗಿಲ್ಲ. ಕೆಲವೆಡೆ ಜಾರಿಯಾದರೂ ಅದು ಹೆಸರಿಗೆ ಮಾತ್ರ ಎಂಬಂತಾಗಿದೆ. ಹೀಗಾಗಿ ಮಕ್ಕಳಿಗೆ ಪಠ್ಯ ಪುಸ್ತಕದ ಹೊರೆ ಕೆಳಕ್ಕಿಳಿದಿಲ್ಲ.
ಘೋಷಣೆ ಏನು?
1ರಿಂದ 10ನೇ ತರಗತಿ ಮಕ್ಕಳಿಗೆ ಪಠ್ಯದ ಹೊರೆ ಜಾಸ್ತಿಯಿದೆ. ಒಂದೊಂದು ಬ್ಯಾಗ್ ಹತ್ತಾರು ಕೆಜಿ ತೂಕವಿರುತ್ತದೆ. ಕನಿಷ್ಠವೆಂದರೂ 8ರಿಂದ11 ಕೆಜಿ ತೂಕ ಮಕ್ಕಳ ಬ್ಯಾಗ್ ತೂಗುತ್ತವೆ ಎಂದು ಹಿಂದೆ ಸಮೀಕ್ಷೆ ನಡೆಸಿದಾಗ ಬೆಳಕಿಗೆ ಬಂದಿತ್ತು. ಇಷ್ಟೊಂದು ತೂಕದ ಬ್ಯಾಗ್ ಹೊರುವುದರಿಂದ ಮಕ್ಕಳ ದೇಹದ ಮೇಲೆ ಪರಿಣಾಮ ಬೀರುತ್ತದೆ. ಎಷ್ಟೋ ಮಕ್ಕಳು ಬೆನ್ನುನೋವಿನಿಂದ ಬಳಲುವುದು ಕಂಡು ಬಂದಿತ್ತು.
ಭಗತ್ಸಿಂಗ್ ಪಠ್ಯ ಬಿಟ್ಟಿಲ್ಲ-ಪೂರ್ಣ ಸತ್ಯ ಹೇಳಲು ಪಠ್ಯ ಪರಿಷ್ಕರಣೆ: ಸಚಿವ ನಾಗೇಶ್
ಪ್ರತಿ ದಿನ ಬರೀ ಪಾಠ ಪ್ರವಚನ ಎನ್ನುವುದಕ್ಕಿಂತ ಪುಸ್ತಕ ಬಿಟ್ಟು ಒಂದು ದಿನವಾದರೂ ಓದುವಂತಾಗಬೇಕು. ಅಂದರೆ ಆಟದೊಂದಿಗೆ ಪಾಠವಾದರೆ ಬೌದ್ಧಿಕವಾಗಿ ಬೆಳವಣಿಗೆ ಉತ್ತಮ. ಪಠ್ಯ ಬಿಟ್ಟು ಒಂದು ದಿನ ಪೂರ್ಣವಾಗಿ ಪಠ್ಯೇತರ ಚಟುವಟಿಕೆಗಳ ಮೂಲಕ ಪಾಠ ಮಾಡಿದರೆ ಮಕ್ಕಳು ಮಾನಸಿಕವಾಗಿಯೂ ಸದೃಢವಾಗುತ್ತಾರೆ. ಅದಕ್ಕಾಗಿ ವಾರಕ್ಕೊಮ್ಮೆ ‘ನೋ ಬ್ಯಾಗ್ ಡೇ’ ಮಾಡಬೇಕೆಂದು ಆಗ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದರು. ಜತೆಗೆ ಪ್ರತಿದಿನ ಹೊರುವ ಬ್ಯಾಗ್ ತೂಕ ಇಳಿಸುವಂತಾಗಬೇಕು. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಎರಡು ಸೆಟ್ ಟೆಸ್ಟ್ ಬುಕ್ ಇರುವಂತೆ ಮಾಡಬೇಕು. ಒಂದು ಸೆಟ್ ಪುಸ್ತಕ ಶಾಲೆಯಲ್ಲಿ, ಮತ್ತೊಂದು ಮನೆಯಲ್ಲಿ ಇಡುವಂತಾಗಬೇಕು. ಇದರಿಂದ ಟೆಸ್ಟ್ ಬುಕ್ ಶಾಲೆಗಳಿಗೆ ಒಯ್ಯುವುದನ್ನು ತಪ್ಪಿಸಿದಂತಾಗುತ್ತದೆ.
ಇದರೊಂದಿಗೆ ತಿಂಗಳಿಗೆ ಎರಡು ದಿನ ಬ್ಯಾಗ್ ರಹಿತ ದಿನ ಘೋಷಿಸುವುದು ಉತ್ತಮ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ 2020ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ತಮ್ಮ ಬಜೆಟ್ನಲ್ಲೇ ತಿಂಗಳಿನ ಎರಡನೆಯ ಹಾಗೂ ನಾಲ್ಕನೆಯ ಶನಿವಾರ ‘ನೋ ಬ್ಯಾಗ್ ಡೇ’ ಎಂದು ಘೋಷಿಸಿದ್ದರು. ಆಗ ಕೆಲ ಸ್ಕೂಲ್ಗಳಲ್ಲಿ ಅಲ್ಪಸ್ವಲ್ಪ ಮಟ್ಟಿಗೆ ಜಾರಿಯಾಯಿತು. ಆದರೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲೇ ಇಲ್ಲ. ಇದರ ಮಧ್ಯೆಯೇ ಕೊರೋನಾದಿಂದಾಗಿ ಶಾಲೆಗಳಿಗೂ ರಜೆ ಘೋಷಿಸಲಾಯಿತು. ಹೀಗಾಗಿ ನೋ ಬ್ಯಾಗ್ ಡೇ ಎನ್ನುವ ಯೋಜನೆ ಮೂಲೆ ಸೇರಿತ್ತು.
ಈಗ ಜಾರಿಯಾಗಲಿ:
ಇದೀಗ ಕೊರೋನಾ ಕೂಡ ಮುಗಿದಿದೆ. ಶಾಲೆಗಳು ಪುನಾರಂಭಗೊಂಡು ಒಂದು ವಾರ ಕಳೆದಿದೆ. ಅದಕ್ಕಾಗಿ ಈಗ ಮತ್ತೆ ನೋ ಬ್ಯಾಗ್ ಡೇ ಜಾರಿಯಾಗಲಿ. ಈಗ ತಿಂಗಳಿಗೆ ಬರೀ ಎರಡೇ ದಿನ ಮಾಡುವ ಬದಲು ಪ್ರತಿ ಶನಿವಾರ ‘ನೋ ಬ್ಯಾಗ್ ಡೇ’ ಎಂದು ಘೋಷಿಸಬೇಕು. ಆದರೆ ಆಗ ಘೋಷಿಸಿದ್ದ ನೋ ಬ್ಯಾಗ್ ಡೇ ಯೋಜನೆ ಬಗ್ಗೆ ಈಗ ಸರ್ಕಾರ ಚಕಾರ ಎತ್ತುತ್ತಿಲ್ಲ. ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಣ ಪ್ರೇಮಿಗಳು ಹಾಗೂ ಪಾಲಕರ ಒಕ್ಕೊರಲಿನ ಆಗ್ರಹ.
ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ, ಬಿಟಿಎಸ್ ಜತೆಯಲ್ಲೇ ಬೆಂಗಳೂರು ಡಿಸೈನ್ ಫೆಸ್ಟಿವಲ್ ಆಯೋಜನೆ
ಹಿಂದೆ ‘ನೋ ಬ್ಯಾಗ್ ಡೇ’ ಎಂದು ಸರ್ಕಾರ ಘೋಷಿಸಿತ್ತು. ಆಗ ಕೆಲವೆಡೆ ಇದು ಜಾರಿ ಕೂಡ ಆಗಿತ್ತು. ಆದರೆ ಈ ವರ್ಷ ಈ ವಿಷಯದ ಬಗ್ಗೆ ಯಾವುದೇ ಸೂಚನೆಗಳು ಇನ್ನೂ ಇಲಾಖೆಗೆ ಬಂದಿಲ್ಲ. ಬಂದರೆ ಜಾರಿಗೊಳಿಸಲಾಗುವುದು ಅಂತ ಧಾರವಾಡ ಡಿಡಿಪಿಐ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.
ಮಕ್ಕಳ ಪಠ್ಯ ಪುಸ್ತಕದ ಹೊರೆ ಕಡಿಮೆ ಮಾಡಬೇಕು ಎಂಬ ಬೇಡಿಕೆ ಈಗಿನದ್ದಲ್ಲ. ಹಲವು ವರ್ಷಗಳದ್ದು. ಆದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನೇ ಕೈಗೊಳ್ಳುತ್ತಿಲ್ಲ. ಈ ವರ್ಷವಾದರೂ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಇದು ಜಾರಿಯಾಗುವಂತಾಗಬೇಕು ಅಂತ ಶಿಕ್ಷಣ ಪ್ರೇಮಿ ಮಂಜುನಾಥ ಪಾಟೀಲ ಹೇಳಿದ್ದಾರೆ.