Asianet Suvarna News Asianet Suvarna News

ಹೊಸ ಪಠ್ಯಪುಸ್ತಕದ 8ನೇ ತರಗತಿ ಪಾಠದಲ್ಲಿ ಬ್ರಾಹ್ಮಣರ ಅವಹೇಳನ ವಿವಾದ

8ನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣ ಅವಹೇಳನ ವಿವಾದ. ಟಾಪ್‌- ಜಾತಿ ಸಮರ. ಬ್ರಾಹ್ಮಣ ಸ್ತ್ರೀಯರು ಬಡಕಲು ಶರೀರದವರು. ಬ್ರಾಹ್ಮಣರು ಮಡಿವಂತಿಕೆಯವರೆಂದು ಉಲ್ಲೇಖ ಆರೋಪ.

Karnataka Textbook Controversy Brahmin community derogatory in 8th class textbook gow
Author
First Published Aug 12, 2023, 12:45 PM IST

ವಿಶೇಷ ವರದಿ

ಬೆಳ್ತಂಗಡಿ (ಆ.12): ಕರ್ನಾಟಕ ಸರ್ಕಾರ ಇತ್ತೀಚೆಗೆ ಪಠ್ಯಪುಸ್ತಕಗಳನ್ನು ಈ ವರ್ಷದ ಮಟ್ಟಿಗೆ ತಾತ್ಕಾಲಿಕವಾಗಿ ಪರಿಷ್ಕರಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸೇರಿಸಿದ್ದ ಕೆಲವು ಪಾಠಗಳನ್ನು ತೆಗೆದು ಅದರ ಬದಲು ಬೇರೆ ಪಾಠಗಳನ್ನು ಸೇರ್ಪಡೆ ಮಾಡಿದೆ. ಆದರೆ, ಇದೀಗ ಸೇರ್ಪಡೆಯಾದ ಪಾಠಗಳೂ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವಂತಿದೆ ಎಂಬ ಆರೋಪ ಕೇಳಿ ಬಂದಿದೆ.

8ನೇ ತರಗತಿಯ ಕನ್ನಡ ದ್ವಿತೀಯ ಭಾಷೆಯ ಪಠ್ಯದಲ್ಲಿ ವಿಜಯಮಾಲಾ ರಂಗನಾಥ ಬರೆದ ‘ಬ್ಲಡ್‌ ಗ್ರೂಪ್‌’ ಎಂಬ ಪಾಠದಲ್ಲಿ ಜಾತಿ ವ್ಯವಸ್ಥೆಗೆ ಬ್ರಾಹ್ಮಣ ಸಮುದಾಯ ಕಾರಣ ಎಂಬರ್ಥದ ವಿವರಗಳನ್ನು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮೈಸೂರಿನ ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಆಪ್ತ ಸಹಾಯಕ ಮಹೇಶ ಗೋಖಲೆ, ಪಠ್ಯದಲ್ಲಿ ಬ್ರಾಹ್ಮಣ ಸಮುದಾಯವನ್ನು ಅನಾವಶ್ಯಕವಾಗಿ ವ್ಯಂಗ್ಯ ಮಾಡಲಾಗಿದೆ. ಜಾತಿಯ ಹೆಸರು ಹಾಕಿ ಬರೆಯಲಾದ ಪಠ್ಯವನ್ನು ಶಾಲಾ ಮಕ್ಕಳಿಗೆ ಬೋಧಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ.

ಬಳ್ಳಾರಿ: ಅನುಮತಿ ಇಲ್ಲದ ‘ಸತ್ಯಂ ಟಿನಿಟಾಟ್ಸ್‌’ ಶಾಲೆಗೆ ಬೀಗ

ಪಠ್ಯದಲ್ಲಿ ಏನಿದೆ?: ಮಾನವೀಯ ನೆಲೆಗಟ್ಟಿನ ಮೇಲೆ ಸುಂದರ ಸಮಾಜವನ್ನು ನಿರ್ಮಿಸಬೇಕು ಎಂಬ ಆಶಯ ಈ ಪಾಠದಲ್ಲಿದೆ ಎಂದು ಹೇಳುತ್ತಲೇ ಪಾಠದಲ್ಲಿ ಬ್ರಾಹ್ಮಣ ಸಮುದಾಯದ ಸ್ತ್ರೀಯರದ್ದು ಬಡಕಲು ಶರೀರ ಎಂದು ಬಣ್ಣಿಸಲಾಗಿದೆ. ‘ಶ್ರೀನಿವಾಸ ರಾಘವಾಚಾರ್ಯ ಎಂಬ ಶ್ರೋತ್ರಿಯರು ಎರಡೂ ಕೈಯಲ್ಲಿ ಒಟ್ಟು ಎಂಟು ಉಂಗುರಗಳು, ಕತ್ತಿನಲ್ಲಿ ಹುಲಿ ಉಗುರಿನ ಪದಕದ ಸರ, ಕಿವಿಗೆ ಒಂಟಿ ಧರಿಸಿದ್ದಾರೆ. ಮಡಿವಂತಿಕೆಯ ಸಂಪ್ರದಾಯ ಇವರಿಗೆ ರಕ್ತಗತವಾಗಿ ಬಂದಿದೆ’ ಎಂಬ ವಾಕ್ಯಗಳು ಇವೆ.

ಪಾಠದಲ್ಲಿ, ಅವರ ಹೆಂಡತಿ ಆಂಡಾಳಮ್ಮ ವಾಕ್‌ ಮಾಡಲು ಹೋದಾಗ ಹಸು ಹಾಯ್ದ ಪರಿಣಾಮ ಬಿದ್ದು ರಕ್ತ ಸೋರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲಿ ಅವರಿಗೆ ‘ಓ’ ನೆಗೆಟಿವ್‌ ಬ್ಲಡ್‌ ಬೇಕಾಗುತ್ತದೆ. ಎಲ್ಲಿಯೂ ರಕ್ತ ಸಿಗದೇ ಇರುವುದರಿಂದ ಮನೆಗೆಲಸದ ಆಳು ಸಿದ್ಲಿಂಗು ರಕ್ತ ಕೊಡಲು ಮುಂದೆ ಬರುತ್ತಾನೆ. ಆದರೆ, ತಾನು ಅವರ ಮನೆಯ ಆಳು, ಅವರು ದೊಡ್ಡವ್ರು. ಮಡಿಯವರು, ನಾನು ಮಂಕ, ನಾನು ಮಾಂಸ ತಿನ್ನುವವನು ಎಂಬಿತ್ಯಾದಿ ಸಂಶಯದ ಪ್ರಶ್ನೆಗಳನ್ನು ವೈದ್ಯರಲ್ಲಿ ಮುಂದಿಡುತ್ತಾನೆ. ಕೊನೆಗೆ ಆತನ ರಕ್ತ ತೆಗೆದು ರೋಗಿಗೆ ನೀಡಲಾಗುತ್ತದೆ. ಕೊನೆಗೆ ಆಚಾರ್ಯರಿಗೆ ಗೊತ್ತಾಗಿ ಅವರು ದಂಗಾಗುತ್ತಾರೆ. ತಮ್ಮ ಮಗ ಬೇರೆ ಜಾತಿಯವಳನ್ನು ಲಗ್ನ ಮಾಡಿಕೊಂಡ ಎಂಬ ಕಾರಣಕ್ಕೆ ಅಮೆರಿಕದಿಂದ ಬಂದ ಮಗನನ್ನು ಮನೆಗೆ ಕರೆಯಲು ಹಿಂದೇಟು ಹಾಕಿದ್ದರು. ಸಾವಿರಾರು ಜನರಿಗೆ ಉಪನ್ಯಾಸ ಮಾಡುವ ಅವರಿಗೆ ತಮ್ಮ ಎದುರು ಕೈ ಮುಗಿದು ನಿಂತಿದ್ದ ಸಿದ್ಲಿಂಗು ಮನುಷ್ಯತ್ವವನ್ನು ಮನವರಿಕೆ ಮಾಡಿದ್ದ. ಅವನಿಗೆ ಕಣ್ಣಲ್ಲೇ ಕೃತಜ್ಞತೆ ಹೇಳುತ್ತಿರುವಾಗ ಎರಡು ಹನಿ ನೀರು ಅವರ ಕಣ್ಣಲ್ಲಿ ಇಣುಕಿತು ಎಂಬ ವಾಕ್ಯದೊಂದಿಗೆ ಪಾಠ ಮುಕ್ತಾಯಗೊಳ್ಳುತ್ತದೆ.

3ನೇ ಮಗು ಮಾಹಿತಿ ಮುಚ್ಚಿಟ್ಟ ಸರ್ಕಾರಿ ಶಾಲೆ ಶಿಕ್ಷಕ ಕೆಲಸದಿಂದ ಅಮಾನತು!

ಇನ್ನು, ಆರ್ಯರು ಮಧ್ಯ ಏಷ್ಯಾ ಮೂಲದವರು ಎಂಬುದು ಇಂದಿನ ಸಂಶೋಧನೆ, ಅಧ್ಯಯನಗಳಿಂದ ಸುಳ್ಳಾಗಿರುವುದು ಪಠ್ಯ ಪುಸ್ತಕ ತಜ್ಞರಿಗೆ ಇನ್ನೂ ಮನವರಿಕೆಯಾಗದಿರುವುದು ವಿಪರ್ಯಾಸ. 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಇತಿಹಾಸ ಭಾಗ-1, ವೇದ ಕಾಲದ ಸಂಸ್ಕೃತಿ ಎಂಬ ಪಾಠದಲ್ಲಿ ಮಧ್ಯ ಏಷ್ಯಾ ಮೂಲಕ ಆರ್ಯ ಜನಾಂಗದ ಆಗಮನದೊಂದಿಗೆ ಭಾರತದಲ್ಲಿ ಹೊಸ ಸಂಸ್ಕೃತಿಯೊಂದು ಆರಂಭವಾಯಿತು ಎಂಬ ವಿಚಾರ ಮತ್ತೆ ಸೇರಿಸಲಾಗಿದೆ ಎನ್ನುತ್ತಾರೆ ಬರಹಗಾರ ಬಾಲಕೃಷ್ಣ ಸಹಸ್ರಬುದ್ಧ್ಯೆ.

ಇಂತಹದ್ದು ಅಗತ್ಯವಿರಲಿಲ್ಲ: ಪಠ್ಯದಲ್ಲಿ ನೀತಿ ಇದೆ. ಆದರೆ, ಅದನ್ನು ಮಕ್ಕಳಿಗೆ ತಿಳಿಸಲು ಬ್ರಾಹ್ಮಣ ಸಮುದಾಯವೇ ಯಾಕೆ ಬೇಕಾಯಿತು ಎನ್ನುವುದು ಪ್ರಶ್ನೆ. ಮಕ್ಕಳ ಪಠ್ಯ ಪುಸ್ತಕದಲ್ಲಿ ಇಂತಹ ಪಠ್ಯದ ಅಗತ್ಯವಿರಲಿಲ್ಲ. ಹೀಗೆ ಮಾಡಿರುವುದು ಸರಿಯಲ್ಲ.

-ಬಾಲಕೃಷ್ಣ ಸಹಸ್ರಬುದ್ಧ್ಯೆ, ಬರಹಗಾರರು, ಮುಂಡಾಜೆ, ಬೆಳ್ತಂಗಡಿ ತಾಲೂಕು

ಬ್ರಾಹ್ಮಣರನ್ನು ವ್ಯಂಗ್ಯ ಮಾಡಿದ್ದಾರೆ: ಪಠ್ಯದಲ್ಲಿ ಬ್ರಾಹ್ಮಣ ಸಮುದಾಯವನ್ನು ಅನಾವಶ್ಯಕವಾಗಿ ವ್ಯಂಗ್ಯ ಮಾಡಲಾಗಿದೆ. ಜಾತಿಯ ಹೆಸರು ಹಾಕಿ ಬರೆಯಲಾದ ಪಠ್ಯವನ್ನು ಶಾಲಾ ಮಕ್ಕಳಿಗೆ ಬೋಧಿಸುವುದು ಉತ್ತಮ ಬೆಳವಣಿಗೆಯಲ್ಲ.

-ಮಹೇಶ ಗೋಖಲೆ, ಆಪ್ತ ಸಹಾಯಕರು, ಎಡತೊರೆ ಯೋಗಾನಂದೇಶ್ವರ ಸರಸ್ವತಿ ಮಠ, ಮೈಸೂರು

ಇಲ್ಲಿ ಇಂತಹ ಸಂದರ್ಭಕ್ಕೆ ಬ್ರಾಹ್ಮಣ ಸಮುದಾಯದವನ್ನು ಸೇರಿಸಿಕೊಳ್ಳುವ ಅಗತ್ಯವೇನಿತ್ತು. ಸಮಾಜದಲ್ಲಿ ಜಾತಿ ಪದ್ಧತಿಗೆ ಅವರು ಮಾತ್ರ ಕಾರಣರೇ? ಎಂಬ ಆಕ್ಷೇಪವನ್ನು ಅವರು ಮಹೇಶ ಗೋಖಲೆ ವ್ಯಕ್ತಪಡಿಸುತ್ತಾರೆ. ಸುಮಾರು 430 ಶಬ್ದಗಳಿರುವ ಕನ್ನಡ ಪಾಠದಲ್ಲಿ ಸುಮಾರು 20ಕ್ಕೂ ಹೆಚ್ಚು ಬಾರಿ ವಿವಿಧ ಆಂಗ್ಲ (ಆರೇಂಜ್‌, ಗ್ರೂಪ್‌, ಬ್ಲಡ್‌, ಟೆನ್ಶನ್‌ ಇತ್ಯಾದಿ) ಶಬ್ದಗಳನ್ನು ತುರುಕಲಾಗಿರುವುದು ವಿಪರ್ಯಾಸ.

Follow Us:
Download App:
  • android
  • ios