ಲಾಕ್‌ಡೌನ್ ಹೇರಿದ್ದರಿಂದ ಎಲ್ಲರಿಗೂ ಈಗ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಆದರೆ, ಒಂದೂವರೆ ವರ್ಷದ ಹಿಂದೆ ಕೇರಳದ ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್ ಶಿಕ್ಷಣ ಸಂಬಂಧ ಕೋರ್ಟ್ ಮೆಟ್ಟಿಲೇರಿ ಜಯಶಾಲಿಯಾದ ಕತೆ ಗೊತ್ತಾ ನಿಮಗೆ?
ಈ ವರ್ಷ ಕೋವೀಡ್ -19 ಸಾಂಕ್ರಾಮಿಕ ಹಿನ್ನೆಲೆ ಆನ್ ಲೈನ್ ಶಿಕ್ಷಣ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೂ ಆನ್‌ಲೈನ್ ಎಜುಕೇಷನ್ ತರಗತಿಗಳು ನಡೆಯುತ್ತಿವೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳ ಮುಂದೆಯೇ ವಿದ್ಯಾರ್ಥಿಗಳು ಕಲಿಯೋದು ಅನಿವಾರ್ಯವಾಗಿದೆ. ಭಾರತವಷ್ಟೇ ಅಲ್ಲ ಇಡೀ ಜಗತ್ತೇ ಈಗ ಆನ್‌ಲೈನ್ ಶಿಕ್ಷಣದ ಮೊರೆ ಹೋಗಿದೆ. ಸಣ್ಣ ಮಕ್ಕಳಿಂದಿಡಿದು ದೊಡ್ಡವರವರೆಗೂ ಈ ವರ್ಷ ಆನ್‌ಲೈನ್ ಶಿಕ್ಷಣ ಸರ್ವೇ ಸಾಮಾನ್ಯವಾಗಿದೆ. ಆದರೆ ಕೊರೊನಾ ಬರುವುದಕ್ಕಿಂತ ಮುಂಚೆಯೇ ಈ ಆನ್‌ಲೈನ್ ಶಿಕ್ಷಣವನ್ನ ಪಡೆಯಲು ಕೇರಳದ ವಿದ್ಯಾರ್ಥಿನಿಯೊಬ್ಬಳು ಕೋರ್ಟ್ ಮೆಟ್ಟಿಲೇರಿ, ತನ್ನ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಿದ್ದಳು.
ಬಡ ಮಕ್ಕಳಿಗೆ ಸಖತ್ ಯೂನಿಫಾರ್ಮ್ ಡಿಸೈನ್ ಮಾಡಿದ ಸಭ್ಯಸಾಚಿ
ಹೌದು, 20 ವರ್ಷದ ಫಾಹೀಮ ಶೆರಿನ್ ಕಳೆದ ವರ್ಷ 2019ರಲ್ಲಿ ಆನ್‌ಲೈನ್ ಶಿಕ್ಷಣದ ಹಕ್ಕನ್ನ ತನ್ನದಾಗಿಸಿಕೊಂಡಿದ್ದರು. ಚೆಲ್ಲನೂರಿನ ಶ್ರೀ ನಾರಾಯಣ ಗುರು ಕಾಲೇಜಿನಲ್ಲಿ ಫಾಹೀಮ ಶೆರಿನ್, ಕಳೆದ ವರ್ಷ 2ನೇ ವರ್ಷದ ಬಿಎ ಸಾಹಿತ್ಯ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ಹಾಸ್ಟೆಲ್‌ನಲ್ಲಿ ನಿಯಮ ಬಾಹಿರವಾಗಿ ಫಾಹೀಮ ಮೊಬೈಲ್ ಬಳಸಿದ ಕಾರಣಕ್ಕೆ ಅವಳನ್ನು ಹಾಸ್ಟೆಲ್‌ನಿಂದ ಹೊರಗಟ್ಟಲಾಗಿತ್ತು. ಇದನ್ನ ಪ್ರಶ್ನಿಸಿ ಫಾಹೀಮ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಳು. ಗೌಪ್ಯತೆ ಹಕ್ಕಿನಡಿಯಲ್ಲಿ ಇಂಟರ್ನೆಟ್ ಹೊಂದುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಹೇಳುವ ಮಹತ್ವದ ತೀರ್ಪು ಹೊರಬೀಳಲು ಫಾಹೀಮ ಕಾರಣರಾಗುತ್ತಾರೆ. ಆನಂತರ ಕೇರಳದಾದ್ಯಂತ ಎಲ್ಲ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಸ್ಟಾರ್ಟ್ ಫೋನ್ ಬಳಸಲು ಅವಕಾಶ ನೀಡಲಾಗುತ್ತದೆ.

ಫಾಹೀಮ ಪರವಾಗಿ ನ್ಯಾಯಾಲಯ ತೀರ್ಪು ನೀಡಿ ಒಂದು ವರ್ಷ ಮತ್ತು ಒಂದು ತಿಂಗಳು ಕಳೆದಿವೆ. ಆದ್ರೀಗ ಜಗತ್ತು ಸ್ವಲ್ಪ ಬದಲಾಗಿದೆ. ಸದ್ಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಂದ್ರೆ ಪ್ರೀಸ್ಕೂಲ್ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಶಿಕ್ಷಣಕ್ಕಾಗಿ ಗ್ಯಾಜೆಟ್ ಮೇಲೆ ಅವಲಂಬಿತರಾಗಿದ್ದಾರೆ. ಕಳೆದ ಮಾರ್ಚ್ ನಲ್ಲಿ ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಕೇರಳದಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚು ವವರೆಗೂ ಫಾಹೀಮ ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಸುತ್ತಿದ್ದರು.
ಸದಾ ತಮ್ಮ ಮಗಳ ಬೆಂಬಲಕ್ಕೆ ನಿಂತಿರುವ ಹಕ್ಸರ್, 2019ರ ಕೋರ್ಟ್ ತೀರ್ಪು ಪ್ರಸ್ತುತ 2020ರ ಪರಿಸ್ಥಿತಿಗೆ ಹೋಲಿಕೆಯಾಗುತ್ತಿದೆ ಅಂತ ಸ್ಮರಿಸಿಕೊಳ್ಳುತ್ತಾರೆ. "ಬಿಕ್ಕಟ್ಟಿನ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಹಠಾತ್ತನೆ ಅವಲಂಬಿಸುವುದಕ್ಕಿಂತ ಹೆಚ್ಚಾಗಿ ಜವಾಬ್ದಾರಿಯುತ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಲು ವಿದ್ಯಾರ್ಥಿಗಳಿಗೆ ಕಲಿಸಬೇಕಾಗಿತ್ತು" ಅಂತಾರೆ ಹಕ್ಸರ್. ಆನ್‌ಲೈನ್ ಶಿಕ್ಷಣವನ್ನು ಪರಿಣಾಮಕಾರಿಯಾಗಿಸಲು ಶಿಕ್ಷಣ ಸಂಸ್ಥೆಗಳು ಸರಿಯಾದ ತಂತ್ರಗಳನ್ನು ಅಳವಡಿಸಿಕೊಂಡಿಲ್ಲ. ಆನ್‌ಲೈನ್‌ನಲ್ಲಿ ಅದೇ ಆಫ್‌ಲೈನ್ ಪಾಠಗಳನ್ನು ಕಲಿಸುತ್ತಿದ್ದೇವೆ. ಆನ್‌ಲೈನ್ ಕಲಿಕೆಗೆ ತಕ್ಕಂತೆ ಯಾವುದನ್ನು ವಿನ್ಯಾಸಗೊಳಿಸಿಲ್ಲ. ವಾಸ್ತವವಾಗಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಯಾವುದೇ ಮಾರ್ಗವಿಲ್ಲ" ಎಂದು ಹಕ್ಸರ್ ಹೇಳುತ್ತಾರೆ.
ನಿವೃತ್ತಿ ಬಳಿಕವೂ ವಿದ್ಯಾದಾನ ಮಾಡುತ್ತಿರುವ ಶಿಕ್ಷಕ
ಆದ್ರೆ ಈಗ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಬಹುಪಾಲು ಪೋಷಕರು 2019 ರ ತೀರ್ಪಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಮಕ್ಕಳಲ್ಲಿ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವ ಅಭ್ಯಾಸವನ್ನು ನಾವು ಎಂದಿಗೂ ಮಾಡಲಿಲ್ಲ. ಇದರ ಪರಿಣಾಮವಾಗಿ, ಇಂದು ಆನ್ ಲೈನ್ ಶಿಕ್ಷಣ ಕಲಿಯಲು ಮಕ್ಕಳನ್ನು ಒತ್ತಾಯಿಸುತ್ತಿದ್ದೇವೆ. ಇದು ಸಮಾಜದ ವ್ಯವಸ್ಥೆ ಮತ್ತು ನೀತಿಗಳ ವೈಫಲ್ಯ ಅನ್ನೋದು ಹಕ್ಸರ್ ಅಭಿಪ್ರಾಯ.
ಹೈಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಕೇರಳದ ಮೂಲೆ ಮೂಲೆಗಳಿಂದ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಫಾಹೀಮ ಹಾಗೂ ಹಕ್ಸರ್‌ರನ್ನು ಸಂಪರ್ಕಿಸಿ ಧನ್ಯವಾದ ತಿಳಿಸಿದ್ದರಂತೆ. ಕೇರಳದ ಎಲ್ಲ ಕಾಲೇಜು ಗಳಲ್ಲಿ ಸ್ಮಾರ್ಟ್ ಪೋನ್ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಆದ್ರೆ ಈ ನಿಯಮ ಬೇರೆ ರಾಜ್ಯಗಳಲ್ಲಿಲ್ಲ ಅಂತ ಬೇಸರ ವ್ಯಕ್ತಪಡಿಸುತ್ತಾರೆ ಹಕ್ಸರ್.
ಅದೇನೆಯಿರಲಿ, ಆನ್‌ಲೈನ್ ಶಿಕ್ಷಣದ ಹಕ್ಕು ಪಡೆಯಲು ಫಾಹೀಮ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಇಷ್ಟವೋ, ಕಷ್ಟವೋ ಆನ್‌ಲೈನ್ ಶಿಕ್ಷಣ ಎಲ್ಲರಿಗೂ ಅನಿವಾರ್ಯ ಎಂಬಂತಾಗಿದೆ.
