ಮೇ 19 ರಂದು SSLC ಫಲಿತಾಂಶ ಪ್ರಕಟ, ಮಾರ್ಕ್ಸ್ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!
* ಮೇ 19ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ
* ನಪಾಸು ಕಡಿಮೆ ಮಾಡಲು 10% ಕೃಪಾಂಕ
* ಕೆಲವೇ ಅಂಕದಿಂದ ಫೇಲಾಗುವವರಿಗೆ ಶ್ರೀರಕ್ಷೆ
* 3 ವಿಷಯಗಳಿಗೆ ಒಟ್ಟು 10% ಗ್ರೇಸ್ ಮಾರ್ಕ್ಸ್
ಬೆಂಗಳೂರು(ಮೇ.13): ಮೌಲ್ಯಮಾಪನದಲ್ಲಿ ಸಣ್ಣಪುಟ್ಟದೋಷ ಸರಿಪಡಿಸುವುದು ಸೇರಿದಂತೆ ವಿವಿಧ ಕಾರಣಗಳಿಂದ ಈ ಬಾರಿಯ SSLC ಫಲಿತಾಂಶ ಮೇ 19ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ. ಇದೇ ವೇಳೆ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೂ ಸಿಕ್ಕಿದೆ. ಹೌದು ಉತ್ತೀರ್ಣಕ್ಕೆ ಬೆರಳೆಣಿಕೆಯಷ್ಟುಅಂಕಗಳ ಕೊರತೆ ಹೊಂದಿರುವವರಿಗೆ ಈ ಬಾರಿಯೂ ಗರಿಷ್ಠ ಮೂರು ವಿಷಯದಲ್ಲಿ ಶೇ.10ರಷ್ಟು ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಶಿಕ್ಷ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅನುತ್ತೀರ್ಣವಾಗಿರುವ ಯಾವುದಾದರೂ ಮೂರು ವಿಷಯಗಳ ಥಿಯರಿ ಪರೀಕ್ಷೆಯ ಒಟ್ಟು ಅಂಕಗಳಲ್ಲಿನ ಶೇ.10 ಕೃಪಾಂಕಗಳನ್ನು ಅಗತ್ಯವಾರು ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಪಾಸಾಗುವುದಾದರೆ ಮಾತ್ರ ಇದರ ಉಪಯೋಗ ಸಿಗಲಿದೆ.
ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಮೇಲೆ ಹದ್ದಿನ ಕಣ್ಣು
ಉದಾಹರಣೆಗೆ- ಪರೀಕ್ಷೆ ಬರೆದಿರುವ ಆರು ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದು, ಇನ್ನುಳಿದ ಮೂರು ವಿಷಯಗಳಲ್ಲಿ ಅನುತ್ತಿರ್ಣವಾಗಿದ್ದರೆ ಆ ಮೂರು ವಿಷಯಗಳಲ್ಲಿ ಥಿಯರಿ ಪರೀಕ್ಷೆಯ ತಲಾ 80 ಅಂಕದ ಶೇ.10ರಷ್ಟುಅಂದರೆ ಮೂರು ವಿಷಯಗಳಿಂದ 24 ಅಂಕಗಳು ಗ್ರೇಸ್ ಅಂಕಗಳಾಗಿ ದೊರೆಯುತ್ತವೆ. ಕನ್ನಡ ಭಾಷಾ ವಿಷಯಕ್ಕೆ 100 ಅಂಕಗಳಿಗೆ ಥಿಯರಿ ಪರೀಕ್ಷೆ ಇರುವುದರಿಂದ ಶೇ.10 ಅಂದರೆ 10 ಅಂಕಗಳಾಗುತ್ತದೆ. ಹಾಗಾಗಿ ಅನುತ್ತೀರ್ಣ ವಿಷಯಗಳಲ್ಲಿ ಪ್ರಥಮ ಭಾಷೆ ಕನ್ನಡ ಇದ್ದಲ್ಲಿ ಮೂರು ವಿಷಯಗಳ ಕೃಪಾಂಕ ಸಂಖ್ಯೆ ಆಗ 26 ಆಗಲಿದೆ. ಈ ಅಂಕಗಳನ್ನು ಅನುತ್ತೀರ್ಣ ವಿಷಯಗಳಿಗೆ ಹಂಚಿಕೆ ಮಾಡಿ ಪಾಸು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಗ್ರೇಸ್ ಅಂಕಗಳನ್ನು ಯಾವ ರೀತಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
2021ರ ಪೂರಕ ಪರೀಕ್ಷೆಗಳಲ್ಲಿ ಗ್ರೇಸ್ ಅಂಕದಿಂದಾಗಿ ಶೇ.9ರಷ್ಟುವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದರು. ಸುಮಾರು 13 ವಿದ್ಯಾರ್ಥಿಗಳಿಗೆ ಗರಿಷ್ಠ 26 ಅಂಕಗಳನ್ನು ನೀಡಲಾಗಿತ್ತು. ಕಳೆದ ಬಾರಿಯಂತೆ ಈ ಬಾರಿಯೂ ಆರಂಭದಲ್ಲಿ ಸರಿಯಾಗಿ ತರಗತಿಗಳು ನಡೆದಿಲ್ಲ. ಹೀಗಾಗಿ ಮಕ್ಕಳಲ್ಲಿ ಕಲಿಕೆಯ ಕೊರತೆ ಸಹಜ ಎಂದು ಗ್ರೇಸ್ ಅಂಕ ನೀಡಲಾಗುತ್ತಿದೆ. ಬಹುಶಃ ಈ ಬಾರಿಯೂ ಗ್ರೇಸ್ ಅಂಕ ಪಡೆದು ಪಾಸಾಗುವ ಮಕ್ಕಳ ಸಂಖ್ಯೆ ಹೆಚ್ಚೇ ಇರುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಉತ್ತರ ಕನ್ನಡ: ಶಿಥಿಲಾವಸ್ಥೆಯಲ್ಲಿದೆ ಶಾಲಾ ಕೊಠಡಿಗಳು, ಆತಂಕದಲ್ಲಿ ಪೋಷಕರು..!
ಗ್ರೇಸ್ ಅಂಕ ಹೊಸದಲ್ಲ
ಅಧಿಕಾರಿಗಳು ಹೇಳುವ ಪ್ರಕಾರ ಗ್ರೇಸ್ ಅಂಕ ನೀಡಿಕೆ ಹೊಸದೇನಲ್ಲ, ನಿಯಮಾವಳಿಯಲ್ಲೇ ಇದಕ್ಕೆ ಮೊದಲಿಂದಲೂ ಅವಕಾಶವಿದೆ. ಫಲಿತಾಂಶ ಉತ್ತಮಗೊಳಿಸುವ ಕಾರಣದಿಂದ ಗರಿಷ್ಠ ಮೂರು ವಿಷಯಗಳಿಗೆ ಶೇ.5ರಷ್ಟುಗ್ರೇಸ್ ಅಂಕ ನೀಡುವ ಮಾನದಂಡ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ಕೋವಿಡ್‌ನಿಂದ ಶಾಲೆಗಳು ಆರಂಭವಾಗದೆ ಮಕ್ಕಳಿಗೆ ಭೌತಿಕ ತರಗತಿಗಳು ನಡೆಯದೆ ಕಲಿಕೆಯಲ್ಲಿ ಹಿಂದುಳಿದ ಕಾರಣ 2021ರಲ್ಲಿ ಮಂಡಳಿಯು ಇದನ್ನು ಶೇ.10ಕ್ಕೆ ಹೆಚ್ಚಿಸಿತ್ತು. 2021ರ ವಾರ್ಷಿಕ ಪರೀಕ್ಷೆಯನ್ನು ಎರಡೇ ದಿನದಲ್ಲಿ ಮುಗಿಸಿ ಸಾಮೂಹಿಕವಾಗಿ ಎಲ್ಲರನ್ನೂ ಪಾಸ್ ಮಾಡಿದ್ದರಿಂದ ಆಗ ಗ್ರೇಸ್ ಅಂಕದ ಪ್ರಶ್ನೆ ಉದ್ಭವಿಸಿರಲಿಲ್ಲ. ಆದರೆ, ನಂತರ ನಡೆದ ಪೂರಕ ಪರೀಕ್ಷೆಯಲ್ಲಿ ಶೇ.10 ಗ್ರೇಸ್ ಅಂಕಗಳನ್ನು ನೀಡಲಾಗಿತ್ತು.