ಪ್ರಸಕ್ತ ಸಾಲಿನ (2020-21) ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ದಿನಾಂಕ ನಿಗದಿ ದ್ವಿತೀಯ ಪಿಯುಸಿ ಫಲಿತಾಂಶ ಜು.20ರ ಮಂಗಳವಾರ ಪ್ರಕಟ ಪ್ರತಿ ವರ್ಷದಂತೆ ಅಂಕ ಆಧಾರಿತ ಫಲಿತಾಂಶ

ಬೆಂಗಳೂರು (ಜು.16): ಪ್ರಸಕ್ತ ಸಾಲಿನ (2020-21) ದ್ವಿತೀಯ ಪಿಯುಸಿ ಫಲಿತಾಂಶವನ್ನು ಜು.20ರ ಮಂಗಳವಾರ ಪ್ರಕಟಿಸಲಾಗುವುದು. ಪ್ರತಿ ವರ್ಷದಂತೆ ಅಂಕ ಆಧಾರಿತ ಫಲಿತಾಂಶವನ್ನೇ ನೀಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಸ್ನೇಹಲ್‌ ತಿಳಿಸಿದ್ದಾರೆ.

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಜು.20ರಂದು ಇಲಾಖೆಯ ವೆಬ್‌ಸೈಟ್‌ನಲ್ಲೇ ಫಲಿತಾಂಶ ಪ್ರಕಟಿಸಲಾಗುವುದು. ಪ್ರತಿ ವರ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ನೋಂದಣಿ ಸಂಖ್ಯೆ ಆಧರಿಸಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯುತ್ತಿದ್ದರು. ಆದರೆ, ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯೇ ನಡೆಯದ ಕಾರಣ ವಿದ್ಯಾರ್ಥಿಗಳ ಬಳಿ ಪರೀಕ್ಷಾ ನೋಂದಣಿ ಸಂಖ್ಯೆ ಸದ್ಯಕ್ಕೆ ಇಲ್ಲ. ಆದರೆ, ಪ್ರಸ್ತುತ ಇಲಾಖೆಯು ಪ್ರತಿ ವಿದ್ಯಾರ್ಥಿಗೂ ಪ್ರತ್ಯೇಕ ನೋಂದಣಿ ಸಂಖ್ಯೆ ಸೃಜಿಸಿದ್ದು, ಅದನ್ನು ಇಲಾಖಾ ವೆಬ್‌ಸೈಟ್‌ ಮೂಲಕವೇ ಪಡೆದುಕೊಳ್ಳಲು ಶುಕ್ರವಾರದಿಂದ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ದ್ವಿತೀಯ ಪಿಯು ಫಲಿತಾಂಶ ಮಾರ್ಗಸೂಚಿ ಪ್ರಕಟ: ಅಂಕ ನಿಗದಿ ಹೇಗೆ? ಇಲ್ಲಿದೆ ಮಾಹಿತಿ

ಈ ಸಂಬಂಧ ಇಲಾಖಾ ವೆಬ್‌ಸೈಟ್‌ನಲ್ಲಿ Know registration number ಎಂಬ ಲಿಂಕ್‌ ಅನ್ನು ನೀಡಿ ಅದರ ಮೂಲಕ ಪ್ರತಿ ವಿದ್ಯಾರ್ಥಿಯೂ ತಮ್ಮ ನೋಂದಣಿ ಸಂಖ್ಯೆ ಪಡೆದುಕೊಳ್ಳಬಹುದು. ಈ ಸಂಬಂಧ ವಿದ್ಯಾರ್ಥಿಗಳ ಮೊಬೈಲ್‌, ಇ​​-ಮೇಲ್‌ಗೆ ಕೂಡ ಲಿಂಕ್‌ ಅನ್ನು ಕಳಿಸಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.

ಕೋವಿಡ್‌ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿದ್ದ ಸರ್ಕಾರ, ಆ ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ನೀಡುವುದಾಗಿ ತಿಳಿಸಿತ್ತು.