625ಕ್ಕೆ ಒಂದು ಅಂಕ ಕಡಿಮೆ, ಸಂಸ್ಕೃತ ವಿಷಯ ಮರುಮೌಲ್ಯಮಾಪನ ಮೊರೆ; ಮೇಧಾ ಶೆಟ್ಟಿ!
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಟಾಪರ್ ಬರುವುದಕ್ಕೆ 625ಕ್ಕೆ ಒಂದು ಅಂಕ ಕಡಿಮೆಯಾಗಿ 624 ಅಂಕ ಬಂದಿದೆ. ಆದರೆ, ಒಂದು ಅಂಕ ಕಡಿಮೆಯಾಗಿದ್ದಕ್ಕೆ ಮರು ಮೌಲ್ಯಮಾಪನಕ್ಕೆ ಹಾಕಲು ವಿದ್ಯಾರ್ಥಿನಿ ಮೇಧಾ ಶೆಟ್ಟಿ ಮುಂದಾಗಿದ್ದಾಳೆ.
ಬೆಂಗಳೂರು (ಮೇ 09): ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಗಲಕೋಟೆಯ ಅಂಕಿತಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಆದರೆ, 624 ಅಂಕ ಪಡೆದ 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಆದರೆ, ಈ ಪೈಕಿ 624 ಅಂಕ ಪಡೆದ ಬೆಂಗಳೂರಿನ ಮೇಧಾ ಶೆಟ್ಟಿ ನನಗೆ ಸಂಸ್ಕೃತ ವಿಷಯದಲ್ಲಿ ಒಂದು ಅಂಕ ಕಡಿಮೆಯಾಗಿದ್ದು, ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕುತ್ತೇನೆ ಎಂದು ತಿಳಿಸಿದ್ದಾಳೆ.
ಬೆಂಗಳೂರಿನ ಬನಶಂಕರಿಯಲ್ಲಿರುವ ಹೋಲಿ ಚೈಲ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಮೇಧಾ ಶೆಟ್ಟಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 624 ಅಂಕಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಮತ್ತು ಮನೆಯವರು ವಿದ್ಯಾರ್ಥಿನಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ. ಜೊತೆಗೆ, ವಿದ್ಯಾರ್ಥಿನಿಗೆ ಶುಭಾಶಯ ಕೋರಿದ್ದಾರೆ. ಆದರೆ, ವಿದ್ಯಾರ್ಥಿನಿ ಮಾತ್ರ ಇದರಿಂದ ಸಂತಸಗೊಂಡಿಲ್ಲ. ತಾನು ರಾಜ್ಯಕ್ಕೆ ಟಾಪರ್ ಆಗಬೇಕಿತ್ತು. ನನಗೆ 624 ಅಂಕಗಳು ಬರುವ ಮೂಲಕ ಒಂದು ಅಂಕ ಕಡಿಮೆಯಾಗಿ ದ್ವಿತೋಯ ರ್ಯಾಂಕ್ ಪಡೆದುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ರಾಜ್ಯದ ಫಲಿತಾಂಶ ಶೇ.73ಕ್ಕೆ ಕುಸಿತ: ಬಾಗಲಕೋಟೆ ಅಂಕಿತಾ ಟಾಪರ್
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಮೇಧಾ ಪಿ. ಶೆಟ್ಟಿ, ನಾನು ಪ್ರತಿನಿತ್ಯ ಏನೆಲ್ಲ ಪಾಠ ಮಾಡ್ತಿದ್ರು ಅದನ್ನು ಅದೇ ದಿನ ಓದುಕೊಳ್ಳುತ್ತಿದ್ದೆ. ದಿನಕ್ಕೆ ಇಷ್ಟೇ ಗಂಟೆ ಎಂದು ಮಿತಿ ಹಾಕಿಕೊಂಡು ಓದುತ್ತಿರಲಿಲ್ಲ, ಅಂದಿನ ಪಾಠಗಳನ್ನು ಅದೇ ದಿನ ಪೂರ್ತಿ ಓದಬೇಕು ಅಂತಾ ಓದುತ್ತಿದ್ದೆ. ನನ್ನ ಓದಿನ ಶ್ರಮದಿಂದಾಗ ಉತ್ತಮ ಅಂಕಗಳು ಬಂದಿವೆ. ಶಾಲೆ ಸಪೋರ್ಟ್ ಮತ್ತು ಪೋಷಕರ ಸಪೋರ್ಟ್ ನಿಂದ ರ್ಯಾಂಕ್ ಬಂದಿದೆ. ನಾನು ಮುಂದೆ ಮೆಡಿಕಲ್ ಮಾಡಬೇಕು ಅನ್ನೋ ಆಸೆ ಇದೆ. ಆದರೆ, ನಾನು ನಿರೀಕ್ಷೆ ಮಾಡಿದಂತೆ ಒಂದು ಮಾರ್ಕ್ಸ್ ಕಡಿಮೆ ಬಂದಿದೆ ಎಂದು ಹೇಳಿದರು.
ನನಗೆ ಆರು ವಿಷಯಗಳಲ್ಲಿ ಐದು ಸಬ್ಜೆಕ್ಟ್‌ಗಳಲ್ಲಿ ಶೇ.100 ಅಂಕಗಳು ಬಂದಿವೆ. ಆದರೆ, ಸಂಸ್ಕತ ವಿಷಯದಲ್ಲಿ ಮಾತ್ರ ಒಂದು ಅಂಕ ಕಡಿಮಯಾಗಿದೆ. ನಾನು ಈ ವಿಷಯದಲ್ಲಿಯೂ 100ಕ್ಕೆ 100 ಅಂಕ ಬರುವಂತೆಯೇ ಉತ್ತರ ಬರೆದಿದ್ದೇನೆ. ಆದರೆ, ಹೇಗೆ ಒಂದು ಅಂಕ ಕಡಿಮೆ ಬಂದಿದೆ ಎಂಬುದು ತಿಳಿಯುತ್ತಿಲ್ಲ. ಒಂದು ಅಂಕ ಕಳೆದುಕೊಂಡಿದ್ದರಿಂದ ರಾಜ್ಯಕ್ಕೆ ಟಾಪರ್ ಆಗುವುದರಿಂದ ವಂಚಿತಳಾಗಿದ್ದೇನೆ. ಹೀಗಾಗಿ, ಸಂಸ್ಕೃತ ವಿಷಯದ ಫಲಿತಾಂಶವನ್ನು ಪುನಃ ಮರು ಮೌಲ್ಯಮಾಪನ (Revaluation) ಹಾಕಬೇಕು ಅಂತಾ ಇದ್ದೇನೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ.