ದ್ವಿತೀಯ ಪಿಯು ಫಲಿತಾಂಶ ಮಾರ್ಗಸೂಚಿ ಪ್ರಕಟ: ಅಂಕ ನಿಗದಿ ಹೇಗೆ? ಇಲ್ಲಿದೆ ಮಾಹಿತಿ
* ದ್ವಿತೀಯ ಪಿಯು ಫಲಿತಾಂಶ ಮಾರ್ಗಸೂಚಿ ಪ್ರಕಟ
* ಶೈಕ್ಷಣಿಕ ಚಟುವಟಿಕೆ ನಿಗದಿ ಪಡಿಸಿದ ಅಂಕಗಳು ಹಾಗೂ ಕೃಪಾಂಕ ಅಂಕಗಳ ಆಧಾರದ ಫಲಿತಾಂಶ ಪ್ರಕಟ
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ
ಬೆಂಗಳೂರು, (ಜುಲೈ.05): ಕೊವಿಡ್ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆ ರದ್ದಾಗಿದ್ದ ಕಾರಣ ಪಿಯುಸಿ ಫಲಿತಾಂಶ ಘೋಷಣೆಯ ಮಾರ್ಗಸೂಚಿ ಪ್ರಕಟವಾಗಿದೆ.
ಪ್ರಥಮ ಪಿಯುಸಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯು ಅಂಕ ನಿಗದಿಗೊಳಿಸಲು ತೀರ್ಮಾನಿಸಲಾಗಿದೆ.ಇದರೊಂದಿಗೆ ದ್ವಿತೀಯ ಪಿಯುಸಿ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಅತಿ ಶೀಘ್ರದಲ್ಲಿಯೇ ಫಲಿತಾಂಶ ಘೋಷಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ದ್ವಿತೀಯ PUC ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರ
ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ. ವಿದ್ಯಾರ್ಥಿಯ ಪ್ರತಿಭೆಗೆ ಅನುಗುಣವಾಗಿ ಫಲಿತಾಂಶಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಒಂದು ವೇಳೆ ಘೋಷಿತ ಫಲಿತಾಂಶದಿಂದ ಪಡೆದ ಅಂಕಗಳು ತೃಪ್ತಿಕರವೆನಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಇಲ್ಲದೇ ರಿಪೀಟರ್ಸ್ ಪಾಸ್
ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ. ಶೇ.35ರಷ್ಟು ಅಂಕ ನೀಡಿ ಎಲ್ಲ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ತೇರ್ಗಡೆ ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶೇ.35 ರ ಜೊತೆ ಶೇ.5 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಆದರೆ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಅಗಸ್ಟ್ 31ರೊಳಗೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಸೆಪ್ಟೆಂಬರ್ 20ರೊಳಗೆ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಸೂಚನೆ ನೀಡಿದೆ.